ಸಾರಾಂಶ
ಗೋಕರ್ಣ: ಜ್ಯೋತಿಷ್ಯ ಪರಿಪೂರ್ಣ ವಿಜ್ಞಾನ. ಆಧುನಿಕ ವಿಜ್ಞಾನ ಇದನ್ನು ಒಪ್ಪಿಕೊಳ್ಳದಿದ್ದರೂ, ನಮ್ಮ ಪರಂಪರೆಯಲ್ಲಿ ಇದನ್ನು ನಿರೂಪಿಸುವ ಜ್ಞಾನ ಅಡಕವಾಗಿವೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು, ಸಾಗರ ಮಂಡಲದ ಕೋಗೋಡು, ಗೋಳಗೋಡು, ಮರಗುಡಿ, ಆವಿನಳ್ಳಿ ಮತ್ತು ಇಕ್ಕೇರಿ ವಲಯಗಳ ಭಿಕ್ಷಾಸೇವೆ ಸ್ವೀಕರಿಸಿ ''''ಕಾಲ'''' ಸರಣಿಯ ಪ್ರವಚನ ನಡೆಸಿಕೊಟ್ಟರು.ಭೂಮಿಯಲ್ಲಿ ನಿಂತು ನನ್ನ ಸುತ್ತಲೂ ಏನು ಕಾಣುತ್ತದೆ, ಘಟಿಸುತ್ತವೆ ಎಂದು ತಿಳಿದುಕೊಳ್ಳುವ ಮೂಲಕ ಕಾಲದ ಭಾಷೆಯನ್ನು ತಿಳಿದುಕೊಳ್ಳಬಹುದು. ಚಂದ್ರ ಗ್ರಹ ಎಂದು ಜ್ಯೋತಿಷ್ಯ ಹೇಳಿದರೆ, ಉಪಗ್ರಹ ಎಂದು ವೈಜ್ಞಾನಿಕ ಪರಿಭಾಷೆ ಹೇಳುತ್ತದೆ. ಆದರೆ ಚಂದ್ರ ನಮ್ಮ ಬದುಕಿನ ಮೇಲೆ ನೇರ ಪ್ರಭಾವ ಬೀರುವುದರಿಂದ ಗ್ರಹ ಎಂದೇ ಜ್ಯೋತಿಷ್ಯದಲ್ಲಿ ಉಲ್ಲೇಖವಿದೆ ಎಂದರು. ಆಯಾ ರಾಶಿಗಳಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತದೆ. ಸ್ವಕ್ಷೇತ್ರದಲ್ಲಿ ಆಯಾ ಗ್ರಹಗಳಿಗೆ ಬಲ ಹೆಚ್ಚು. ಮಿತ್ರಕ್ಷೇತ್ರಗಳಲ್ಲಿ ಬಂದರೆ ಸ್ವಲ್ಪ ಬಲವಿದೆ. ಆದರೆ ಶತ್ರುಮನೆಗಳಲ್ಲಿ ಬಂದರೆ ಫಲ ಕಡಿಮೆ ಎಂದು ವಿಶ್ಲೇಷಿಸಿದರು.
ಇಡೀ ೩೬೦ ಡಿಗ್ರಿ ಪರಿಧಿಯನ್ನು ೧೨ ವಿಭಾಗ ಮಾಡಿದರೆ ತಲಾ ೩೦ ಡಿಗ್ರಿ ಆಗುತ್ತದೆ. ಅದು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳು ಎನಿಸುತ್ತವೆ. ಆಯಾ ಗ್ರಹಗಳು ಬೇರೆ ಬೇರೆ ರಾಶಿಯಲ್ಲಿ ನಿಂತಾಗ ಬೇರೆ ಬೇರೆ ಫಲಗಳನ್ನು ನೀಡುತ್ತದೆ. ಇಂಗ್ಲಿಷ್‌ನಲ್ಲಿ ಬಳಸುವ ''''ಪ್ಲಾನೆಟ್'''' ಎಂಬ ಶಬ್ದ ಕನ್ನಡದಲ್ಲಿ ಬಳಕೆಯಲ್ಲಿರುವ ''''''''ಗ್ರಹ''''''''ಕ್ಕೆ ಪರ‍್ಯಾಯವಲ್ಲ. ವಾಸ್ತವವಾಗಿ ನಮ್ಮ ಮೇಲೆ ಪ್ರಭಾವ ಬೀರುವ ಆಕಾಶಕಾಯಗಳೇ ಗ್ರಹಗಳು. ಆಧುನಿಕ ವಿಜ್ಞಾನದ ಪರಿಭಾಷೆಯಲ್ಲಿರುವ ''''''''ಪ್ಲಾನೆಟ್'''''''' ಎಂಬ ಪದಕ್ಕೆ ಇದು ಸಮಾನವಲ್ಲ ಎಂದು ಪ್ರತಿಪಾದಿಸಿದರು. ಜ್ಯೋತಿಷ್ಯದ ಬಗ್ಗೆ ಕೆಲ ಅಪನಂಬಿಕೆಗಳಿದ್ದು, ಮೂಢನಂಬಿಕೆ ಎನ್ನಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರಗಳಿರುವುದೇ ಗ್ರಹಗಳ ಆಧಾರದಲ್ಲಿ. ಗ್ರಹ, ನಕ್ಷತ್ರಗಳ ನಡುವಿನ ವ್ಯತ್ಯಾಸವೇ ಗೊತ್ತಿಲ್ಲದಿದ್ದರೆ, ಅದು ಹೇಗೆ ಸರಿಯಾಗಬಹುದು ಎಂಬ ಪ್ರಶ್ನೆಗಳು ಉದ್ಭವಿಸಬಹುದು ಎಂದರು.ಕಾಲ ಎಂದೂ ಕಠೋರವಲ್ಲ; ಕರುಣಾಮಯಿ. ಕಾಲದ ಭಾಷೆಯೇ ಗ್ರಹ, ನಕ್ಷತ್ರ, ರಾಶಿಗಳು. ಇವುಗಳ ಚಲನೆಯನ್ನು ಅರ್ಥ ಮಾಡಿಕೊಂಡರೆ ಎದುರಾಗುವ ಸಂಕಷ್ಟಗಳನ್ನು ಬಗೆಹರಿಸಿಕೊಳ್ಳಬಹುದು. ವರ್ಣಾಶ್ರಮ ಧರ್ಮ ಗ್ರಹಗಳಲ್ಲೂ ಕಾಣಬಹುದು. ಅಂತೆಯೇ ಲಿಂಗ ವರ್ಗೀಕರಣವನ್ನೂ ಮಾಡಬಹುದು. ಶುಭ- ಅಶುಭ ಗ್ರಹಗಳ ವರ್ಗೀಕರಣವನ್ನೂ ಮಾಡಬಹುದು ಎಂದು ವಿಶ್ಲೇಷಿಸಿದರು. ಬುಧ, ಗುರು, ಶುಕ್ರ ಶುಭಗ್ರಹಗಳಾದರೆ, ರವಿ, ಕುಜ, ಶನಿ ಅಶುಭಗ್ರಹಗಳು. ಗುರು ಪರಮಶುಭ ಗ್ರಹ ಎಂದು ಬಣ್ಣಿಸಿದರು.
ಗ್ರಹಗಳಲ್ಲೂ ಸತ್ವಗುಣ, ರಜೋಗುಣ, ತಮೋಗುಣ ಪ್ರಧಾನ ಗ್ರಹಗಳಿವೆ. ರವಿ, ಚಂದ್ರ, ಗುರು ಸತ್ವಗುಣ ಸಂಪನ್ನ ಗ್ರಹಗಳಾದರೆ, ಬುಧ ಹಾಗೂ ಶುಕ್ರ ರಜೋಗುಣ ಪ್ರಧಾನವಾಗಿರುವ ಗ್ರಹಗಳು. ಕುಜ ಹಾಗೂ ಶನಿ ತಮೋಗುಣ ಪ್ರಧಾನ ಗ್ರಹಗಳು ಎಂದು ವಿವರಿಸಿದರು.ದೈಹಿಕವಾಗಿ ಗಣಪತಿ ಕುಪ್ಪಯ್ಯ ಹೆಗಡೆ ಅವರು ಕೀರ್ತಿಶೇಷರಾಗಿದ್ದರೂ, ಅವರ ಹೆಸರು ಸದಾ ಅಚ್ಚಳಿಯದೇ ಉಳಿಯುವಂಥದ್ದು. ಅವರ ವಿದ್ಯೆಯ ಜತೆಗೆ ಅವರ ಸಮರ್ಪಣೆ, ನಿಷ್ಠೆ ಅವರಿಗೆ ಶಾಶ್ವತ ಹೆಸರು ತಂದುಕೊಟ್ಟಿದೆ. ಇಡೀ ಸಮಾಜ ದೃಕ್ ಸಿದ್ಧಾಂತದ ಕಡೆಗೆ ವಾಲುತ್ತಿದ್ದ ಸಂದರ್ಭದಲ್ಲಿ ದೊಡ್ಡಗುರುಗಳು ದೂರದೃಷ್ಟಿಯಿಂದ, ಪರಂಪರೆ ಉಳಿಸುವ ದೃಷ್ಟಿಯಿಂದ ಸೂರ್ಯಸಿದ್ಧಾಂತದ ಧಾರ್ಮಿಕ ಪಂಚಾಂಗ ಆರಂಭಿಸಿದರು. ಇದು ಮುನ್ನಡೆಯುವಲ್ಲಿ ಗ.ಕು. ಹೆಗಡೆ ಅವರ ಸೇವೆ ಅನನ್ಯ ಎಂದು ಬಣ್ಣಿಸಿದರು.ಸೂರ್ಯ ಸಿದ್ಧಾಂತವನ್ನು ಪರಿಷ್ಕರಿಸಿಕೊಂಡು, ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಭಿನ್ನಮಾರ್ಗ ತುಳಿಯಬಾರದು ಎಂದು ಸೂಚಿಸಿದರು.
ಧಾರ್ಮಿಕ ಪಂಚಾಂಗ ಸಮಿತಿ ಸಂಸ್ಥಾಪನಾ ಕಾರ್ಯದರ್ಶಿ ಗಣಪತಿ ಕುಪ್ಪಯ್ಯ ಹೆಗಡೆ ಅವರ ವ್ಯಕ್ತಿತ್ವವನ್ನು ಅವರ ಪುತ್ರ ಹಾಗೂ ಜ್ಯೋತಿಷ್ಯ ವಿದ್ವಾನ್ ಗೋಪಾಲಕೃಷ್ಣ ಜಿ. ಹೆಗಡೆ ಅನಾವರಣಗೊಳಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ, ಮಹಾಮಂಡಲದ ಪದಾಧಿಕಾರಿಗಳಾದ ಕೇಶವ ಪ್ರಕಾಶ್ ಎಂ., ರುಕ್ಮಾವತಿ ರಾಮಚಂದ್ರ, ಸಾಗರ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರ್, ಕಾರ್ಯದರ್ಶಿ ಶ್ರೀನಾಥ ಸಾರಂಗ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಉಪಸ್ಥಿತರಿದ್ದರು. ಪ್ರಶಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು.