ಶಿಗ್ಗಾಂವಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿರುವ ಸಿಂಥೆಟಿಕ್ ಟ್ರ್ಯಾವಕ್‌ಗಳು ಕ್ರೀಡಾಪಟುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿರುವ ಹಿನ್ನೆಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸುವಂತೆ ತಾಲೂಕಿನ ಕ್ರೀಡಾಪಟುಗಳ ಒತ್ತಾಯಿಸಿದ್ದಾರೆ.

ಬಸವರಾಜ ಹಡಪದ

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿರುವ ಸಿಂಥೆಟಿಕ್ ಟ್ರ‍್ಯಾಕ್‌ಗಳು ಕ್ರೀಡಾಪಟುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿರುವ ಹಿನ್ನೆಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸುವಂತೆ ತಾಲೂಕಿನ ಕ್ರೀಡಾಪಟುಗಳ ಒತ್ತಾಯಿಸಿದ್ದಾರೆ.

ಸಿಂಥೆಟಿಕ್ ಟ್ರ‍್ಯಾಕ್ ಮೂಲಕ ಆಧುನಿಕ ಸೌಲಭ್ಯಗಳು ಲಭ್ಯವಾಗುವುದರಿಂದ ಕ್ರೀಡಾಪಟುಗಳಿಗೆ ಗುಣಮಟ್ಟದ ತರಬೇತಿ ಪಡೆಯಲು ಹೆಚ್ಚಿನ ಅನುಕೂಲವಾಗಲಿದ್ದು, ಸಾಮಾನ್ಯ ಮಣ್ಣಿನ ಅಥವಾ ಕಾಂಕ್ರೀಟ್ ಟ್ರ‍್ಯಾಕ್‌ಗಳಿಗೆ ಹೋಲಿಸಿದರೆ ಸಿಂಥೆಟಿಕ್ ಟ್ರ‍್ಯಾಕ್‌ನಲ್ಲಿ ಓಡುವಾಗ ಪಾದಗಳಿಗೆ ಬೀಳುವ ಒತ್ತಡ ಕಡಿಮೆಯಾಗುವ ಕಾರಣ ಗಾಯಗಳ ಸಾಧ್ಯತೆಯನ್ನು ತಗ್ಗಿಸಲು ಸಹಾಯವಾಗುತ್ತದೆ. ಅಲ್ಲದೆ, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ ತರಬೇತಿ ಮುಂದುವರಿಸಲು ಸಾಧ್ಯವಾಗುವುದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ನಿರಂತರತೆ ದೊರೆಯಲಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಸಿದ್ಧತೆ ನಡೆಸುವವರಿಗೆ ಇದು ಅತ್ಯಂತ ಉಪಯುಕ್ತ ಸೌಲಭ್ಯವಾಗಿದೆ ಎಂದು ತಾಲೂಕಿನ ಕ್ರೀಡಾ ತರುಬೇತುದಾರರ, ತಾಲೂಕಿನ ದೈಹಿಕ ಶಿಕ್ಷಕರ ಹಾಗೂ ಕ್ರೀಡಾಪಟುಗಳ ಆಶಯವಾಗಿದೆ.ಸೌಲಭ್ಯಗಳು ಅವಶ್ಯ: ಸಿಂಥೆಟಿಕ್ ಟ್ರ‍್ಯಾಕ್ ನಿರ್ಮಾಣವಾಗುವುದಷ್ಟೇ ಸಾಕಾಗುವುದಿಲ್ಲ. ಕ್ರೀಡಾಪಟುಗಳಿಗೆ ಅಗತ್ಯವಿರುವ ತರಬೇತುದಾರರು, ಕ್ರೀಡಾ ಉಪಕರಣಗಳು, ಜಿಮ್, ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಹಾಗೂ ವೈದ್ಯಕೀಯ ಪ್ರಥಮ ಚಿಕಿತ್ಸೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಅವಶ್ಯವಾಗಿದ್ದು, ಕ್ರೀಡಾಂಗಣದ ನಿರ್ವಹಣೆ ಮತ್ತು ಟ್ರ‍್ಯಾಕ್‌ನ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ ಸಂರಕ್ಷಿಸುವ ಅಗತ್ಯವೂ ಇದೆ ಎನ್ನುತ್ತಾರೆ ತಾಲೂಕಿನ ದೈಹಿಕ ಶಿಕ್ಷಕರ ಬಳಗ.ಸ್ಥಳೀಯ ಶಾಸಕರಾದ ಯಾಸೀರ್ ಖಾನ್ ಪಠಾಣ್ ಅವರು, ಈಗಾಗಲೇ ಕ್ರೀಡಾಂಗಣ ನಿರ್ವಹಣೆಗೆ 5 ಕೋಟಿ ಅನುದಾನ ತಂದಿದ್ದು ಅದರಂತೆ ಕ್ರೀಡಾಪಟುಗಳ ಬೇಡಿಕೆಗಳಿಗೆ ಸ್ಪಂದಿಸಿ ಕ್ರೀಡಾಂಗಣವನ್ನು ಸಮಗ್ರ ಕ್ರೀಡಾ ತರಬೇತಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗಬೇಕು. ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ತರಬೇತಿ, ಕ್ರೀಡಾ ಕಿಟ್, ಸ್ಪರ್ಧೆಗಳಿಗೆ ಪ್ರಯಾಣ ವೆಚ್ಚ ಹಾಗೂ ಅಗತ್ಯ ಪ್ರೋತ್ಸಾಹಧನ ಒದಗಿಸುವ ವ್ಯವಸ್ಥೆ ರೂಪಿಸಬೇಕಿದೆ ಎನ್ನುತ್ತಾರೆ ಕ್ರೀಡಾಪಟುಗಳು.ಪ್ರೋತ್ಸಾಹ ಅಗತ್ಯ: ಶಿಗ್ಗಾಂವಿಯ ಕ್ರೀಡಾಂಗಣ ಕೇವಲ ಕಟ್ಟಡವಾಗದೆ, ಕ್ರೀಡಾಪಟುಗಳ ಭವಿಷ್ಯ ರೂಪಿಸುವ ಕೇಂದ್ರವಾಗಬೇಕು. ಸಿಂಥೆಟಿಕ್ ಟ್ರ‍್ಯಾಕ್ ಸೇರಿದಂತೆ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದರೆ ಶಿಗ್ಗಾಂವಿ ಸೇರಿದಂತೆ ಗ್ರಾಮೀಣ ಭಾಗದಿಂದಲೂ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗಲಿದೆ ಎನ್ನುತ್ತಾರೆ ಪ್ರಜ್ಞಾವಂತರು.

ಶಿಗ್ಗಾಂವಿಯ ತಾಲೂಕು ಕ್ರೀಡಾಂಗಣದಲ್ಲಿ ದೈಹಿಕ ಚಟುವಟಕೆಗಳನ್ನು ಮಾಡಲು ಉತ್ತಮ ವಾತಾವರಣವಿರುವ ಕ್ರೀಡಾಂಗಣದ ಅವಶ್ಯಕತೆ ಇದೆ, ನಮ್ಮ ತಾಲೂಕಿನಲ್ಲಿ ಈ ತರದ ಸಿಂಥೆಟಿಕ್ ಕ್ರೀಡಾಂಗಣ ಇದ್ದರೆ ರಾಜ್ಯ ಮತ್ತು ರಾಷ್ಟ್ರಕ್ಕೆ ಅನೇಕ ಕ್ರೀಡಾಪಟುಗಳನ್ನು ಶಿಗ್ಗಾಂವಿ ತಾಲೂಕು ಕೊಡಬಹುದಾಗಿದೆ, ಕೇವಲ ಕ್ರೀಡಾಪಟುಗಳಿಗಷ್ಟೆ ಅಲ್ಲದೇ ಸಾರ್ವಜನಿಕರಿಗೂ ಆರೋಗ್ಯದ ದೃಷ್ಟಿಯಿಂದ ವಾಯುವಿಹಾರ ಮಾಡಲು ಅನುಕೂಲವಾಗಲಿದೆ ಎಂದು ಶಿಗ್ಗಾಂವಿ ರಂಭಾಪುರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ವಿನಯ್ ಎಚ್.ಕೆ. ಹೇಳಿದರು.

ಸಿಂಥೆಟಿಕ್ ಕ್ರೀಡಾಂಗಣ ನಿರ್ಮಾಣ ಮಾಡುವ ಮೂಲಕ ದಿನನಿತ್ಯ ಕ್ರೀಡಾ ತರಬೇತಿಯಲ್ಲಿ ತೊಡಗಿಕೊಳ್ಳಲು ಬಹಳಷ್ಟು ಅನುಕೂಲವಾಗುತ್ತದೆ. ಇದರಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಲಿದೆ ಎಂದು ಶಿಗ್ಗಾಂವಿ ಕ್ರೀಡಾಪಟು ಕಿರಣ ವನಹಳ್ಳಿ ಹೇಳಿದರು.