ಕುಮಟಾ: ಸುಮಾರು ೧೫೦ ವರ್ಷ ಹಳೆಯದಾದ ಪಟ್ಟಣದ ಹಳೆ ಹೆರವಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ, ಕಟ್ಟಡದ ಸ್ಥಿತಿ-ಗತಿಗಳನ್ನು ಪರಿಶೀಲಿಸಿ, ಶಾಲೆಯ ಸಂಪೂರ್ಣ ದುರಸ್ತಿ ಹಾಗೂ ಸುಣ್ಣಬಣ್ಣ ಮಾಡಿಸಿಕೊಡುವುದಾಗಿ ತಿಳಿಸಿದರು.
ಶಾಲೆಯ ಶತಮಾನೋತ್ತರ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ವಿ.ಎಂ. ಗೋಳಿ ಸಮಸ್ಯೆ ವಿವರಿಸಿ, ಹಳೆ ಹೆರವಟ್ಟಾದ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ೧೫೦ ವರ್ಷಗಳನ್ನು ಪೂರೈಸಿ, ೧೫೧ನೇ ವರ್ಷಕ್ಕೆ ಕಾಲಿಟ್ಟಿದೆ. ಶಾಲೆಯ ಶತಮಾನೋತ್ತರ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಶಾಲೆಯ ಕಟ್ಟಡ ಹಳೆಯದ್ದಾಗಿದ್ದರಿಂದ ದುರಸ್ತಿ ಅನಿವಾರ್ಯವಿದೆ. ಕಟ್ಟಡದ ಮೇಲ್ಚಾವಣಿ ಹಂಚಿನದ್ದಾಗಿದ್ದರಿಂದ ಕೆಲವೆಡೆ ರೀಪು, ಪಕಾಸು ಜೀರ್ಣಗೊಂಡಿದೆ. ಸಂಪೂರ್ಣ ಮೇಲ್ಚಾವಣಿಯ ದುರಸ್ತಿಯಾಗಬೇಕು. ಇಲೆಕ್ಟ್ರಿಕ್ ವೈರಿಂಗ್ ಬದಲಾವಣೆ ಮಾಡಬೇಕು. ಇಡೀ ಶಾಲಾ ಕಟ್ಟಡಕ್ಕೆ ಪೇಂಟಿಂಗ್ ಆಗಬೇಕಿದೆ ಎಂದು ಶಾಸಕ ದಿನಕರ ಶೆಟ್ಟ ಅವರಲ್ಲಿ ವಿನಂತಿಸಿದರು.ಶಾಲೆಯ ಎಲ್ಲ ತರಗತಿಗಳಿಗೆ ತೆರಳಿ ವೀಕ್ಷಿಸಿದ ಶಾಸಕ ದಿನಕರ ಶೆಟ್ಟಿ, ಶಾಲಾ ಕಟ್ಟಡದ ಸಂಪೂರ್ಣ ದುರಸ್ತಿ ಮತ್ತು ಪೇಂಟಿಂಗ್ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು. ಅಲ್ಲದೇ ಶಾಲಾ ಅಡುಗೆ ಕೋಣೆ ವೀಕ್ಷಿಸಿದ ಸಂದರ್ಭದಲ್ಲಿ ಶಾಸಕರು, ಇದರ ನವೀಕರಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿನಾಯಕ ವೈದ್ಯ ಅವರಿಗೆ ಸೂಚಿಸಿದರು. ಶಾಲಾ ಕಟ್ಟಡದ ಮೇಲೆ ಅಲ್ಲಲ್ಲಿ ಬಾಗಿರುವ ಮತ್ತು ಅಪಾಯಕಾರಿಯಾದ ಬೃಹದಾಕಾರದ ಮರಗಳ ರೆಂಬೆ, ಕೊಂಬೆ ಕಡಿದು ಶಾಲಾ ಕಟ್ಟಡಕ್ಕೆ ಮತ್ತು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಪ್ರೀತಿ ಪ್ರಶಾಂತ ಬೋರಗಾಂವ್ಕರ್, ಮುಖ್ಯ ಶಿಕ್ಷಕ ಲಕ್ಷ್ಮಣ ಬಾಡಕರ್, ಪುರಸಭೆ ನಿಕಟಪೂರ್ವ ಸದಸ್ಯ ಸೂರ್ಯಕಾಂತ ಗೌಡ, ಹಳೆಯ ವಿದ್ಯಾರ್ಥಿಗಳಾದ ಗಜಾನನ ಕಿಣಿ, ರಂಗನಾಥ ಪ್ರಭು, ಗಜಾನನ ನಾಯ್ಕ, ಅಜಿತ ಭಟ್, ವಿಠ್ಠಲ ಶಾನಭಾಗ, ದಾಮೋದರ ನಾಯ್ಕ, ಭೂಮಿಕಾ ನಾಯ್ಕ, ಶಕುಂತಲಾ ಗೌಡ, ಮಾಲಾ ನಾಯ್ಕ, ವಿಜಯ ನಾಯ್ಕ ಇತರರು ಇದ್ದರು.