ಇಷ್ಠಲಿಂಗ ಪೂಜೆಯಿಂದ ಆತ್ಮಶುದ್ಧಿ: ಗುರುಮಹಾಂತ ಶ್ರೀ

| Published : Jan 23 2025, 12:46 AM IST

ಸಾರಾಂಶ

ಆಧ್ಯಾತ್ಮ, ಆತ್ಮಬಲ ವೃದ್ಧಿಗೆ ಮೌನಯೋಗವೂ ಮನುಷ್ಯನನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯುತ್ತದೆ. ಪ್ರತಿಯೊಬ್ಬರಿಗೂ ಮೌನಯೋಗದ ಅನುಷ್ಠಾನ ದೊಡ್ಡ ಶಕ್ತಿ ತುಂಬುತ್ತದೆ

ಕನ್ನಡಪ್ರಭ ವಾರ್ತೆ ಗುಳೇಗುದಗುಡ್ಡ

ಮನುಷ್ಯ ತನ್ನ ಆತ್ಮಶುದ್ಧಿಗೆ ಪ್ರತಿದಿನ ತಪ್ಪದೇ ಶಿವಯೋಗ, ಇಷ್ಠಲಿಂಗ ಪೂಜೆ ಮಾಡಿಕೊಳ್ಳುವ ರೂಢಿ ಬೆಳೆಸಿಕೊಳ್ಳಬೇಕು. ಮನುಷ್ಯ ಮನಸ್ಸಿನಿಂದಲೇ ಮಾನವ, ಮನಸ್ಸಿನಿಂದಲೇ ರಾಕ್ಷಸನಾಗುತ್ತಾನೆ. ಮನಸ್ಸು ಚಂಚಲ. ಅದನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿ ಅದು ಮೌನ ತಪಸ್ಸಿಗಿದೆ. ಅದನ್ನು ಗುರುಸಿದ್ದ ಶ್ರೀಗಳು ಮೌನಾನುಷ್ಠಾನದ ಮೂಲಕ ಸಾಧಿಸಿದ್ದಾರೆ ಎಂದು ಇಳಕಲ್ಲ ಗುರುಮಹಾಂತ ಶ್ರೀಗಳು ಹೇಳಿದರು.

ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ನೂತನ ಪೀಠಾಧಿಕಾರಿ ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳ ಪೀಠಾರೋಹಣ, 21 ದಿನಗಳ ಲಿಂಗಪೂಜಾ ಮೌನಾನುಷ್ಠಾನ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನಸ್ಸನ್ನು ನಾವು ಗೆಲ್ಲಬೇಕು. ಇಲ್ಲದಿದ್ದರೆ ಅದು ನಮ್ಮನ್ನು ಕೆಟ್ಟತನಕ್ಕೆ ದೂಕಿಬಿಡುತ್ತದೆ. ಮನಸ್ಸನ್ನು ಗೆದ್ದರೆ ನಾವೆಲ್ಲವನ್ನು ಗೆದ್ದಂತೆ. ಮನಸ್ಸು ಶಾಂತವಾಗುತ್ತದೆ. ಕಂಡಿದ್ದೆಲ್ಲವೂ ಶಿವಮಯವಾಗುತ್ತದೆ. ಇದನ್ನು ಹಿಡಿದಿಟ್ಟುಕೊಳ್ಳಲು ನಾವೆಲ್ಲ ಲಿಂಗಪೂಜೆ ಮಾಡಿಕೊಳ್ಳಬೇಕು ಎಂದರು.

ಶಿರೂರು ಮಹಾಂತ ತೀರ್ಥದ ಡಾ.ಬಸವಲಿಂಗ ಶ್ರೀಗಳು ಮಾತನಾಡಿ, ಎಲ್ಲ ಯೋಗಗಳ ಸಮನ್ವಯತೆಯೇ ಶಿವಯೋಗ. ಶಿವಯೋಗ ಒಳಗುಟ್ಟಿನಿಂದ ಕೂಡಿದೆ. ಅಂತರಂಗ, ಬಹಿರಂಗದ ಆತ್ಮಶುದ್ಧಿಗೆ ಇದು ನೆರವಾಗುತ್ತದೆ. ಆಧ್ಯಾತ್ಮ, ಆತ್ಮಬಲ ವೃದ್ಧಿಗೆ ಮೌನಯೋಗವೂ ಮನುಷ್ಯನನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯುತ್ತದೆ. ಪ್ರತಿಯೊಬ್ಬರಿಗೂ ಮೌನಯೋಗದ ಅನುಷ್ಠಾನ ದೊಡ್ಡ ಶಕ್ತಿ ತುಂಬುತ್ತದೆ ಎಂದರು.

ನೂತನ ಜಗದ್ಗುರು ಶ್ರೀ ಗುರುಸಿದ್ದ ಪಟ್ಟದಾರ್ಯ ಶ್ರೀಗಳು ಮೌನಾನುಷ್ಠಾನ ಮಂಗಲಗೊಳಿಸಿ ಮಾತನಾಡಿ, 21 ದಿನಗಳ ಕಾಲ ಮೌನವಾಗಿ ಉಳಿದು ಲಿಂಗಪೂಜೆಯಲ್ಲಿ ತೊಡಗಿದ್ದು ಆತ್ಮಬಲ, ಮನೋಬಲ ವೃದ್ಧಿಗೆ ಸಹಕಾರಿಯಾಗಿದೆ. ದೈಹಿಕವಾಗಿ ಮನುಷ್ಯ ಶ್ರಮಿಕನಾಗಬೇಕು. ದೇಹ ದಂಡಿಸಬೇಕು. ಮನಸ್ಸು ಹತೋಟೆಯಲ್ಲಿ ಇಡಬೇಕು. ಅದನ್ನು ಮೌನದಿಂದ ಸಾಧಿಸಲು ಸಾಧ್ಯ ಎಂದರು.

ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು, ಶ್ರೀಅಭಿನವ ಒಪ್ಪತ್ತೇಶ್ವರ ಶ್ರೀಗಳು, ಬಸವ ಬೆಳಗು ಪತ್ರಿಕೆ ಸಂಪಾದಕ ಸಿದ್ದಣ್ಣ ಲಂಗೋಟೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಈರಣ್ಣ ಚಿಂದಿ, ನಾಗೇಶಪ್ಪ ಪಾಗಿ, ಸಂಗನಬಸಪ್ಪ ಚಿಂದಿ, ಪಟ್ಟಸಾಲಿ ನೇಕಾರ ಸಮಾಜ ಜಿಲ್ಲಾಧ್ಯಕ್ಷ ಶಿವಾನಂದ ನಾರಾ, ತಾಲೂಕು ಅಧ್ಯಕ್ಷ ಈರಣ್ಣ ಶೇಖಾ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ರವೀಂದ್ರ ಗೌಡ್ರ, ಆನಂದತಿಪ್ಪಾ ಗೌಡ್ರ, ಚನ್ನಪ್ಪ ಚಿಂದಿ, ರಾಜು ಜವಳಿ, ದೊಡ್ಡಬಸು ಉಂಕಿ ಇತರರು ಇದ್ದರು.