16ಕ್ಕೆ ಬಸ್ ಡಿಪೋಗೆ ಆಗ್ರಹಿಸಿ ಪಾದಯಾತ್ರೆ

| Published : Dec 13 2024, 12:47 AM IST

ಸಾರಾಂಶ

ಕೆಎಸ್‍ಆರ್ ಟಿಸಿ ಡಿಪೋ ನಿರ್ಮಾಣಕ್ಕೆ ಆಗ್ರಹಿಸಿ ಜಗಳೂರಿನಿಂದ ಡಿ.16 ರಂದು ಸೋಮವಾರ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಪಾದಯಾತ್ರೆ ಹಮ್ಮಿಕೊಂಡು ದಾವಣಗೆರೆ ಕೆಎಸ್‍ಆರ್ಟಿಸಿ ಕಚೇರಿಗೆ ತೆರಳಿ ಡಿ.17 ರಂದು ಮುತ್ತಿಗೆ ಹಾಕಲಾಗುವುದು ಎಂದು ಕರನಾಡ ನವ ನಿರ್ಮಾಣವೇದಿಕೆ ರಾಜ್ಯಾಧ್ಯಕ್ಷ ಎಚ್.ಎಂ. ಹೊಳೆ ಮಹಾಲಿಂಗಪ್ಪ ಹೇಳಿದರು.

ಕನ್ನಡಪ್ರಭವಾರ್ತೆ ಜಗಳೂರು

ಕೆಎಸ್‍ಆರ್ ಟಿಸಿ ಡಿಪೋ ನಿರ್ಮಾಣಕ್ಕೆ ಆಗ್ರಹಿಸಿ ಜಗಳೂರಿನಿಂದ ಡಿ.16 ರಂದು ಸೋಮವಾರ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಪಾದಯಾತ್ರೆ ಹಮ್ಮಿಕೊಂಡು ದಾವಣಗೆರೆ ಕೆಎಸ್‍ಆರ್ಟಿಸಿ ಕಚೇರಿಗೆ ತೆರಳಿ ಡಿ.17 ರಂದು ಮುತ್ತಿಗೆ ಹಾಕಲಾಗುವುದು ಎಂದು ಕರನಾಡ ನವ ನಿರ್ಮಾಣವೇದಿಕೆ ರಾಜ್ಯಾಧ್ಯಕ್ಷ ಎಚ್.ಎಂ. ಹೊಳೆ ಮಹಾಲಿಂಗಪ್ಪ ಹೇಳಿದರು. ಪಟ್ಟಣದ ಕಾರ್ಯನಿರತ ಪತ್ರಕರ್ತರ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2006 ರಿಂದ ಜಗಳೂರು ಪಟ್ಟಣಕ್ಕೆ ಕೆಎಸ್‍ಆರ್ ಟಿಸಿ ಬಸ್ ಡಿಪೋಗಾಗಿ ಹೋರಾಟ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರಕ್ಕೆ ನೂರಾರು ಪ್ರತಿಭಟನೆಗಳು ನಡೆದಿವೆ. ಆದರೆ ಸರಕಾರ ಮತ್ತು ಸಾರಿಗೆ ಸಚಿವರು ಹಿಂದುಳಿದ ಜಗಳೂರು ತಾಲೂಕನ್ನು ಪರಿಗಣಿಸದೇ ಮೈಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ಕುಮಾರ್, ಎಸ್‍ಎಫ್‍ಐ ತಾಲೂಕು ಘಟಕದ ಅಧ್ಯಕ್ಷ ಅನಂತ್‍ರಾಜ್ ಮಾತನಾಡಿ, ಸಾರಿಗೆ ಮತ್ತು ಡಿಪೋ ನಿರ್ಮಾಣಕ್ಕಾಗಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. 18 ವರ್ಷಗಳಿಂದಲೂ ವಿದ್ಯಾರ್ಥಿಗಳ ಸ್ಥಿತಿ ಈಗಲೂ ಹಾಗೇ ಇದೆ. ಟಾಟಾ ಆಪೇ ಆಟೋಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಗ್ರಾಮೀಣ ಸಾರಿಗೆ ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಪೋ ನಿರ್ಮಾಣಕ್ಕಾಗಿ ಪಟ್ಟಣದ ಮರೇನಹಳ್ಳಿ ರಸ್ತೆ ಮತ್ತು ಬಿದರಕೆರೆ ರಸ್ತೆಯ ಗೃಹ ಮಂಡಳಿ ಹತ್ತಿರವೂ ಜಾಗ ಗುರುತಿಸಲಾಗಿದೆ. ಆದರೆ ಕೆಎಸ್‍ಆರ್ ಟಿಸಿ ವಿಭಾಗೀಯ ಅಧಿಕಾರಿಗಳು ಹತ್ತಾರು ಬಾರಿ ಸ್ಥಳ ಪರೀಕ್ಷಿಸಿ ಶೀಘ್ರವೇ ಡಿಪೋ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ಅಂತಹ ಯಾವುದೇ ಕಾಮಗಾರಿ ಆರಂಭವಾಗಿಲ್ಲ ಅಸಮಧಾನ ವ್ಯಕ್ತಪಡಿಸಿದರು. ಡಿಎಸ್‍ಎಸ್ ತಾಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್ ಮಾತನಾಡಿ, ಸೋಮವಾರ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭವಾಗಲಿರುವ ಪಾದಯಾತ್ರೆ ಬಿಳಿಚೋಡು, ಅಣಜಿಯವರೆಗೆ ಮೊದಲ ದಿನ ನಡೆಯುತ್ತದೆ. ಎರಡನೇ ದಿನ ಅಣಜಿ ಗ್ರಾಮದಿಂದ ಎಲೆ ಬೇತೂರು ಮಾರ್ಗವಾಗಿ ದಾವಣಗೆರೆ ಕೆಎಸ್‍ಆರ್ ಟಿಸಿ ವಿಭಾಗೀಯ ಕಚೇರಿ ಮುತ್ತಿಗೆ ಹಾಕುತ್ತೇವೆ. ಜಗಳೂರಿನಲ್ಲಿ ಒಟ್ಟು ಕನ್ನಡ ಪರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ರೈತ ಸಂಘಗಳೂ ಸೇರಿ ಒಟ್ಟು 44 ಸಂಘಟನೆಗಳಿದ್ದು ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಪಾದಯಾತ್ರೆ ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ಗ್ಯಾಸ್ ಓಬಣ್ಣ, ಸತ್ಯಮೂರ್ತಿ, ರೈತ ಮುಖಂಡ ಕುಮಾರ್, ನಾಗರಾಜ್, ಡಿಎಸ್‍ಎಸ್ ಮುಖಂಡ ಕರಿಬಸಪ್ಪ ಕರುನಾಡು ರಕ್ಷಣಾ ಪಡೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಇಂದಿರಮ್ಮ, ಎಸ್‍ಎಫ್‍ಐ ತಾಲೂಕು ಘಟಕದ ಅಧ್ಯಕ್ಷ ಅನಂತ್‍ರಾಜ್, ಮರೇನಹಳ್ಳಿ ನಾಗರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.