ಎಟಿಎಂ ಹಣ ಡ್ರಾ ಬಂದ ಹಿರಿಯನಾಗರಿಕರಿಗೆ ವಂಚನೆ: ಬಂಧನ

| Published : Aug 07 2024, 01:33 AM IST

ಸಾರಾಂಶ

ಎಟಿಎಂನಲ್ಲಿ ಹಣ ಡ್ರಾ ಮಾಡಿ ಕೊಡುವುದಾಗಿ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಟಿಎಂಗಳಲ್ಲಿ ಹಣ ಪಡೆಯಲು ನೆರವು ನೀಡುವ ನೆಪದಲ್ಲಿ ಹಿರಿಯ ನಾಗರಿಕರಿಗೆ ವಂಚಿಸಿ ಕಾರ್ಡ್ ಕದ್ದು ಬಳಿಕ ಹಣ ದೋಚುತ್ತಿದ್ದ ಮೂವರು ವಂಚಕರನ್ನು ಪ್ರತ್ಯೇಕವಾಗಿ ಸುಬ್ರಹ್ಮಣ್ಯಪುರ ಹಾಗೂ ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದ ಸಾಗರ್ ಅಲಿಯಾಸ್ ದಡಿಯಾ ದೀಪಕ್, ಬಿಹಾರ ಮೂಲದ ವಿವೇಕ್‌ ಕುಮಾರ್‌ ಹಾಗೂ ಚುನಿಲಾಲ್‌ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ 67 ಎಟಿಎಂ ಕಾರ್ಡ್‌ಗಳು ಹಾಗೂ ₹10 ಸಾವಿರ ಜಪ್ತಿಯಾಗಿದೆ.

ಕೆಲ ತಿಂಗಳ ಹಿಂದೆ ಬೇಗೂರು ಮುಖ್ಯರಸ್ತೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ಘಟಕದಲ್ಲಿ ಕೋಲಾರ ಜಿಲ್ಲೆ ಮಾಲೂರು ಭಂಟಹಳ್ಳಿ ಗ್ರಾಮದ ನಿವಾಸಿ ಹಣ ಪಡೆಯಲು ಹೋದಾಗ ವಂಚನೆ ನಡೆದಿತ್ತು. ಈ ಕೃತ್ಯದ ತನಿಖೆಗಿಳಿದ ಬೇಗೂರು ಪೊಲೀಸರು, ಇತ್ತೀಚೆಗೆ ಬೇಗೂರು ರಸ್ತೆ ಬಳಿಯ ಎಟಿಎಂ ಘಟಕದ ಹತ್ತಿರ ಶಂಕಾಸ್ಪದವಾಗಿ ಓಡಾಡುತ್ತಿದ್ದ ಸಾಗರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಅದೇ ರೀತಿ ಉತ್ತರಹಳ್ಳಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಸಂಜಯ್ ಸಿಂಗ್ ಎಂಬುವರಿಗೆ ಸಹಾಯ ಮಾಡುವ ನೆಪದಲ್ಲಿ ಈ ಇಬ್ಬರು ಬಿಹಾರಿಗಳು ವಂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಓದಿದ್ದು ಹೈಸ್ಕೂಲ್‌, ವಂಚನೆಯಲ್ಲಿ ಮಾಸ್ಟರ್‌:

ಶಿವಮೊಗ್ಗ ಜಿಲ್ಲೆಯ ಸಾಗರ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಎಟಿಎಂ ಕೇಂದ್ರಗಳ ಬಳಿ ಜನರಿಗೆ ವಂಚಿಸಿ ಹಣ ದೋಚುವ ಕೃತ್ಯಕ್ಕೆ ಆತ ಕುಖ್ಯಾತಿ ಪಡೆದಿದ್ದಾನೆ. ಎಟಿಎಂಗಳಿಗೆ ಬರುವ ಹಿರಿಯ ನಾಗರಿಕರು ಅಥವಾ ಅನ್ಯ ಭಾಷಿಕರನ್ನು ಗುರಿಯಾಗಿಸಿಕೊಂಡು ಆತ ಕೃತ್ಯ ಎಸಗುತ್ತಿದ್ದ. ಇದೇ ರೀತಿ ಕೃತ್ಯ ಸಂಬಂಧ ಆತನ ಮೇಲೆ ಉಪ್ಪಾರಪೇಟೆ ಹಾಗೂ ಚಂದ್ರಾಲೇಔಟ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣದ ಸಂಬಂಧ ಬಂಧಿತನಾಗಿದ್ದ ಈತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಅಟ್ಟಿದ್ದರು. ಆದರೆ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದು ತನ್ನ ದುಷ್ಕೃತ್ಯವನ್ನು ಸಾಗರ್‌ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಹೇಗೆ ವಂಚನೆ?:

ಎಟಿಎಂಗಳಲ್ಲಿ ಹಣ ಪಡೆಯುವ ಬರುವ ಜನರಿಗೆ ಸಹಾಯ ಮಾಡುವುದಾಗಿ ಹೇಳಿ ಪಿನ್ ನಂಬರ್ ಜತೆ ಎಟಿಎಂ ಕಾರ್ಡ್ ಪಡೆದು ತನ್ನಲ್ಲಿದ್ದ ನಕಲಿ ಕಾರ್ಡ್‌ ಹಾಕಿ ನಿಮ್ಮ ಕಾರ್ಡ್ ವರ್ಕ್ ಆಗುತ್ತಿಲ್ಲ. ಬೇರೆ ಎಟಿಎಂಗೆ ಹೋಗುವಂತೆ ಸಾಗರ್ ಹೇಳುತ್ತಿದ್ದ. ಈ ಮಾತು ನಂಬಿ ಗ್ರಾಹಕರು ತೆರಳುತ್ತಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಆ ಗ್ರಾಹಕನ ಅಸಲಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇದೇ ರೀತಿ ಕೆಲಸದ ನಿಮಿತ್ತ ಬೇಗೂರಿಗೆ ಬಂದಿದ್ದ ಮಾಲೂರಿನ ವ್ಯಕ್ತಿಗೆ ಆರೋಪಿ ವಂಚಿಸಿದ್ದ.

ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಬೇಗೂರು ರಸ್ತೆಗೆ ಬಂದಾಗ ಆತನನ್ನು ಬಂಧಿಸಿದ್ದಾರೆ. ಸಾಗರ್‌ನ ಬಳಿ 32 ಎಟಿಎಂ ಕಾರ್ಡ್‌ಗಳು ಪತ್ತೆಯಾಗಿವೆ. ವಂಚಿಸಲು ವಿವಿಧ ಬ್ಯಾಂಕ್‌ಗಳ ಎಟಿಎಂಗಳನ್ನು ಸದಾ ಕಾಲ ಜೇಬಿನಲ್ಲಿಟ್ಟುಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಬಿಹಾರಿ ಗ್ಯಾಂಗ್‌

ಕೂಲಿ ಕೆಲಸ ಅರಸಿ ನಗರಕ್ಕೆ ಬಂದಿದ್ದ ಬಿಹಾರದ ವಿವೇಕ್ ಹಾಗೂ ಚುನಿಲಾಲ್, ಜಿಗಣಿ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಸುಲಭವಾಗಿ ಹಣ ಗಳಿಸಲು ಈ ಇಬ್ಬರು, ಎಟಿಎಂ ಘಟಕಗಳಿಗೆ ಬರುವ ಹಿರಿಯ ನಾಗರಿಕರನ್ನು ಗುರಿಮಾಡಿ ಮಾಡಿ ಹಣ ದೋಚುತ್ತಿದ್ದರು. ಆರೋಪಿಗಳಿಂದ 37 ಎಟಿಎಂ ಕಾರ್ಡ್‌ಗಳು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.