ವಿನೂತನ ಪ್ರಯತ್ನಗಳಿಂದ ಕ್ರೀಡಾಪಟು ಬೆಳಕಿಗೆ: ಪುಷ್ಪಾ ಕುಟ್ಟಣ್ಣ

| Published : Mar 05 2025, 12:30 AM IST

ವಿನೂತನ ಪ್ರಯತ್ನಗಳಿಂದ ಕ್ರೀಡಾಪಟು ಬೆಳಕಿಗೆ: ಪುಷ್ಪಾ ಕುಟ್ಟಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೂ ಕುಟುಂಬ ಸದಸ್ಯರೊಂದಿಗೆ ಇತರರ ಪ್ರೋತ್ಸಾಹ ಕೂಡ ಅತ್ಯಗತ್ಯ ಎಂದು ಮಂಡೆಪಂಡ ಡಾ. ಪುಷ್ಪಾ ಕುಟ್ಟಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೂ ಕುಟುಂಬ ಸದಸ್ಯರೊಂದಿಗೆ ಇತರರ ಪ್ರೋತ್ಸಾಹ ಕೂಡ ಅತ್ಯಗತ್ಯ. ಕ್ರೀಡಾಕ್ಷೇತ್ರದಲ್ಲಿಯೂ ವಿನೂತನ ಪ್ರಯತ್ನಗಳು ಆದಾಗ ಮತ್ತಷ್ಟು ಕ್ರೀಡಾಪಟುಗಳು ಬೆಳಕಿಗೆ ಬರಲು ಸಾಧ್ಯ ಎಂದು ಕೊಡಗಿನ ಹೆಸರಾಂತ ಬಾಸ್ಕೆಟ್ ಬಾಲ್ ಆಟಗಾರ್ತಿ ಮಂಡೆಪಂಡ ಡಾ. ಪುಷ್ಪಾ ಕುಟ್ಟಣ್ಣ ಹೇಳಿದ್ದಾರೆ.

ನಗರದ ಕೊಡಗು ವಿದ್ಯಾಲಯದಲ್ಲಿ 55 ಲಕ್ಷ ರು. ವೆಚ್ಚದಲ್ಲಿ ಸ್ಫಾಪನೆಯಾದ ತನ್ನದೇ ಹೆಸರಿನ ಡಾ. ಪುಷ್ಪಾ ಕುಟ್ಟಣ್ಣ ಬಾಸ್ಕೆಟ್ ಬಾಲ್ ಕೋರ್ಟ್‌ ಉದ್ಘಾಟಿಸಿ ಮಾತನಾಡಿದ ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಮಾಜಿ ಆಟಗಾರ್ತಿಯೂ ಆಗಿರುವ ಪುಷ್ಪಾ ಕುಟ್ಟಣ್ಣ , ಅನೇಕ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಬಾಸ್ಕೆಟ್ ಬಾಲ್ ಕೋರ್ಟ್‌ಗಿಂತ ಕೊಡಗು ವಿದ್ಯಾಲಯದಲ್ಲಿ ನಿರ್ಮಾಣವಾದ ಕ್ರೀಡಾಂಗಣ ವಿನೂತನವಾಗಿದೆ. ಕೊಡಗಿನಲ್ಲಿ ಇಂಥ ಹೊಸತನದ ಪ್ರಯತ್ನಕ್ಕೆ ಕೊಡಗು ವಿದ್ಯಾಲಯ ಮುಂದಾಗಿರುವುದು ಶ್ಲಾಘನೀಯ ಎಂದರು.

ತನ್ನ ಹೆಸರಿನಲ್ಲಿಯೇ ಬಾಸ್ಕೆಟ್ ಬಾಲ್ ಕೋರ್ಟ್‌ ನಿರ್ಮಾಣವಾಗಿರುವುದು ತನ್ನ ಕ್ರೀಡಾಜೀವನದಲ್ಲಿಯೇ ಸ್ಮರಣೀಯವಾಗಿದೆ ಎಂದೂ ಅವರು ಧನ್ಯತಾ ಭಾವದಿಂದ ಹೇಳಿದರು.

ಪ್ರತೀ ಕ್ರೀಡಾಸಾಧಕರಿಗೆ ಮುಖ್ಯವಾಗಿ ಛಲ, ಗುರಿ ಬೇಕು. ಕ್ರೀಡಾಕ್ಷೇತ್ರದಲ್ಲಿಯೂ ಸಾಕಷ್ಟು ವಿಚಾರಗಳನ್ನು ಹೊಸದ್ದಾಗಿ ಕಲಿಯುವ ಅವಕಾಶಗಳಿರುತ್ತವೆ. ಕ್ರೀಡಾಕ್ಷೇತ್ರದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ತಮ್ಮ ಪ್ರತಿಭೆಯನ್ನೂ ಬೆಳಕಿಗೆ ತರಲು ಸಾಧ್ಯ ಎಂದೂ ಪುಪ್ಪಾ ಕುಟ್ಟಣ್ಣ ಹೇಳಿದರು. ಪೋಷಕರು ತಮ್ಮ ಮಕ್ಕಳಲ್ಲಿ ಶಿಕ್ಷಣದ ಜತೆಜತೆಗೇ ಕ್ರೀಡಾಪ್ರತಿಭೆಗೂ ಪ್ರೋತ್ಸಾಹ ನೀಡಬೇಕು. ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ತಾವೊಬ್ಬರೇ ತಂಡವನ್ನು ಮುನ್ನಡೆಸುವುದಕ್ಕಿಂತ ತಂಡದ ಎಲ್ಲರ ಪ್ರಯತ್ನದೊಂದಿಗೆ ತಂಡಸ್ಪೂರ್ತಿಗೆ ಆದ್ಯತೆ ನೀಡಿದರೆ ಗೆಲವು ಸುಲಭಸಾಧ್ಯ ಎಂದೂ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ, ಕೊಡಗು ವಿದ್ಯಾಲಯದ ಸಲಹೆಗಾರ ಪ್ರೊ. ಜುಗನ್ ಸುಖನ್ವೇಷರ್ ದ್ಯಾನೇಶ್ವರನ್ ಮಾತನಾಡಿ ಕೊಡಗಿನ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಬಾಸ್ಕೆಟ್ ಬಾಲ್ ತರಬೇತಿ ನೀಡುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಭಾರತೀಯ ಬಾಸ್ಕೆಟ್ ಬಾಲ್ ಫೆಡರೇಷನ್ ಮತ್ತು ಮಣಿಪಾಲ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊಡಗು ವಿದ್ಯಾಲಯದ ಸುಸಜ್ಜಿತ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ಆಯೋಜಿಸಲೂ ಚಿಂತನೆ ಇದೆ ಎಂದೂ ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಬಾಸ್ಕೆಟ್ ಬಾಲ್ ಕೋರ್ಟ್‌ ಯೋಜನೆ ಬಗ್ಗೆ ಮಾಹಿತಿ ನೀಡಿದ ಕೊಡಗು ವಿದ್ಯಾಲಯ ಆಡಳಿತ ಮಂಡಳಿ ನಿರ್ದೇಶಕ ಸಿ.ಎಸ್. ಗುರುದತ್, ಸಾಕಮೂರಿ ಕುಟುಂಬದ ಎಸ್. ವಿ. ನರಸಯ್ಯ ಸ್ಮರಣೆಯಲ್ಲಿ ಅವರ ಮಕ್ಕಳಾದ ನಾಗಾರ್ಜುನ್ ಮತ್ತು ಪ್ರಶಾಂತ್ ಸಾಕಮೂರಿ ಸಹಕಾರದಲ್ಲಿ ಈ ಬಾಸ್ಕೆಟ್ ಬಾಲ್ ಕೋರ್ಟ್‌ 55 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.

ಸಿವಿಎಸ್ ಬ್ರದರ್ಸ್ ಅವರ ಸೋಷಿಯಲ್ ಬುಸಿನೆಸ್ ಪೌಂಡೇಷನ್ ನ ಐಜಿಜಿ ಪಾರ್ಟ್‌ನರ್ ಸಹಕಾರದೊಂದಿಗೆ ಮೀನಾಕ್ಷಿ ಭಟ್ ಸ್ಮರಣೆಯಲ್ಲಿ ಪ್ರಭಾವತಿ ಫರ್ನಾಂಡಿಸ್‌ ಅವರು ನೀಡಿದ ಕೊಡುಗೆಯನ್ನೂ ಬಾಸ್ಕೆಟ್ ಬಾಲ್ ಕೋರ್ಟ್‌ ಬಳಕೆಗೆ ವಿನಿಯೋಗ ಮಾಡಲಾಗಿದೆ. ಇವರೆಲ್ಲರ ಸಹಕಾರದಿಂದಾಗಿ ಕೊಡಗಿನಲ್ಲಿ ಇಂಥಹದ್ದೊಂದು ಅತ್ಯಾಧುನಿಕ ಗುಣಮಟ್ಟದ ಸುಸಜ್ಜಿತ ಬಾಸ್ಕೆಟ್ ಬಾಲ್ ಕೋರ್ಟ್‌ ನಿರ್ಮಾಣ ಸಾಧ್ಯವಾಯಿತು ಎಂದರು.

ಕೊಡಗಿನ ಹಿರಿಯ ಕ್ರೀಡಾಪ್ರತಿಭೆಯಾಗಿರುವ ಮಂಡೇಪಂಡ ಪುಷ್ಪಾ ಕುಟ್ಟಣ್ಣ ಅವರು ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಮಾಡಿರುವ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಪರಿಗಣಿಸಿ ಅವರ ಹೆಸರನ್ನೇ ಈ ಬಾಸ್ಕೆಟ್ ಬಾಲ್ ಕೋರ್ಟ್‌ಗೆ ಇಟ್ಟಿದ್ದು, ಇದು ನಿಜಕ್ಕೂ ಹೆಮ್ಮೆ ತಂದಿದೆ ಎಂದೂ ಗುರುದತ್ ಹೇಳಿದರು.

ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾಯ೯ಪ್ಪ, ಕೊಡಗು ವಿದ್ಯಾಲಯದ ಉಪಾಧ್ಯಕ್ಷೆ ಊರ್ವಶಿ ಮುದ್ದಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ರಘು ಮಾದಪ್ಪ, ಸಲಹೆಗಾರರಾದ ಪಿ.ಇ. ಕಾಳಯ್ಯ, ಕೆ.ಯು.ಸುಬ್ಬಯ್ಯ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಶಿಕ್ಷಕಿಯರಾದ ನೇತ್ರಬೋಪಣ್ಣ ಸ್ವಾಗತಿಸಿದರು. ಕೆ.ಕೆ. ಭಾರತಿ ವಂದಿಸಿದರು. ಅಲೆಮಾಡ ಚಿತ್ರಾನಂಜಪ್ಪ, ಮಿಲನ್ ಬೋಪಣ್ಣ ನಿವ೯ಹಿಸಿ, ಎಂ.ಎಂ.ವೀಣಾ ನಿರೂಪಿಸಿದರು.

ನೂತನ ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿ ಕರ್ನಾಟಕ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ತಂಡಕ್ಕೆ ಸೇರಿದ ಸ್ಪೂರ್ತಿ ಮಹಿಳಾ ತಂಡ ಮತ್ತು ಪ್ರೇರಣ ಮಹಿಳಾ ತಂಡಗಳ ನಡುವೆ ಆಕರ್ಷ ಬಾಸ್ಕೆಟ್ ಬಾಲ್ ಪಂದ್ಯಾಟ ಜರುಗಿತು.