ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಅತಿರುದ್ರ ಜಪಯಜ್ಞ

| Published : Apr 27 2025, 01:48 AM IST

ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಅತಿರುದ್ರ ಜಪಯಜ್ಞ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ಮಾತೆಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪ್ರಪ್ರಥಮ ಬಾರಿಗೆ ಅತಿರುದ್ರ ಜಪಯಜ್ಞ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾವೇರಿ ಮಾತೆಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪ್ರಪ್ರಥಮ ಬಾರಿಗೆ ಅತಿರುದ್ರ ಜಪಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಜಪಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ 11ರಿಂದ 21ರವರೆಗೆ ನಡೆಯುವ ಜಪಯಜ್ಞಕ್ಕೆ ರಾಜ್ಯಾದ್ಯಂತದಿಂದ 50ಕ್ಕೂ ಅಧಿಕ ಋತ್ವಿಜರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.ಅವಧೂತರಾದ ಶ್ರೀ ಕಾಂತಾನಂದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವ ಕೋಟ್ಯಧಿಕ ಶ್ರೀ ರುದ್ರ ಜಪ ಕೈಂಕರ್ಯವು ಕಳೆದ ಐದು ವರ್ಷಗಳಿಂದ ರಾಜ್ಯದ ಎಲ್ಲೆಡೆ ನಡೆಯುತ್ತಿದ್ದು, 50ಲಕ್ಷ ರುದ್ರ ಜಪ ಪೂರ್ಣವಾಗಿದೆ. 2030ರ ಜನವರಿ 18ಕ್ಕೆ ಶಿವಮೊಗ್ಗದಲ್ಲಿ ಜಪಯಜ್ಞ ಸಾಂಗತವಾಗಲಿದೆ. ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಈ ಜಪಯಜ್ಞಕ್ಕೆ ಜಿಲ್ಲೆಯ ಆಸ್ತಿಕ ಬಂಧುಗಳು ಮುಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.ಮೇ 11ರಿಂದ 19ರವರೆಗೆ ತಲಕಾವೇರಿ ಸನ್ನಿಧಿಯಲ್ಲಿ 9 ದಿನಗಳು ಪ್ರತಿದಿನ ಮೂರು ಆವರ್ತ ಶ್ರೀ ರುದ್ರ ಜಪ ಜರುಗಲಿದೆ. ಋತ್ವಿಜರಿಗೆ ಊಟೋಪಹಾರ ಹಾಗೂ ಉಳಿದುಕೊಳ್ಳುವ ವ್ಯವಸ್ಥೆಯನ್ನು ಕೈಲಾಸಾಶ್ರಮದಲ್ಲಿ ಮಾಡಲಾಗಿದೆ. ಮೇ 20ರಂದು ಮಡಿಕೇರಿಯ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ ಹಾಗೂ ಮೂರು ಆವರ್ತ ಶ್ರೀ ರುದ್ರ ಜಪ ನಡೆಯಲಿದೆ. ಮೇ 21ರಂದು ಕಾವೇರಿ ತೀರದಲ್ಲಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ಸನ್ನಿಧಿಯಲ್ಲಿ ಶ್ರೀ ಚಂಡಿಕಾ ಹೋಮ ಎರಡು ಆವರ್ತ ಶ್ರೀರುದ್ರ ಜಪ ಹಾಗೂ ಮಹಾಪ್ರಸಾದ ವಿನಿಯೋಗವಾಗಲಿದೆ.ಜಪಯಜ್ಞದಲ್ಲಿ ಪಾಲ್ಗೊಂಡು ಸಹಕಾರ ನೀಡಲು ಇಚ್ಛಿಸುವವರು ಮೊಬೈಲ್ 99458 53543 ಹಾಗೂ 94486 47183 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ರಮೇಶ್ ಹೊಳ್ಳ ತಿಳಿಸಿದ್ದಾರೆ.ಜಪಯಜ್ಞ ಸಮಿತಿ ಅಸ್ತಿತ್ವಕ್ಕೆ :

ಕೊಡಗು ಅತಿರುದ್ರ ಜಪಯಜ್ಞ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಮಿತ್ತೂರು ಈಶ್ವರ ಭಟ್, ಕಾರ್ಯಾಧ್ಯಕ್ಷರಾಗಿ ಕೆ.ಎಸ್.ರಮೇಶ್ ಹೊಳ್ಳ, ಉಪಾಧ್ಯಕ್ಷರಾಗಿ ಮೂಗೂರು ರಾಮಚಂದ್ರ ರಾಜಶೇಖರ್, ಸಂಪತ್ ಕುಮಾರ್ ಸರಳಾಯ, ಶ್ರೀ ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಹರೀಶ್ ಭಟ್ ಹಾಗೂ ಪೋಷಕರಾಗಿ ಅನಂತ ಸುಬ್ಬರಾವ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಂಚಾಲನ ಸಮಿತಿಯಲ್ಲಿ ಮಡಿಕೇರಿ ವಿಭಾಗದಲ್ಲಿ ಸುಬ್ರಹ್ಮಣ್ಯ ಹೊಳ್ಳ, ಕುಶಾಲನಗರ ನಾಗೇಂದ್ರ ಬಾಬು, ಸೋಮವಾರಪೇಟೆ ಎಸ್.ಡಿ.ವಿಜೇತ್, ವಿರಾಜಪೇಟೆಯಲ್ಲಿ ಶ್ರೀಧರ ನೆಲ್ಲಿತ್ತಾಯ ಕಾರ್ಯನಿರ್ವಹಿಸಲಿದ್ದಾರೆ. ಪತ್ರಿಕಾ ಸಂಪರ್ಕಕ್ಕೆ ಬಿ.ಸಿ.ದಿನೇಶ್ ಹಾಗೂ ಜಪಯಜ್ಞ ಪ್ರತಿನಿಧಿಯಾಗಿ ಎಸಳೂರು ಉದಯಕುಮಾರ್ ನೇಮಕಗೊಂಡಿದ್ದಾರೆ.