ಸಾರಾಂಶ
ಹುಬ್ಬಳ್ಳಿ: ವಿಪರೀತ ಎನ್ನುವಷ್ಟರ ಮಟ್ಟಿಗೆ ಆಸ್ತಿಕರ ಹೆಚ್ಚಿಸಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ತನ್ನ ನಿಲುವು ಪ್ರಕಟಿಸಲು ಏ. 21ರ ವರೆಗೆ ಗಡುವನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೀಡಿದೆ. 21ರ ವರೆಗೆ ಪಾಲಿಕೆ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾಯ್ದು ನೋಡಿಕೊಂಡು ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸಲು ಸಂಸ್ಥೆ ನಿರ್ಣಯಿಸಿದೆ.
ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಸಂಜೆ ಸೇರಿದ್ದ ಉದ್ಯಮಿಗಳು, ಸಾರ್ವಜನಿಕ ಸಂಘಟನೆಗಳ ಪದಾಧಿಕಾರಿಗಳು ಸುದೀರ್ಘವಾಗಿ ಚರ್ಚೆ ನಡೆಸಿದರು. ಕಳೆದ 2 ದಿನದ ಹಿಂದೆ ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗಿದೆ. ಪಾಲಿಕೆಯ ಆಸ್ತಿಕರವನ್ನು ಹೆಚ್ಚಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಈಗಾಗಲೇ ಅವರು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹುಬ್ಬಳ್ಳಿ- ಧಾರವಾಡ ಬಂದ್ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ ಎಂಬುದನ್ನು ಸಭೆಯಲ್ಲಿ ನೆನಪಿಸಲಾಯಿತು. ಅಂದಿನ ಸಭೆಯ ನಿರ್ಣಯದಂತೆ ಕೆಸಿಸಿಐ ಆಸ್ತಿ ತೆರಿಗೆ ಪಾವತಿದಾರರ ಕ್ರಿಯಾ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯ ನೇತೃತ್ವದಲ್ಲೇ ನಿರ್ಣಯ ಕೈಗೊಳ್ಳಲಾಗಿದೆ.ಡಿ.ಎಂ. ಶಾನಬಾಗ, ಪಾಲಿಕೆಯವರು ಯಾವ ಆಸ್ತಿ ತೆರಿಗೆದಾರರನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ತೆರಿಗೆ ಹೆಚ್ಚಳ ಮಾಡಿದ್ದಾರೆ. ಯುಜಿಡಿ ಇಲ್ಲದ ಪ್ರದೇಶದಲ್ಲೂ ಯುಜಿಡಿ ತೆರಿಗೆ ಹಾಕಿದ್ದಾರೆ. ಎಸ್‌ಡಬ್ಲ್ಯುಎಂ ಬಳಕೆದಾರರ ಕರ ಅತೀ ಹೆಚ್ಚು ಮಾಡಿದ್ದಾರೆ. ಖಾಲಿ ಜಾಗಕ್ಕೂ ತೆರಿಗೆ ಹಾಕಿದ್ದಾರೆ. ಅದನ್ನು ತೆಗೆದು ಹಾಕಬೇಕು. ಮಾರುಕಟ್ಟೆ ದರ ಮರು ಮೌಲ್ಯಮಾಪನ ಮಾಡಬೇಕು ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಅವರು, ನಾವು ಆಸ್ತಿ ತೆರಿಗೆ ಚಲನ್ ಕೇಳುತ್ತಿರುವುದೇ ತಪ್ಪು. ಕೆಸಿಸಿಐ ಆಸ್ತಿ ತೆರಿಗೆ ಪಾವತಿದಾರರ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಮಟ್ಟದಲ್ಲಿ ಪರಿಹರಿಸಿಕೊಳ್ಳಲು ಆಸ್ತಿ ತೆರಿಗೆ ಸಲಹೆಗಾರರ ವಿಂಗ್ ಸ್ಥಾಪಿಸಬೇಕು. ಆಸ್ತಿಯ ಮೌಲ್ಯ ನಿಷ್ಕರ್ಷ ಮಾಡುವವರು ಯಾರು? ತೆರಿಗೆ ಹೆಚ್ಚಳ ಎಷ್ಟು ವರ್ಷ ಮಾಡುತ್ತಾರೆಂಬುದಕ್ಕೆ ಮಿತಿ ಇಲ್ಲವಾಗಿದೆ. ಕಾರಣ ಸ್ವಯಂ ಆಸ್ತಿ ಘೋಷಣೆ ಉಳಿಸಿಕೊಳ್ಳಬೇಕು. ಆಸ್ತಿ ತೆರಿಗೆ ಮತ್ತು ಕಸದ ನಿರ್ವಹಣೆ ಕರ ಹಾಕುತ್ತಿರುವುದು ತಪ್ಪು. ತೆರಿಗೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ಮುಖೇಶ, ಕಟ್ಟಡದ ಸಿಸಿ ಇಲ್ಲದಿದ್ದರೂ ತೆರಿಗೆ ಹಾಕುತ್ತಿದ್ದಾರೆ. ಎಲ್ಲ ಜನಪ್ರತಿನಿಧಿಗಳು, ಪಾಲಿಕೆ ಆಯುಕ್ತರು, ಮಹಾಪೌರರನ್ನು ಕೆಸಿಸಿಐಗೆ ಆಹ್ವಾನಿಸಿ, ಅವರೊಂದಿಗೆ ಆಸ್ತಿ ತೆರಿಗೆದಾರರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಕೊನೆಗೆ ಪಾಲಿಕೆಯು ಆಸ್ತಿ ತೆರಿಗೆದಾರರ ಹಿತಾಸಕ್ತಿ ಪರಿಗಣಿಸಿ, ಅವರಿಗೆ ಅನುಕೂಲವಾಗುವ ಪ್ರಯೋಜನಕಾರಿ ಪರಿಹಾರಗಳನ್ನು ಏ.21ರೊಳಗೆ ಕಂಡುಕೊಳ್ಳಬೇಕು. ಇಲ್ಲದಿದ್ದಲ್ಲಿ ಒಟ್ಟಾಗಿ ಮತ್ತೊಮ್ಮೆ ಸೇರಿ ಚರ್ಚಿಸಿ ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸೋಣ ಎಂದು ನಿರ್ಧರಿಸಿತು.ಈ ಸಂದರ್ಭದಲ್ಲಿ ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಮಾಜಿ ಅಧ್ಯಕ್ಷರಾದ ರಮೇಶ ಪಾಟೀಲ, ವಿನಯ ಜವಳಿ, ಗೌರವ ಕಾರ್ಯದರ್ಶಿ ರವೀಂದ್ರ ಬಾಳಿಗಾರ, ಗೌರವ ಜಂಟಿ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಪಾಲಿಕೆ ಮಾಜಿ ಸದಸ್ಯ, ಲಕ್ಷ್ಮಣ ಉಪ್ಪಾರ, ವೀರಣ್ಣ ಕಲ್ಲೂರ, ಚನ್ನವೀರ ಮುಂಗರವಾಡಿ, ಪ್ರಕಾಶ ರಾವ್, ಮಲ್ಲಿಕಾರ್ಜುನ ಕಳಸರಾಯ, ಸತೀಶ ಮೆಹರವಾಡೆ, ವಿಜಯ ಭಾರತಿ, ಶಾಂತರಾಜ ಪೋಳ, ನಾಗರಾಜ ಯಲಿಗಾರ, ಅಶ್ವಿನ ಕೋತಂಬ್ರಿ, ದಿನೇಶ ಮಹಾಜನ, ಬಾಬುರಾವ್ ಇತರರಿದ್ದರು.