ಸಾರಾಂಶ
ದರ್ಬೆ ವೃತ್ತದಿಂದ ಆರಂಭಗೊಂಡು ಸುಮಾರು ೧೦೦ ಮೀ.ಟರ್‌ಗೂ ಹೆಚ್ಚು ದೂರ ರಸ್ತೆ ಮಧ್ಯೆ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಬಾಂಗ್ಲಾದಲ್ಲಿನ ಹಿಂದೂಗಳಿಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಪುತ್ತೂರು ತಾಲೂಕು ಆಶ್ರಯದಲ್ಲಿ ಸೋಮವಾರ ಸಂಜೆ ನಗರದ ದರ್ಬೆ ವೃತ್ತದ ಬಳಿ ಬೃಹತ್ ಮಾನವ ಸರಪಳಿ ನಡೆಯಿತು.ನಗರದ ದರ್ಬೆ ವೃತ್ತದಿಂದ ಆರಂಭಗೊಂಡು ಸುಮಾರು ೧೦೦ ಮೀ.ಟರ್‌ಗೂ ಹೆಚ್ಚು ದೂರ ರಸ್ತೆ ಮಧ್ಯೆ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ನಮ್ಮ ನೆರೆ ರಾಷ್ಟ್ರವಾಗಿರುವ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಪರ ನಡೆಯುತ್ತಿರುವ ದೌರ್ಜನ್ಯವನ್ನು ಇಡೀ ಜಗತ್ತೇ ಖಂಡಿಸಬೇಕಾಗಿದೆ. ಈ ಬಗ್ಗೆ ಭಾರತೀಯರಾದ ನಾವು ಎಚ್ಚೆತ್ತುಕೊಂಡು ಪ್ರತಿಭಟಿಸದಿದ್ದರೆ ನಮ್ಮ ದೇಶಕ್ಕೂ ಮುಂದೆ ಸಮಸ್ಯೆಯಾಗುವ ಸಾಧ್ಯತೆ ಇದೆ. ವಿಶ್ವ ಹಿಂದೂ ಸಮುದಾಯ ಬಾಂಗ್ಲಾ ಹಿಂದೂಗಳ ರಕ್ಷಣೆಗಾಗಿ ಆಗ್ರಹ ಮಾಡುತ್ತಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಶಾಂತಿ, ಸಹಬಾಳ್ವೆಗೆ ಸಂದೇಶ ನೀಡಿದ ಹಿಂದೂ ಧರ್ಮದ ಜನತೆಗೆ ಬಾಂಗ್ಲಾದಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಅಲ್ಲಿನ ಹಿಂದೂಗಳ ಬದುಕುವ ಮೂಲಭೂತ ಹಕ್ಕು, ದೇವಾಲಯಗಳ ರಕ್ಷಣೆ ಮಾಡಬೇಕು. ಘಟನೆಯನ್ನು ಜಗತ್ತೇ ಖಂಡಿಸಬೇಕು. ಹಿಂದೂ ಉಳಿದರೆ ಮಾತ್ರ ಜಗತ್ತು ಉಳಿಯಬಹುದು ಎಂದರು. ಹಿಂದೂ ಸಂಘಟನೆಗಳ ಮುಖಂಡ ಮೋಹನ್ ದಾಸ್ ಮಾತನಾಡಿ ರಾಜಕೀಯ ಉದ್ದೇಶದೊಂದಿಗೆ ಆರಂಭಗೊಂಡ ಬಾಂಗ್ಲಾ ಗಲಭೆ ಅನಂತರ ಹಿಂದೂಗಳ ಮೇಲೆ ಅತಿಕ್ರಮಣದ ಕಡೆಗೆ ತಿರುಗಿದೆ.ಈ ನಿಟ್ಟಿನಲ್ಲಿ ಭಾರತ ದೇಶದ ಎಲ್ಲಾ ಪ್ರಾಂತ್ಯಗಳಲ್ಲಿ ಮಾನವ ಸರಪಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಬಿಜೆಪಿ ಗ್ರಾಮಾಂತರ ಮಂಡಲ ಅದ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪಕ್ಷ ಹಾಗೂ ಸಂಘಟನೆಗಳ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಶ್ರೀಧರ್ ತೆಂಕಿಲ, ರಾಜೇಶ್ ಬನ್ನೂರು, ಅಪ್ಪಯ್ಯ ಮಣಿಯಾಣಿ, ಬಂಗಾರಡ್ಕ ವಿಶ್ವೇಶ್ವರ ಭಟ್, ಅಜಿತ್ ರೈ ಹೊಸಮನೆ, ಅನಿಲ್ ತೆಂಕಿಲ, ಪ್ರಶಾಂತ್ ಮಾರ್ತ, ಭಾಮಿ ಜಗದೀಶ್ ಶೆಣೈ, ದಾಮೋದರ ಪಾಟಾಳಿ, ವಿದ್ಯಾ ಆರ್. ಗೌರಿ, ಶಶಿಕಲಾ, ರೂಪಲೇಖಾ, ಯುವರಾಜ ಪೆರ್ಯತ್ತೋಡಿ, ವಿಶ್ವನಾಥ ಗೌಡ, ವಾಮನ ಪೈ, ದೀಕ್ಷಾ ಪೈ, ಡಾ. ಸುರೇಶ್ ಪುತ್ತೂರಾಯ, ಚಂದ್ರಶೇಖರ್ ಬಪ್ಪಳಿಗೆ, ಸೀತಾರಾಮ ರೈ ಕೆದಂಬಾಡಿಗುತ್ತು, ಲಕ್ಷಣ ಗೌಡ ಬೆಳ್ಳಿಪ್ಪಾಡಿ, ದಿನೇಶ್ ಪಂಜಿಗ, ಸುಂದರ ಪೂಜಾರಿ ಬಡಾವು ಮತ್ತಿತರರು ಪಾಲ್ಗೊಂಡಿದ್ದರು. ವಿಶಾಖ್ ಸಸಿಹಿತ್ಲು ಸ್ವಾಗತಿಸಿ, ವಂದಿಸಿದರು.