ಸಾರಾಂಶ
ಕಲ್ಲಡ್ಕದಲ್ಲಿ ನೀರುಹರಿಯಲು ಚರಂಡಿ ಸಮರ್ಪಕವಾಗಿ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ ಎನ್ನಲಾಗಿದ್ದು, ಕಾಮಗಾರಿ ಗುತ್ತಿಗೆ ಸಂಸ್ಥೆ ಕಲ್ಲಡ್ಕದ ಸಮಸ್ಯೆಗಳ ಬಗ್ಗೆ ಹೆಚ್ಚುಗಮನಹರಿಸಬೇಕಿದೆ.
ಕನ್ನಡಪ್ರಭ ವಾರ್ತೆ ಬಂಟ್ವಾಳ ಇನ್ನೇನು ಕಲ್ಲಡ್ಕದ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಗೆ ತಾತ್ಕಾಲಿಕ ಸಮಸ್ಯೆ ಸಿಕ್ಕಿತು ಎಂಬ ಸಮಾಧಾನದಲ್ಲಿದ್ದ ನಾಗರಿಕರಿಗೆ ಮತ್ತೆ ಆತಂಕ ಎದುರಾಗಿದೆ. ಭಾನುವಾರ ಸುರಿದ ಭಾರೀ ಮಳೆಗೆ ಕಲ್ಲಡ್ಕದಲ್ಲಿ ಪ್ರವಾಹವೇ ಹರಿದಿದ್ದು, ಹೆದ್ದಾರಿ ಹೊಳೆಯಾಗಿ ಪರಿವರ್ತನೆಗೊಂಡಿತು.ಚತುಷ್ಪಥ ಕಾಮಗಾರಿ ಅವಾಂತರದಿಂದ ಕೃತಕ ನೆರೆಯ ಸಮಸ್ಯೆ ಮತ್ತೆ ಮುಂದುವರಿದಿದ್ದು, ಭಾನುವಾರ ಸುರಿದ ಭಾರಿ ಮಳೆಗೆ ಕಲ್ಲಡ್ಕ ಮೇಲಿನ ಪೇಟೆಯ ಹೆದ್ದಾರಿಯೇ ಜಲಾವೃತಗೊಂಡಿತ್ತು. ನೀರು ಹರಿಯಲು ಪೂರಕ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿಯೇ ನೀರು ನಿಂತಿದ್ದ ಕಾರಣ ದ್ವಿಚಕ್ರವಾಹನಗಳ ಸಹಿತ ಲಘುವಾಹನಗಳು ಸಂಚರಿಸಲು ಹರಸಾಹಸಪಟ್ಟವು. ಸಂಜೆಯ ಬಳಿಕ ಮಳೆಯ ಆರ್ಭಟ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ನಿಂತಿದ್ದ ನೀರು ತೆರವು ಮಾಡಿಕೊಡಲು ಗುತ್ತಿಗೆ ಸಂಸ್ಥೆಯ ಕಾರ್ಮಿಕರು ಶ್ರಮಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಕಲ್ಲಡ್ಕದ ಹೆದ್ದಾರಿ ಅವ್ಯವಸ್ಥೆಗೆ ವಾರದೊಳಗೆ ಕ್ರಮ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದರು, ಅದರ ಬೆನ್ನಲ್ಲೇ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು, ಕಲ್ಲಡ್ಕಕ್ಕೆ ಭೇಟಿ ನೀಡಿ ಮೂರು ಪರಿಹಾರ ಸೂತ್ರಗಳನ್ನು ಸೂಚಿಸಿದ್ದರು. ಅದರಂತೆ ಕಾಮಗಾರಿ ನಡೆಯುತ್ತಿತ್ತು. ಸಂಸದ ಬ್ರಿಜೇಶ್ ಚೌಟ ಅವರೂ ಕಾಮಗಾರಿಗೆ ಸೂಚನೆ ನೀಡಿದ್ದರು. ಆದರೆ ಭಾನುವಾರದ ಮಳೆಯ ಪ್ರವಾಹಕ್ಕೆ ಹೆದ್ದಾರಿಯಲ್ಲಿ ನೀರು ಹರಿದು ಕೃತಕನೆರೆ ಭೀತಿಯ ಆತಂಕ ಎದುರಾಗಿದೆ. ಕಲ್ಲಡ್ಕದಲ್ಲಿ ನೀರುಹರಿಯಲು ಚರಂಡಿ ಸಮರ್ಪಕವಾಗಿ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ ಎನ್ನಲಾಗಿದ್ದು, ಕಾಮಗಾರಿ ಗುತ್ತಿಗೆ ಸಂಸ್ಥೆ ಕಲ್ಲಡ್ಕದ ಸಮಸ್ಯೆಗಳ ಬಗ್ಗೆ ಹೆಚ್ಚುಗಮನಹರಿಸಬೇಕಿದೆ.