ಶಿವಯೋಗ, ಶಿವರಾತ್ರಿ, ಶಿವಯೋಗಿಯ ಸಂಗಮವೇ ಅಥಣಿಯ ಗಚ್ಚಿನ ಮಠ

| Published : Mar 02 2025, 01:15 AM IST

ಸಾರಾಂಶ

ಶಿವಯೋಗ ಸಾಧನೆಯ ಜಂಗಮ ಜ್ಯೋತಿ ಎನಿಸಿಕೊಂಡಿರುವ ಅಥಣಿಯ ಮುರುಘೇಂದ್ರ ಶಿವಯೋಗಿಗಳು ಮಠ ಬಿಡಲಿಲ್ಲ, ಪೀಠ ಏರಲಿಲ್ಲ, ದಾಸೋಹ ಬಿಡಲಿಲ್ಲ, ಕಾಸು ಮುಟ್ಟಲಿಲ್ಲ, ಸದಾ ಭಕ್ತರೊಂದಿಗೆ ಇದ್ದು ಬಸವ ತತ್ವ ಪ್ರಸಾರ ಮಾಡಿ ನಾಡಿಗೆ ಬೆಳಕಾದವರು. ಶಿವಯೋಗ, ಶಿವರಾತ್ರಿ, ಶಿವಯೋಗಿಯ ಸಂಗಮವೇ ಅಥಣಿಯ ಗಚ್ಚಿನ ಮಠವಾಗಿದೆ ಎಂದು ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಶಿವಯೋಗ ಸಾಧನೆಯ ಜಂಗಮ ಜ್ಯೋತಿ ಎನಿಸಿಕೊಂಡಿರುವ ಅಥಣಿಯ ಮುರುಘೇಂದ್ರ ಶಿವಯೋಗಿಗಳು ಮಠ ಬಿಡಲಿಲ್ಲ, ಪೀಠ ಏರಲಿಲ್ಲ, ದಾಸೋಹ ಬಿಡಲಿಲ್ಲ, ಕಾಸು ಮುಟ್ಟಲಿಲ್ಲ, ಸದಾ ಭಕ್ತರೊಂದಿಗೆ ಇದ್ದು ಬಸವ ತತ್ವ ಪ್ರಸಾರ ಮಾಡಿ ನಾಡಿಗೆ ಬೆಳಕಾದವರು. ಶಿವಯೋಗ, ಶಿವರಾತ್ರಿ, ಶಿವಯೋಗಿಯ ಸಂಗಮವೇ ಅಥಣಿಯ ಗಚ್ಚಿನ ಮಠವಾಗಿದೆ ಎಂದು ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.

ಸ್ಥಳೀಯ ಗಚ್ಚಿನಮಠದಲ್ಲಿ ಮಂಗಳವಾರ ಮಹಾಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅಭಿನವ ಅಲ್ಲಮ ಅಥಣಿ ಶಿವಯೋಗಿಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಅಭಿನವ ಅಲ್ಲಮರಂತೆ ಅಥಣಿ ಶಿವಯೋಗಿಗಳು ನಡೆದು ತೋರಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿ ಸಮಾನತೆಗಾಗಿ ಹೋರಾಡುವ ಮೂಲಕ ಇಂದಿಗೂ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದ್ದಾರೆ. ಅಥಣಿ ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಅಪ್ಪನವರ ವಚನಗಳು ಎಂದು ಗೌರವಿಸುವ ಮೂಲಕ ವಚನದ ಪುಸ್ತಕಗಳನ್ನ ಅವರಿಗೆ ಭಕ್ತರೊಬ್ಬರು ಕೊಟ್ಟ ಮಂಚದ ಮೇಲೆ ಇಟ್ಟು ತಾವು ನೆಲದ ಮೇಲೆ ಮಲಗುತ್ತಿದ್ದರು. ಬಸವಣ್ಣನವರ ವಚನಗಳನ್ನ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಶಿವಯೋಗಿಗಳು ಶಿವ ಯೋಗದ ಸಾಧನೆಯನ್ನು ಮಾಡಿ ಇತಿಹಾಸದ ಪುಟವನ್ನು ದಾಖಲಿಸಿದ್ದಾರೆ. ಅವರ ಆದರ್ಶಗಳು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು ಎಂದರು.ಶಿರ್ಶಡ ಹಿರೇಮಠ ಸಂಸ್ಥಾನದ ಅಭಿನವ ಮುರುಗೇಂದ್ರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಜ್ಞಾನದ ಭಕ್ತಿಯ ಬುತ್ತಿಯನ್ನು ಅಥಣಿ ಶಿವಯೋಗಿಗಳು ನೀಡಿದ್ದಾರೆ. ಹೀಗಾಗಿ ಗಚ್ಚಿನಮಠವು ಅಧ್ಯಾತ್ಮದ ಸ್ವರ್ಗವಾಗಿದೆ ಎಂದರು.ಚಿತ್ರದುರ್ಗದ ಭೋವಿಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣನವರ ನಡೆ ಮತ್ತು ಅಲ್ಲಮಪ್ರಭುಗಳ ಜ್ಞಾನವನ್ನು ಕಾರ್ಯರೂಪಕ್ಕೆ ತಂದವರು ಅಥಣಿಯ ಶಿವಯೋಗಿಗಳು. ಶಿವಯೋಗ, ಕಾಯಕ ಮತ್ತು ದಾಸೋಹ ಪರಂಪರೆಯನ್ನು ಮುನ್ನಡೆಸಿಕೊಂಡು ಬಸವ ತತ್ವವನ್ನು ಪ್ರಸಾರ ಮಾಡಿದ್ದಾರೆ ಎಂದು ತಿಳಿಸಿದರು.ಬೆಂಗಳೂರಿನ ರಾಷ್ಟ್ರೀಯ ಬಸವತತ್ವ ಪರಿಷತ್ತ ಅಧ್ಯಕ್ಷ ಡಿ.ಟಿ.ಅರುಣಕುಮಾರ ಮಾತನಾಡಿ, ಬಸವಣ್ಣನವರ ಕಾಯಕ, ದಾಸೋಹ ಪರಂಪರೆ ಮುನ್ನಡೆಸುತ್ತಿರುವ ಗಚ್ಚಿನಮಠವು ಭಕ್ತರ ಭಕ್ತಿಯ ಶ್ರದ್ಧಾ ಕೇಂದ್ರ ಎಂದರು.ನೇತೃತ್ವ ವಹಿಸಿದ್ದ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಸಮಾಜ ಸೇವಕ ಗಜಾನನ ಮಂಗಸೂಳಿ ಮಾತನಾಡಿದರು.ಸಾಯಿನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ ವಾಲಿ, ದಿಲೀಪ್ ಲೋನಾರಿ, ಕಲ್ಲಪ್ಪ ವಣಜೋಳ, ಡಾ.ಸಿ.ಬಿ.ಕುಲಗೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿವಾನಂದ ದಿವಾನಮಳ ಸ್ವಾಗತಿಸಿದರು. ಸಂಗಮೇಶ ಹಚಡದ ನಿರೂಪಿಸಿದರು. ರಾಮನಗೌಡ ಪಾಟೀಲ ವಂದಿಸಿದರು.ಗಚ್ಚಿನಮಠದ ಶಿವಬಸವ ಸ್ವಾಮೀಜಿ ಅವರು ಅಥಣಿಗೆ ಬಂದ ನಂತರ ಶ್ರೀಮಠದ ಅಭಿವೃದ್ಧಿ ಕಾರ್ಯಗಳನ್ನು ಚೆನ್ನಾಗಿ ಮಾಡಿದ್ದಾರೆ. ಪ್ರತಿ ವರ್ಷ ಶಿವರಾತ್ರಿ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮತ್ತು ಚಿಂತನ ಘೋಷ್ಠಿಗಳನ್ನು ನಡೆಸುವ ಮೂಲಕ ಶಿವಯೋಗ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ.

-ಗಜಾನನ ಮಂಗಸೂಳಿ, ಸಮಾಜ ಸೇವಕರು.