ಸಾರಾಂಶ
ಕರ್ನಾಟಕದ ವೈವಿಧ್ಯಮಯ ಕಲೆ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪರಿಚಯಿಸಲು ನಗರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವಜನೋತ್ಸವ ಯಶಸ್ವಿಗೊಂಡಿತು.
ಬಳ್ಳಾರಿ: ಕರ್ನಾಟಕದ ವೈವಿಧ್ಯಮಯ ಕಲೆ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪರಿಚಯಿಸಲು ನಗರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯುವಜನೋತ್ಸವ ಯಶಸ್ವಿಗೊಂಡಿತು.
ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಜರುಗಿದ ಯುವಜನೋತ್ಸದಲ್ಲಿ ಚಾಮರಾಜನಗರ ಜಿಲ್ಲೆಯ ಡೊಳ್ಳು ಕುಣಿತ, ಹಾವೇರಿ ಜಿಲ್ಲೆಯ ಗೊರವ, ಪೂಜಾ ಕುಣಿತ, ವೀರಗಾಸೆ, ಮಂಡ್ಯ ಜಿಲ್ಲೆಯ ಜಾತ್ರೆ ಉತ್ಸವದ ನೃತ್ಯ ನವಿಲು ಕುಣಿತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡೊಳ್ಳು ಕುಣಿತ, ಮೈಸೂರು ಜಿಲ್ಲೆಯ ಕಂಸಾಳೆ ನೃತ್ಯ, ರಾಮನಗರ ಜಿಲ್ಲೆಯ ಕರಗ, ದೇವಿ ಕುಣಿತ, ಉಡುಪಿ ಜಿಲ್ಲೆಯ ಕಂಗಿಲು ಕುಣಿತ ಸೇರಿದಂತೆ ನಾನಾ ಜಿಲ್ಲೆಗಳಿಂದ ಅಗಮಿಸಿದ್ದ ಸ್ಪರ್ಧಾರ್ಥಿಗಳು ತಮ್ಮ ಜನಪದ (ಗುಂಪು) ನೃತ್ಯ ಪ್ರದರ್ಶನ ನೀಡಿದರು.
ಜನಪದ ಗೀತೆ ಗುಂಪು ಪ್ರದರ್ಶನ ಕಮ್ಮ ಭವನ, ವೈಯಕ್ತಿಕ ಜನಪದ ನೃತ್ಯವನ್ನು ಪಾರ್ವತಿ ಕಲ್ಯಾಣ ಮಂಟಪ, ಎಂಆರ್‌ಕೆ ಹಾಲ್‍ನಲ್ಲಿ ಗೀತಗಾಯನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಂಗಿರಣ ಸಭಾಂಗಣದಲ್ಲಿ ಕಥೆ ಬರೆಯುವ ಸ್ಪರ್ಧೆ, ಬಿಡಿಎಎ ಸಭಾಂಗಣದಲ್ಲಿ ಪೋಸ್ಟರ್ ರಚನೆ, ಭಾಷಣ ಸ್ಪರ್ಧೆ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಫೋಟೋಗ್ರಫಿ ಸ್ಪರ್ಧೆ ನಡೆದವು.
ವಿವಿಧ ವೇದಿಕೆಗಳಲ್ಲಿ ವಿವಿಧ ಜಿಲ್ಲೆಗಳ ಜಾನಪದ ನೃತ್ಯಗಳು ಗಮನ ಸೆಳೆದವು. ಸಾಂಸ್ಕೃತಿಕ ಸಂಗೀತ, ಜಾನಪದ ಗೀತೆಗಳ ಸೊಗಡು ಯುವಜನೋತ್ಸವಕ್ಕೆ ಮೆರುಗು ತಂದಿತು. ಅಂತರ್ ಜಿಲ್ಲೆಯ ಕಲಾವಿದರು ಪೈಪೋಟಿಗೆ ಬಿದ್ದವರಂತೆ ತಮ್ಮ ಪ್ರಾಂತ್ಯದ ಕಲೆ, ಸಂಸ್ಕೃತಿಯ ಸೊಗಡಿನ ಸಿಹಿ ಉಣಬಡಿಸಿದರು.
ಯುವಜನೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಕಲಾತಂಡಗಳು ನೃತ್ಯಕ್ಕೆ ಪೂರಕವಾದ ಪರಿಕರಗಳನ್ನು ಬಳಸಿ, ನುಡಿಸಿ ಗಮನ ಸೆಳೆದರು. ಕೊಳಲು, ತಬಲಾ, ತಮಟೆ, ಡೋಲು, ಮದ್ದಳೆ, ಡಮರು, ಮೃದಂಗ, ಹಾರ್ಮೋನಿಯಂ ಹೀಗೆ ಪ್ರತಿಯೊಂದು ವಾದ್ಯಗಳನ್ನು ಬಳಸಿದ್ದು ವಿಶೇಷವಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಮಟ್ಟದ ಯುವಜನೋತ್ಸವನ್ನು ನಿರ್ವಹಿಸಿತು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.ವಿಜೇತರ ವಿವರ:
ಜನಪದ ನೃತ್ಯ (ಗುಂಪು): ಪ್ರಥಮ-ಮನೋಜ್ ಮತ್ತು ತಂಡ(ಹಾಸನ)
ಜನಪದ ಗೀತೆ (ಗುಂಪು): ಪ್ರಥಮ-ನಿಸರ್ಗ ಮತ್ತು ತಂಡ(ಬೆಂಗಳೂರು ನಗರ ಜಿಲ್ಲೆ),
ದ್ವಿತೀಯ- ಚೈತ್ರ ಮತ್ತು ತಂಡ(ಮಂಡ್ಯ ಜಿಲ್ಲೆ), ತೃತೀಯ- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಜನಪದ ಕಲಾ ತಂಡ ಮೂಡಿಗೆರೆ ತಾ.(ಚಿಕ್ಕಮಗಳೂರು ಜಿಲ್ಲೆ)
ಜನಪದ ನೃತ್ಯ (ವೈಯಕ್ತಿಕ): ಪ್ರಥಮ- ಮಹೇಂದ್ರ ತಂಡ(ಶಿವಮೊಗ್ಗ), ದ್ವಿತೀಯ- ರಾಧಿಕಾ ಪತ್ತಾರ(ಬೆಳಗಾವಿ), ತೃತೀಯ- ರಂಜಿತ್(ದಕ್ಷಿಣ ಕನ್ನಡ)
ಜನಪದ ಗೀತೆ(ವೈಯಕ್ತಿಕ): ಪ್ರಥಮ- ಚೈತ್ರ ಎಸ್.(ಮಂಡ್ಯ), ದ್ವಿತೀಯ- ಸಂಜಯ್ ಆರ್.(ಚಿಕ್ಕಮಗಳೂರು), ತೃತೀಯ- ಪ್ರಣತಿ(ಶಿವಮೊಗ್ಗ)
ಕಥೆ ಬರೆಯುವುದು: ಪ್ರಥಮ- ಮಹ್ಮದ್ ಆಸೀಫ್(ಬಳ್ಳಾರಿ), ದ್ವಿತೀಯ- ಗಗನ್ ಎಸ್.(ಚಿಕ್ಕಮಗಳೂರು), ತೃತೀಯ- ಎನ್. ಗಂಗಾಭಾಗಿರಥ(ಬೆಂಗಳೂರು ಗ್ರಾಮಾಂತರ)
ಘೋಷಣೆ ಬರೆಯುವುದು: ಪ್ರಥಮ- ಚಂದನ್ ಎಂ. ನಾಯ್ಕ(ಬೆಂಗಳೂರು ನಗರ), ದ್ವಿತೀಯ-ವರುಣ್ ಡಿ.ಆರ್.(ಚಿಕ್ಕಮಗಳೂರು), ತೃತೀಯ- ಸಾಗರ್ ಎಸ್.(ಹಾಸನ).
ಛಾಯಾಚಿತ್ರಣ: ಪ್ರಥಮ- ಲಕ್ಷಿತಾ(ಬೆಂಗಳೂರು ನಗರ), ದ್ವಿತೀಯ- ಬಾಲಾಜಿ ಕೆ.ಎನ್.(ತುಮಕೂರು), ತೃತೀಯ- ಹರ್ಷಿತ ಟಿ.ಬಿ.(ಮಂಡ್ಯ).