ಭಾರತ ದೇಶದ ಇತಿಹಾಸದಲ್ಲಿ ಅಟಲ್‌ಜೀ ಅವರ ಹೆಸರು ಅಜರಾಮರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಹಾವೇರಿ:ಭಾರತ ದೇಶದ ಇತಿಹಾಸದಲ್ಲಿ ಅಟಲ್‌ಜೀ ಅವರ ಹೆಸರು ಅಜರಾಮರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ನಗರದ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದಿಂದ ಗುರುವಾರ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಭಾರತ ಶಕ್ತಿಯುತ ರಾಷ್ಟ್ರ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿದ ಮಹಾನ್ ನಾಯಕರಾಗಿದ್ದಾರೆ. ಭಾರತದ ಸರ್ವ ದಿಕ್ಕುಗಳಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಮೂಲಕ ಹೆದ್ದಾರಿಯ ಹರಿಕಾರರೆಂದು ಹೆಸರುವಾಸಿಯಾದರು. ತಮ್ಮ ಅವಧಿಯಲ್ಲಿ ರಾಷ್ಟ್ರದ ಅಭಿವೃದ್ಧಿಯ ಪಥವನ್ನು ಹೆಚ್ಚಿಸಿದರು. ಅಟಲ್ ಜೀ ಸಾಧನೆ ಪರಿಗಣಿಸಿ ಭಾರತ ರತ್ನ ನೀಡಿ ಗೌರವಿಸಲಾಯಿತು. ಇಂದಿನ ಯುವ ಪೀಳಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ, ಆದರೆ ನಮ್ಮ ರಾಜಕೀಯ ಧನಾತ್ಮಕ ದೃಷ್ಟಿಕೋನ ಹಾಗೂ ಸಮಾಜದ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರಬೇಕು ಎಂದು ಕರೆ ನೀಡಿದರು.ಪಕ್ಷದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ಅಟಲ್‌ಜೀಯವರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ. ಅಟಲ್‌ಜೀ ಕೇವಲ ರಾಜಕೀಯ ಚಿಂತಕರಾಗಿರಲಿಲ್ಲ. ಅವರೊಬ್ಬ ಶ್ರೇಷ್ಠ ಕವಿ ಹಾಗೂ ರಾಷ್ಟ್ರದ ಭವಿಷ್ಯಕ್ಕೆ ಭದ್ರ ಬುನಾದಿ ಕಲ್ಪಿಸಿದ ಶ್ರೇಷ್ಠ ವ್ಯಕ್ತಿತ್ವದ ನಾಯಕರಾಗಿದ್ದಾರೆ. ಇಂದಿನ ಪೀಳಿಗೆಗೆ ಅಟಲ್‌ಜೀ ಶ್ರೇಷ್ಠ ಮಾದರಿ ವ್ಯಕ್ತಿ, ನಾವು ಅಟಲ್ ಜೀ ಅವರ ವಿಚಾರಗಳನ್ನು ನಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ನಮ್ಮ ರಾಜಕೀಯ ಸಮಾಜದ ಅಭಿವೃದ್ಧಿಗೆ ಮೀಸಲಿರಬೇಕೆ ಹೊರತು ವೈಯಕ್ತಿಕ ದ್ವೇಷಕ್ಕಾಗಿ ಇರಬಾರದು ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕಾರ್ಯಕ್ರಮದ ಸಂಚಾಲಕ ಮುರಿಗೆಪ್ಪ ಶೆಟ್ಟರ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಹಾವೇರಿ ನಗರ ಮಂಡಲ ಅಧ್ಯಕ್ಷ ಕಿರಣ ಕೊಳ್ಳಿ, ಗ್ರಾಮೀಣ ಮಂಡಲ ಅಧ್ಯಕ್ಷ ಮಾರುತಿ ಗೊರವರ ಇದ್ದರು. ಸಸಿ ನೆಟ್ಟು ಪೋಷಣೆ: ಅಟಲ್‌ಜೀಯವರ ಜನ್ಮ ಶತಮಾನೋತ್ಸವದ ಅಂಗವಾಗಿ ನಗರದ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಹಾವೇರಿ ನಗರ ಮಂಡಲ ವತಿಯಿಂದ ಸಸಿಗಳನ್ನು ನೆಟ್ಟು ಪೋಷಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಪ್ರಕೋಷ್ಠದ ಪದಾಧಿಕಾರಿಗಳು ಹಾಗೂ ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.