ಫೆ.15ರಿಂದ ಅಟಲ್‌ ವಿರಾಸತ್‌ ಸಮ್ಮೇಳನ: ಬಿಜೆಪಿ ಜಿಲ್ಲಾಧ್ಯಕ್ಷ

| Published : Jan 29 2025, 01:32 AM IST

ಫೆ.15ರಿಂದ ಅಟಲ್‌ ವಿರಾಸತ್‌ ಸಮ್ಮೇಳನ: ಬಿಜೆಪಿ ಜಿಲ್ಲಾಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ವರ್ಷಾಚರಣೆ ಹಿನ್ನೆಲೆ ಜಿಲ್ಲಾ ಬಿಜೆಪಿಯಿಂದ ಜ.14ರಿಂದ ಫೆ.14ರವರೆಗೆ ಅಟಲ್‌ ಸ್ಮೃತಿ ಸಂಕಲನ ಮತ್ತು ಪ್ರಚಾರ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದ್ದಾರೆ.

- ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಹೇಳಿಕೆ । ಫೆ.14ರವರೆಗೆ ಅಟಲ್‌ ಸ್ಮೃತಿ ಸಂಕಲನ- ಪ್ರಚಾರ ಅಭಿಯಾನ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ವರ್ಷಾಚರಣೆ ಹಿನ್ನೆಲೆ ಜಿಲ್ಲಾ ಬಿಜೆಪಿಯಿಂದ ಜ.14ರಿಂದ ಫೆ.14ರವರೆಗೆ ಅಟಲ್‌ ಸ್ಮೃತಿ ಸಂಕಲನ ಮತ್ತು ಪ್ರಚಾರ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದರು. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಟಲ್‌ಜೀ ಜನ್ಮದಿನವಾದ ಜ.24 ಅನ್ನು ಸುಶಾಸನ ದಿನವಾಗಿ ಆಚರಿಸಲಾಗುತ್ತಿದೆ. ಫೆ.14ರವರೆಗೆ ಪ್ರತಿ ಜಿಲ್ಲೆಯಲ್ಲಿ ಈಗಾಗಲೇ ಒಬ್ಬರು ಹಿರಿಯರು, ಒಬ್ಬರು ಜಿಲ್ಲಾ ಪದಾಧಿಕಾರಿಗಳು, ಓರ್ವ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಮಂಡಲ ಮಟ್ಟದಲ್ಲಿ ಅಧ್ಯಕ್ಷರು, ಇಬ್ಬರು ಸದಸ್ಯರ ಸಮಿತಿ ಇರುತ್ತದೆ. ಅಟಲ್‌ಜೀ ಅವರಿಗೆ ಸಂಬಂಧಿಸಿದ ಫೋಟೋಗಳು, ವೀಡಿಯೋಗಳು, ಭಾಷಣಗಳು ಹಾಗೂ ಪ್ರೇರಣೀಯ ಅನುಭವಗಳ ಸಂಕಲನವನ್ನು ಜಿಲ್ಲಾ ಸಮಿತಿ ಸಂಗ್ರಹಿಸುತ್ತಿದೆ. ವಾಜಪೇಯಿ ಅವರ ಜೊತೆ ಕಾರ್ಯನಿರ್ವಹಿಸಿದ್ದ ಹಿರಿಯರಿಂದ ಮಾಹಿತಿಯನ್ನು ಪಡೆದು, ಅಂತಹವರಿಗೆ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಪಾಜಪೇಯಿ ಬಗ್ಗೆ ಬರೆಯಲಾದ ಅನೇಕ ಲೇಖನಗಳು ಮತ್ತು ಪುಸ್ತಕಗಳನ್ನು ಸಂಗ್ರಹಿಸಿ, ಪಟ್ಟಿ ಮಾಡಲಾಗುತ್ತಿದೆ. ಫೆ.15ರಿಂದ ಮಾ.15ರವರೆಗೆ ಅಟಲ್ ವಿರಾಸತ್ ಸಮ್ಮೇಳನವನ್ನು ನಮ್ಮ ಜಿಲ್ಲೆಯಲ್ಲೂ ಆಯೋಜಿಸಲಾಗುವುದು. ವಿಚಾರವಾದಿಗಳು, ಗಣ್ಯರನ್ನು ಆಹ್ವಾನಿಸಿ, ಭಾರತ ರತ್ನ ಅಟಲ್‌ಜೀ ಜೊತೆಗೆ ಕೆಲಸ ಮಾಡಿದ ಹಿರಿಯರಿಗೆ ಸನ್ಮಾನಿಸಲಾಗುವುದು. ಅಟಲ್‌ಜೀ ವ್ಯಕ್ತಿತ್ವ ಮತ್ತು ಕೃತಿಗಳ ಮೇಲೆ ಅನೇಕ ಪುಸ್ತಕ, ಲೇಖನ ಬರೆದ ಲೇಖಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಅಲ್ಲದೇ, ಅಟಲ್‌ಜೀ ಅಧಿಕಾರ ಅವಧಿಯಲ್ಲಿ ವಿಶೇಷ ಸಾಧನೆಗಳ, ಯೋಜನೆಗಳ ಮಾಹಿತಿಯನ್ನು ಒಳಗೊಂಡ ಪಿಪಿಟಿ ಪ್ರದರ್ಶಿಸಲಾಗುವುದು. ಅಟಲ್ ಜನ್ಮ ಶತಮಾನೋತ್ಸವ ದಿನಾಚರಣೆಯ ರಾಜ್ಯ ತಂಡ ರಚಿಸಲಾಗಿದೆ. ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಪ್ರಮುಖ ಆಗಿರುವ ಜಗದೀಶ ಹಿರೇಮನಿ ರಾಜ್ಯ ಸಂಚಾಲಕಾರಿರುವ 12 ಜನರ ತಂಡ ಇದಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಹಾಲಿ, ಮಾಜಿ ಜನಪ್ರತಿನಿಧಿಗಳು, ಪ್ರಮುಖರ ಗಮನಕ್ಕೆ ಅಟಲ್‌ಜೀ ಶತಮಾನೋತ್ಸವ ವರ್ಷಾಚರಣೆ ಬಗ್ಗೆ ತಿಳಿಸಲಾಗುವುದು. ಜಿಲ್ಲೆ, ಮಂಡಲ ಸ್ತರದಲ್ಲಿ ಸಭೆ ಮಾಡಿ, ಅಟಲ್‌ಜೀ ಸ್ಮೃತಿ ಸಂಗ್ರಹದ ಸಂಪರ್ಕ ಮಾಡಬಹುದಾದ ಪ್ರಮುಖರ ಪಟ್ಟಿ ಮಾಡುವುದು. ಜ.30ರ ಒಳಗಾಗಿ ಸ್ಥಳೀಯ ಪ್ರಮುಖರ ಜೊತೆಗೆ ಪಟ್ಟಿಯಲ್ಲಿರುವ ಹಿರಿಯರ ಭೇಟಿ ಮಾಡಲಾಗುವುದು. ಕಾರ್ಯಕ್ರಮದ ಬಗ್ಗೆ ತಿಳಿಸಿ, 3 ನಿಮಿಷಗಳ ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಫೋಟೋ ಸ್ಕ್ಯಾನ್ ಮಾಡಿಕೊಂಡು, ಸಂಗ್ರಹಕ್ಕೆ ಬರುವ ಮತ್ತೊಂದು ದಿನಾಂಕ ನಿಶ್ಚಯಿಸಲಾಗುವುದು ಎಂದರು.

ಫೆ.5 ರೊಳಗೆ ಎಲ್ಲ ಮಂಡಲಗಳಿಂದ ಸಂಗ್ರಹಿಸಿದ ವಸ್ತುಗಳನ್ನು ಜಿಲ್ಲಾ ಕೇಂದ್ರಕ್ಕೆ ತಲುಪಿಸಬೇಕು. ಜಿಲ್ಲಾ ಕೇಂದ್ರಗಳಿಂದ ರಾಜ್ಯ ಕಾರ್ಯಾಲಯಕ್ಕೂ ಒಂದು ಪ್ರತಿ ಕಳಿಸಬೇಕು. ಫೆ.14ಕ್ಕೆ ಜಿಲ್ಲಾ ಕೇಂದ್ರದಲ್ಲಿ ಅಟಲ್ ಸ್ಮೃತಿ ಸಂಕಲನ ಪ್ರದರ್ಶಿನಿ ಆಯೋಜಿಸಲಾಗುವುದು. ಫೆ.15ರಿಂದ ಮಾ.15 ರವರೆಗೆ ಪ್ರತಿ ಜಿಲ್ಲೆಯಲ್ಲಿ ಅಟಲ್ ವಿರಾಸತ್ ಸಮ್ಮೇಳನ ಆಯೋಜನೆ ಮಾಡಲಾಗುವುದು. ಯಾರ ಬಳಿಯಾದರೂ ಆಟಲ್‌ಜೀ ಜೊತೆ ನಿಮ್ಮ ನೆನಪುಗಳಿದ್ದರೆ, ಫೋಟೋಗಳಿದ್ದರೆ ಮೊ. 97391-77768 ಇಲ್ಲಿಗೆ ವಾಟ್ಸಪ್ ಮಾಡುವಂತೆ ಎನ್.ರಾಜಶೇಖರ ನಾಗಪ್ಪ ಮನವಿ ಮಾಡಿದರು.

ಪಕ್ಷದ ಮುಖಂಡರಾದ ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ಕೊಟ್ರೇಶ ಗೌಡ, ನೆಲಹೊನ್ನೆ ಮಂಜುನಾಥ, ಎಚ್.ಪಿ.ವಿಶ್ವಾಸ, ಶಂಕರಗೌಡ ಬಿರಾದಾರ ಇತರರು ಇದ್ದರು.

- - -

-25ಕೆಡಿವಿಜಿ4, 5.ಜೆಪಿಜಿ:

ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

- - -

-ಫೋಟೋ: ಅಟಲ್‌ ಬಿಹಾರಿ ವಾಜಪೇಯಿ