ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ತಾಲೂಕಿನಲ್ಲಿ ಇತ್ತೀಚೆಗೆ ವೈದ್ಯರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ, ಹಲ್ಲೆ ಮಾಡುವುದು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಹಾನಿ ಮಾಡುವ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಗೂಂಡಾಗಳಿಗೆ ಶಿಕ್ಷೆ ನೀಡಿ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಭಾರತೀಯ ವೈದ್ಯಕೀಯ ಸಂಘಟನೆ ಒತ್ತಾಯಿಸಿತು.ಪಟ್ಟಣದ ಜಾಲಹಳ್ಳಿ ವೃತ್ತದಿಂದ ಡಾ. ಬಿ.ಆರ್.ಅಂಬೇಡ್ಕರ್, ಗಾಂಧಿ, ಬಸವ ವೃತ್ತದ ಮಾರ್ಗವಾಗಿ, ತಾಲೂಕು ಘಟಕದ ಅಧ್ಯಕ್ಷ ಡಾ. ಎಚ್.ಎ.ನಾಡಗೌಡ, ಕಾರ್ಯದರ್ಶಿ ಡಾ.ರಾಜೇಂದ್ರ ಜಹಗೀರದಾರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿ, ಮಿನಿ ವಿಧಾನಸೌಧದಲ್ಲಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ಕುಲಕರ್ಣಿಗೆ ಸೋಮವಾರ ಮನವಿ ಸಲ್ಲಿಸಿದರು.
ರೋಗಿಯನ್ನು ರಕ್ಷಿಸಲು ವೈದ್ಯರು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ರೋಗಿ ಮೃತಪಟ್ಟರೆ ಕುಟುಂಬದವರ ಜೊತೆಗೆ ವೈದ್ಯರು ಕೂಡ ನೋವು ಅನುಭವಿಸುತ್ತಾರೆ. ರೋಗಿಯನ್ನು ರಕ್ಷಿಸಲು ಆಗಲಿಲ್ಲ ಎಂಬ ಒಳನೋವು ಕಾಡುತ್ತಿರುತ್ತದೆ. ಆದರೆ ಕೆಲವರು ಉದ್ದೇಶ ಪೂರ್ವಕ ಗಲಾಟೆ ಮಾಡುವ ಪ್ರವೃತ್ತಿ ವೈದ್ಯಕೀಯ ಸೇವಾ ವಾತಾವರಣ ಮೇಲೆ ಕಪ್ಪು ಚುಕ್ಕಿಯಂತೆ ಕಾಣುತ್ತಿದೆ.ಇತ್ತೀಚೆಗೆ ಆರ್.ಕೆ ಹಾಸ್ಪಿಟಲ್ ಸೇರಿದಂತೆ ಅನೇಕ ಆಸ್ಪತ್ರೆಗಳ ಮೇಲೆ, ವೈದ್ಯರ ಮೇಲೆ ಹಲ್ಲೆಯಂತಹ ಘಟನೆಗಳು ನಡೆಯುತ್ತಿವೆ. ಅಸಂಬದ್ಧ ವಿಚಾರಣೆ, ವಿನಾ ಕಾರಣ ಕಿರುಕುಳದಂತಹ ಪ್ರಕ್ರಿಯೆಗಳು ಪ್ರಾರಂಭಗೊಂಡಿವೆ. ಕೂಡಲೇ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ರಕ್ಷಣೆ, ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ಒದಗಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ನಾಗರಾಜ ತಾಳಿಕೋಟೆ, ಕೀರ್ತಿರಾಣಿ ಜಹಗೀರದಾರ, ಡಾ.ನರೇಂದ್ರ ಪಾಟೀಲ್, ಡಾ.ಸಿದ್ರಾಮರೆಡ್ಡಿ, ಡಾ.ದೇವರಾಜ ದೇಸಾಯಿ, ಡಾ.ಗಿರಿಜಾ ಮಂಜುನಾಥ ಬೆನಕನ್, ಡಾ.ಗಿರೀಶ ಅಬಕಾರಿ, ಡಾ.ಯಾದವ, ಡಾ.ಒಂಕಾರ, ಡಾ.ಸೂಗರೆಡ್ಡಿ, ಡಾ.ಬಸವರಾಜರೆಡ್ಡಿ, ರವಿ ಉಭಾಳೆ, ಡಾ.ರಾಮನಗೌಡ ನವಿಲಗುಡ್ಡ, ಡಾ.ಸಾಬಣ್ಣ ನಾಯಕ ನಾಗಡದಿನ್ನಿ, ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.ವ್ಯಾಪಕ ಬೆಂಬಲ:
ಭಾರತೀಯ ವೈದ್ಯಕೀಯ ಸಂಘ ತಾಲೂಕು ಘಟಕ ಕರೆ ನೀಡಿದ್ದ ಪ್ರತಿಭಟನೆಗೆ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್ ಅಂಚೆಸೂಗೂರ, ಸಿಎಸ್ ಪಾಟೀಲ್, ಭಾನುಪ್ರಕಾಶ ಖೆಣೇದ್,ಬುಡ್ಡನಗೌಡ ಜಾಗಟಕಲ್,ಅಳ್ಳಪ್ಪ ಅಮರಾಪೂರ.ವೆಂಕಟರಾಯ ಬೆನಕನ್,ಚಂದಪ್ಪ ಅಕ್ಕರಕಿ,ನಾಗರಾಜ ಗೌರಂಪೇಟ,ಶರಣಗೌಡ ಗೌರಂಪೇಟ,ಲಕ್ಷ್ಮಣ ಜ್ಯೋತಿ,ಫಜುಲುಲ್ಲಾ ಸಾಜೀದ್, ಹಾಗೂ ಅನೇಕ ವ್ಯಾಪರಸ್ತರು ಬೆಂಬಲ ವ್ಯಕ್ತಪಡಿಸಿದರು.ಮೂರು ದಿನಗಳ ಕಾಲ ಸೇವೆ ಬಂದ್: ದೇವದುರ್ಗ ತಾಲೂಕಿನಾದ್ಯಂತ ಖಾಸಗಿ ವೈದ್ಯಕೀಯ ಸೇವೆಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ರೋಗಿಗಳು ಪರದಾಡುತ್ತಿರುವುದು ಕಂಡು ಬಂತು. ಸಾಂಕೇತಿಕವಾಗಿ ತಾಲೂಕಿನಾದ್ಯಂತ ಖಾಸಗಿ ಆಸ್ಪತ್ರೆ, ವೈದ್ಯರ ಸೇವೆ 3 ದಿನಗಳ ವರೆಗೆ ಸ್ಥಗಿತಗೊಳಿಸಲಾಗುವುದು. ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ವೈದ್ಯರು ಎಚ್ಚರಿಸಿದ್ದಾರೆ.