ಅಥ್ಲೆಟಿಕ್ಸ್: ಐತಿಹಾಸಿಕ ರಾಷ್ಟ್ರೀಯ ಕ್ರೀಡಾ ದಾಖಲೆ ಬರೆದ ಆಳ್ವಾಸ್ ಶಿಕ್ಷಣ ಸಂಸ್ಥೆ

| Published : Dec 03 2024, 12:35 AM IST / Updated: Dec 03 2024, 01:07 PM IST

ಅಥ್ಲೆಟಿಕ್ಸ್: ಐತಿಹಾಸಿಕ ರಾಷ್ಟ್ರೀಯ ಕ್ರೀಡಾ ದಾಖಲೆ ಬರೆದ ಆಳ್ವಾಸ್ ಶಿಕ್ಷಣ ಸಂಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಆಳ್ವಾಸ್‌ ಶಿಕ್ಷಣ ಸಂಸ್ಥೆ ಕ್ರೀಡಾಳುಗಳು ರಾಷ್ಟಮಟ್ಟದ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅಥ್ಲೆಟಿಕ್ಸ್‌ನ ಎಲ್ಲ 47 ಸ್ಪರ್ಧೆಗಳಲ್ಲಿ, ಅದೂ ಮಂಗಳೂರು ವಿ.ವಿ. ಅಂತರ್ ಕಾಲೇಜಿನ ಕ್ರೀಡಾಕೂಟದಲ್ಲಿ 47ಕ್ಕೆ 47 ಕೂಟ ದಾಖಲೆಗಳನ್ನೂ ಆಳ್ವಾಸ್ ಕ್ರೀಡಾಪಟುಗಳು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಗಣೇಶ್ ಕಾಮತ್

 ಮೂಡುಬಿದಿರೆ : ಇಲ್ಲಿನ ಆಳ್ವಾಸ್‌ ಶಿಕ್ಷಣ ಸಂಸ್ಥೆ ಕ್ರೀಡಾಳುಗಳು ರಾಷ್ಟಮಟ್ಟದ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅಥ್ಲೆಟಿಕ್ಸ್‌ನ ಎಲ್ಲ 47 ಸ್ಪರ್ಧೆಗಳಲ್ಲಿ, ಅದೂ ಮಂಗಳೂರು ವಿ.ವಿ. ಅಂತರ್ ಕಾಲೇಜಿನ ಕ್ರೀಡಾಕೂಟದಲ್ಲಿ 47ಕ್ಕೆ 47 ಕೂಟ ದಾಖಲೆಗಳನ್ನೂ ಆಳ್ವಾಸ್ ಕ್ರೀಡಾಪಟುಗಳು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಇದೊಂದು ಐತಿಹಾಸಿಕ, ಸಾರ್ವಕಾಲಿಕ ದಾಖಲೆಯೂ ಹೌದು. ದೇಶದ 1025 ವಿವಿಗಳಲ್ಲಿ, 44 ವರ್ಷ ಇತಿಹಾಸವಿರುವ ಮಂಗಳೂರು ವಿ.ವಿ.ಯ ಇತಿಹಾಸದಲ್ಲಿ ಹೀಗೊಂದು ಕ್ರೀಡಾ ಸಾಧನೆ ಇದೇ ಮೊದಲು.

ನನಸಾಯ್ತು ಕನಸು!

ಉಡುಪಿಯಲ್ಲಿ ಇತ್ತೀಚಿಗಷ್ಟೇ ಮುಗಿದ ಪುರುಷರ ಮತ್ತು ಮಹಿಳೆಯರ ಮಂಗಳೂರು ವಿ.ವಿ. ಅಂತರ್ ಕಾಲೇಜಿನ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಸಾರ್ವಕಾಲಿಕ ಸಾಧನೆ ಮೆರೆದಿದ್ದಾರೆ. ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಸತತ ೨೨ನೇ ಬಾರಿ ಸಮಗ್ರ ತಂಡ ಪ್ರಶಸ್ತಿಯನ್ನು ದ್ವಿತೀಯ ಸ್ಥಾನ ಪಡೆದ ತಂಡದಿಂದ ೪೬೦ ಅಂಕಗಳ ಅಂತರದಲ್ಲಿ ಪಡೆಯುವುದರ ಜೊತೆಗೆ ೧೧ ನೂತನ ಕೂಟದಾಖಲೆಯನ್ನು ಆಳ್ವಾಸ್ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.

ಈ ಕ್ರೀಡಾಕೂಟದಲ್ಲಿರುವ 46 ವಿಭಾಗಗಳಲ್ಲಿ ಈಗಾಗಲೇ ಆಳ್ವಾಸ್ ವಿದ್ಯಾರ್ಥಿಗಳು ನೂತನ ಕೂಟ ದಾಖಲೆ ನಿರ್ಮಿಸಿದ್ದರೆ, ಬಾಕಿ ಉಳಿದಿದ್ದ ಹೆಪ್ಟಾತ್ಲಾನ್ ವಿಭಾಗದಲ್ಲೂ ಈ ಬಾರಿ ನೂತನ ಕೂಟದಾಖಲೆ ನಿರ್ಮಿಸುವ ಮೂಲಕ ಒಟ್ಟು 47 ವಿಭಾಗಗಳಲ್ಲೂ ನೂತನ ಕೂಟ ದಾಖಲೆ ನಿರ್ಮಿಸಿದ ಭಾರತದ ಏಕೈಕ ಕಾಲೇಜು ಎಂಬ ಇತಿಹಾಸ ಬರೆದಿದ್ದಾರೆ.

ಎರಡು ವಿಭಾಗಗಳಲ್ಲಿ 84  ಪದಕ:

ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ 24 ಚಿನ್ನ, 17 ಬೆಳ್ಳಿ, 1 ಕಂಚಿನ ಪದಕ ಸೇರಿ ಒಟ್ಟು 42 ಹಾಗೂ ಮಹಿಳಾ ವಿಭಾಗದಲ್ಲಿ 21 ಚಿನ್ನ 16 ಬೆಳ್ಳಿ ಹಾಗೂ 5 ಕಂಚಿನ ಪದಕದೊಂದಿಗೆ 42 ಪದಕ ಪಡೆಯಿತು. ಎರಡು ವಿಭಾಗಗಳಲ್ಲಿ ಒಟ್ಟು ೮೪ ಪದಕ ಪಡೆಯಿತು.

ಕ್ರೀಡಾಕೂಟದ ನೂತನ ಕೂಟ ದಾಖಲೆಗಳು ನಿರ್ಮಾಣವಾಗಿವೆ. ಇವೆಲ್ಲವೂ ಆಳ್ವಾಸ್ ವಿದ್ಯಾರ್ಥಿಗಳದ್ದೇ. ಹಳೆಯ ದಾಖಲೆಗಳನ್ನು ಉತ್ತಮ ಪಡಿಸಿಕೊಂಡದ್ದೇ ಸಾಧನೆ.

ಪುರುಷರ ವಿಭಾಗದಲ್ಲಿ ಗಗನ್-೫೦೦೦ ಮೀ. ಓಟ, ಚಂದನ್- ೧೦೦೦೦ ಮೀ ಓಟ, ಅಮನ್ ಸಿಂಗ್ - ಪೋಲ್ವಾರ್ಟ್, ೪*೧೦೦ ರಿಲೇ ತಂಡ ಕೂಟ ದಾಖಲೆ ನಿರ್ಮಿಸಿದರೆ, ಮಹಿಳೆಯರ ವಿಭಾಗದಲ್ಲಿ ಕೆ.ಎಂ ಶಾಲಿನಿ ೨೦ ಕಿಮೀ ನಡಿಗೆ, ಸುನೀತಾ- ಡಿಸ್ಕಸ್‌ ಥ್ರೋ, ಶ್ರುತಿ - ಹ್ಯಾಮರ್‌ ಥ್ರೋ, ಪ್ರಜ್ಞಾ- ೪೦೦ ಮೀ ಹರ್ಡಲ್ಸ್, ಮಂಜು ಯಾದವ್ - ಸ್ಟೀಪಲ್ ಚೇಸ್, ಕಮಲ್ಜೀತ್‌ಕೌರ್- ಹೆಪ್ಟಾತ್ಲಾಲ್ ಹಾಗೂ ೪*೪೦೦ ಮೀ ರಿಲೇಯಲ್ಲಿ ಕೂಟದಾಖಲೆ ನಿರ್ಮಾಣವಾಗಿವೆ

ಪುರುಷರ ಹಾಗೂ ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಉದ್ದಜಿಗಿತ ಸ್ಪರ್ಧೆಯ ಪುರುಷೋತ್ತಮ ಹಾಗೂ ೧೦೦ ಮೀ ಓಟದ ಪವಿತ್ರಾ ಪಡೆದುಕೊಂಡರು. ಇವರು ಇಬ್ಬರು ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು.

ನಗದು ಬಹುಮಾನ: ನೂತನ ಕೂಟದಾಖಲೆ ಮೆರೆದ ೧೧ ಜನ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತಲಾ ೧೦೦೦೦ ನಗದು ಬಹುಮಾನ ನೀಡಲಾಗಿದೆ.

ಇದೀಗ ರಾಷ್ಟ್ರಮಟ್ಟದಲ್ಲಿ ಕ್ರೀಡಾ ವಿಭಾಗದಲ್ಲಿ ಮಂಗಳೂರು ವಿ.ವಿ. 5ನೇ ಸ್ಥಾನಕ್ಕೇರಿದೆ.

ರಾಷ್ಟ ಮಟ್ಟದ ಅಂತರ ವಿ.ವಿ.ಯ ಅಥ್ಲೆಟಿಕ್ಸ್ ಕ್ರೀಡಾಕೂಟವು ಡಿ.೨೬ ರಿಂದ ೩೧ರ ವರೆಗೆ ಒಡಿಶಾದ ಕಳಿಂಗ ವಿ.ವಿ.ಯಲ್ಲಿ ಜರುಗಲಿದ್ದು, ಆಳ್ವಾಸ್ ಕಾಲೇಜಿನ ಒಟ್ಟು ೭೫ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ. ವಿ.ವಿ.ಯ ತಂಡದಲ್ಲಿ ಒಂದೇ ಕಾಲೇಜಿನ ಗರಿಷ್ಠ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದೂ ದಾಖಲೆಯೇ.!

ಬೆವರಿಗೆ ಬೆಲೆ ಇಲ್ಲವೇ?: ಡಾ. ಆಳ್ವಾ ಖೇದ

ಹೀಗೊಂದು ಅಪರೂಪದ ಸಾಧನೆಯಿಂದ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಮೋಹನ ಆಳ್ವ ಖುಷಿಯಾಗಿದ್ದಾರೆ. ನಮ್ಮಲ್ಲಿ 600ಕ್ಕೂ ಮಿಕ್ಕಿದ ಕ್ರೀಡಾಪಟುಗಳ ದತ್ತು ಸ್ವೀಕಾರ, ಶಿಕ್ಷಣ ತರಬೇತಿ, ಎಲ್ಲವೂ ಕ್ರೀಢಾಭಿಮಾನದಿಂದಲೇ ನಡೆಸಿಕೊಂಡು ಬರುತ್ತಿದ್ದೇವೆ. ವಾರ್ಷಿಕ 10 ಕೋಟಿ ರು. ವ್ಯಯವಾಗುತ್ತಿದೆ. ಆದರೆ ಸರಕಾರ, ವಿವಿ ಮಟ್ಟದಲ್ಲಿ ನಮ್ಮ ನೋವನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಡಾ. ಆಳ್ವ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.

ಅನುದಾನಗಳು ಹಾಗಿರಲಿ, ಕನಿಷ್ಠ ಕೇಳುವವರೂ ಇಲ್ಲದಂತಾಗಿದೆ. ನೆರೆಯ ಕೇರಳ, ಉತ್ತರದ ಪಂಜಾಬ್, ಹರಿಯಾಣಗಳಲ್ಲಿ ಕ್ರೀಡೆಗೆ , ಕ್ರೀಡಾಪಟುಗಳಿಗೆ ರಾಜಮರ್ಯಾದೆ ಇದೆ. ರಾಷ್ಟ್ರೀಯ, ಅಂತರ್ ವಿ.ವಿ. ಕೂಟದಲ್ಲಿ ಗೆದ್ದವರು ಅಂತಾರಾಷ್ಟ್ರೀಯ ಅಂತರ್ ವಿವಿ ಕ್ರೀಡಾಕೂಟಕ್ಕೆ ಹೋಗಲು ಪ್ರಯಾಣ ವೆಚ್ಚ ನೀಡುವುದಕ್ಕೂ ನಮ್ಮವರಲ್ಲಿ ಹಣವಿಲ್ಲ. ಅವರಿಗೆ ಶಿಕ್ಷಣದಲ್ಲಿ ಗ್ರೇಸ್ ಮಾರ್ಕ್ ನೀಡುವ ವಿಷಯವೂ ಇನ್ನೂ ಚರ್ಚೆಯ ಹಂತದಲ್ಲೇ ಕೊಳೆಯುತ್ತಿದೆ ಎಂದು ಡಾ. ಆಳ್ವ ವಿಷಾದಿಸಿದರು.