ಚಕ್ರಬಾವಿಯಲ್ಲಿ ಶೀಘ್ರವೇ ಎಟಿಎಂ ಯಂತ್ರ ಅಳವಡಿಕೆ

| Published : Aug 18 2025, 12:00 AM IST

ಸಾರಾಂಶ

ಮಾಗಡಿ: ಬಿಡಿಸಿಸಿ ಬ್ಯಾಂಕ್‌ನಿಂದ ಅತಿ ಶೀಘ್ರದಲ್ಲೇ ಚಕ್ರಬಾವಿ ಗ್ರಾಮದಲ್ಲಿ ಎಟಿಎಂ ಯಂತ್ರ ಅಳವಡಿಸಲಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಭರವಸೆ ನೀಡಿದರು.

ಮಾಗಡಿ: ಬಿಡಿಸಿಸಿ ಬ್ಯಾಂಕ್‌ನಿಂದ ಅತಿ ಶೀಘ್ರದಲ್ಲೇ ಚಕ್ರಬಾವಿ ಗ್ರಾಮದಲ್ಲಿ ಎಟಿಎಂ ಯಂತ್ರ ಅಳವಡಿಸಲಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಭರವಸೆ ನೀಡಿದರು.

ತಾಲೂಕಿನ ಚಕ್ರಬಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ವಿವಿಧ ಮೂಲಗಳಿಂದ ಗಳಿಸಿದ ಹಣವನ್ನು ಖಾಸಗಿ ಬ್ಯಾಂಕ್ ಗಳಲ್ಲಿ ಇಡುವ ಬದಲು ನಿಮ್ಮ ಗ್ರಾಮದಲ್ಲೇ ಇರುವ ಸಹಕಾರ ಸಂಘಗಳಲ್ಲಿ ಇಡುವುದರಿಂದ ನಮಗೂ ಅನುಕೂಲವಾಗುತ್ತದೆ. ಇನ್ನೊಂದು ತಿಂಗಳಲ್ಲಿ ಬಿಡಿಸಿಸಿ ಬ್ಯಾಂಕ್ ವತಿಯಿಂದ ಚಕ್ರಬಾವಿ ಗ್ರಾಮದಲ್ಲಿ ಎಟಿಎಂ ಯಂತ್ರ ಅಳಡಿಲಾಗುವುದು ಎಂದರು.

ಸಂಘದ ಸಿಇಒ ಬೈರೇಶಗೆ ಈ ಭಾಗದ ಜನಗಳಿಂದ ಸಂಘಕ್ಕೆ ಕನಿಷ್ಠ 2 ಕೋಟಿ ಹಣ ಎಫ್‌ಡಿ ಇರಿಸಬೇಕು. ರೈತರು ಕುರಿ, ಕೋಳಿ ಸಾಕಾಣಿಕೆ, ತೋಟಗಾರಿಕೆ ಮಾಡಲು ನಬಾರ್ಡ್‌ನಿಂದ ಶೇ.50ರಷ್ಟು ಸಬ್ಸಿಡಿ ಸಾಲ ಸಿಗುತ್ತಿದೆ. ಒಂದು ಕೋಟಿ ಸಾಲ ಪಡೆದರೆ 50 ಲಕ್ಷ ಸಬ್ಸಿಡಿ ರೂಪದಲ್ಲಿ ಸಾಲ ಸಿಗುವುದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕು. ತಾಲೂಕಿನಲ್ಲಿ ಹಲವು ರೈತರು ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು.

ಚಕ್ರಬಾವಿ ವಿಎಸ್ಎಸ್ಎನ್ ಅಧ್ಯಕ್ಷ ಎಸ್.ಕಾಂತರಾಜು ಮಾತನಾಡಿ, 2024ನೇ ಸಾಲಿನಲ್ಲಿ ಸಂಘ ₹ 9 ಲಕ್ಷ ನಿವ್ವಳ ಲಾಭ ಗಳಿಸಿದ್ದು 1668 ಸದಸ್ಯರನ್ನು ಹೊಂದಿದೆ. ಸ್ವಸಹಾಯ ಸಂಘಗಳಿಗೆ 73 ಲಕ್ಷ ಸಾಲ ವಿತರಿಸಿದ್ದು, ಬೆಳೆ ಸಾಲ 9.40 ಕೋಟಿ ಸಾಲ ವಿತರಣೆ ಮಾಡಲಾಗಿದೆ. ವ್ಯವಸಾಯೇತರ ಸಾಲವಾಗಿ 13.71 ಲಕ್ಷ ಸಾಲ ವಿತರಣೆ, ಕಳೆದ ಸಾಲಿನಲ್ಲಿ 926 ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ ಎಂದರು.

ಇದೇ ವೇಳೆ ಸಂಘದ ಸದಸ್ಯರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಗಂಗಣ್ಣ, ನಿರ್ದೇಶಕರಾದ ರಾಮರಾಜು, ವೆಂಕಟೇಶ್, ಕಂಬೇಗೌಡ, ಶಿವರಾಮಯ್ಯ, ಪುಟ್ಟಸ್ವಾಮಿ, ಸಾವಂಧಮ್ಮ, ರಾಧಮ್ಮ, ದಾಕ್ಷಾಯಿಣಿ, ಬ್ಯಾಂಕ್ ಮೇಲ್ವಿಚಾರಕ ಧನಂಜಯ್ಯ, ಸಿಇಒ ಸಿ.ಎಚ್.ಬೈರೇಶ್, ಮುಖಂಡರಾದ ಮಾರೇಗೌಡ, ರವೀಂದ್ರ, ಪಂಚಾಕ್ಷರಿ, ಸೀಗೆಕುಪ್ಪೆ ಶಿವಣ್ಣ, ಎಸ್.ಕೆ. ಲೋಕೇಶ್, ಚಿಕ್ಕೇಗೌಡ, ಸ್ವಾಮಿ, ಯೋಗ ನರಸಿಂಹಯ್ಯ, ಮಂಜುಳಾ, ಸಂತೋಷ ಇತರರು ಭಾಗವಹಿಸಿದ್ದರು.