ಸಾರಾಂಶ
ಅಪ್ಪಾರಾವ್ ಸೌದಿ
ಕನ್ನಡಪ್ರಭ ವಾರ್ತೆ ಬೀದರ್ಕಲ್ಯಾಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳು ಬೀದರ್ ಜಿಲ್ಲೆಗೆ ಬಂಪರ್ ಕೊಡುಗೆ ಸಿಕ್ಕಿದ್ದು, ಪ್ರಜಾ ಸೌಧದ ಹೆಸರಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣ, ಬೀದರ್ ನಗರಸಭೆಯನ್ನು ನಗರ ಪಾಲಿಕೆಯನ್ನಾಗಿಸುವುದು ಬೀದರ್ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಸಾವಿರಾರು ಕೋಟಿ ರು. ಅನುದಾನ. ಅಲ್ಲದೆ ದೇವ ದೇವ ವನ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಹೀಗೆ ಅನೇಕವುಗಳಿಗೆ ಅನುದಾನ ಬಿಡುಗಡೆ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ಅಂಗೀಕರಿಸಿದೆ.
ಬೀದರ್‌ನ ಜಿಲ್ಲಾ ಸಂಕೀರ್ಣಕ್ಕೆ ಅಂತಿಮ ಮೊಹರು ಬಿದ್ದಂತಾಗಿದ್ದು, ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ 1.2ಲಕ್ಷ ಚದರ ಅಡಿಯಲ್ಲಿ ಮೂರು ಅಂತಸ್ತಿನ ಬೃಹತ್ ಕಟ್ಟಡದ ಪ್ರಜಾ ಸೌಧವನ್ನು 59.8ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಬೀದರ್ ಜಿಲ್ಲಾ ಸಂಕೀರ್ಣಕ್ಕೆ ‘ಪ್ರಜಾ ಸೌಧ’ ಎಂಬ ಹೆಸರನ್ನಿಟ್ಟು ನೆಲಮಹಡಿ, ಮೊದಲ ಮಹಡಿ, ಎರಡನೇ ಮಹಡಿ ಹಾಗೂ ಮೂರನೇ ಮಹಡಿ ಅಲ್ಲದೆ ಟೆರೆಸ್, ಪಾರ್ಕಿಂಗ್ ಸಿವಿಲ್ ಕಾಮಗಾರಿಗಳೊಂದಿಗೆ ಪೀಠೋಪಕರಣಗಳು, ಮೂಲಭೂತ ಸೌಲಭ್ಯಗಳು ಸೇರಿದಂತೆ 59.8ಕೋಟಿ ರು.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವದರ ಜೊತೆಗೆ ಈ ಹಿಂದೆ 2014 ಜನವರಿ 24ರಂದು ಅಂದಿನ ಸರ್ಕಾರ 48.28ಕೋಟಿ ರು.ಗಳಿಗೆ ನೀಡಿದ್ದ ಆಡಳಿತಾತ್ಮಕ ಅನುಮೋದನೆಯ ಆದೇಶವನ್ನು ಹಿಂಪಡೆದಿದೆ.
ಬೀದರ್ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿ ಮೇಲ್ದರ್ಜಗೇರಿಸುವ ನಿರ್ಧಾರವನ್ನು ಬೀದರ್ ಮಹಾನಗರ ಪಾಲಿಕೆಗೆ 9ಗ್ರಾಮ ಪಂಚಾಯತ್‌ಗಳ 32 ಗ್ರಾಮಗಳನ್ನು ಸೇರ್ಪಡೆ ಮಾಡಲಾಗುವದು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅರಣ್ಯ ಹಾಗೂ ಪರಿಸರ ಖಾತೆಯ ಸಚಿವರೂ ಆಗಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳಿಗೆ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ತಮ್ಮದೇ ಇಲಾಖೆಯ ಯೋಜನೆಗಳಿಗೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಪೌರಾಡಳಿತ ಸಚಿವ ರಹೀಮ್ ಖಾನ್ ಮುಂದಿದ್ದ ಬೀದರ್ ಮಹಾನಗರ ಪಾಲಿಕೆಯ ಸಮಸ್ಯೆ ಬಗೆಹರಿದಂತಾಗಿದೆ.
ಬೀದರ್ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವ ವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳನ್ನು 15 ಕೋಟಿ ರು. ಕೆಕೆಆರ್‌ಡಿಬಿ ಅನುದಾನದಲ್ಲಿ ಅನುಷ್ಠಾನಗೊಳಿಸಲು ಹಾಗೂ ಬೀದರ್ ತಾಲೂಕಿನ ಶಹಾಪೂರ ಮೀಸಲು ಅರಣ್ಯ ಪ್ರದೇಶದಲ್ಲಿನ ಸಚಿವ ಸಂಪುಟ ಸಭೆ ದೇವ ದೇವ ವನ ಟ್ರೀ ಪಾರ್ಕ್‌ನಲ್ಲಿ ಪರಿಸರ ಪ್ರವಾಸೋದ್ಯಮ ಹಾಗೂ ಸಂರಕ್ಷಣಾ ಕಾರ್ಯಕ್ರಮಗಳನ್ನು ಕೈಗೊಳ್ಳಲು 16.2 ಕೋಟಿ ರು.ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.ರಾಜ್ಯ ಸರ್ಕಾರ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ಎಲ್ಲ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು 7, 200 ಕೋಟಿ ರು. ಅಂದಾಜು ವೆಚ್ಚ ಮಾಡಲು ನಿರ್ಧರಿಸಿದ್ದು ಇದರಲ್ಲಿ ಕೇಂದ್ರ ಸರ್ಕಾರ ಅರ್ಧ ಅನುದಾನ ನೀಡುವಂತೆ ಕೋರಿ ಪತ್ರ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.