ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ತಾಳಿಕೋಟಿ ಹರಳಯ್ಯ ಸಮಾಜದ ಮೇಲೆ ಅನ್ಯಾಯವಾಗಿದೆ ಎಂದು ಆರೋಪಿಸಿ ಹರಳಯ್ಯ ಸಮಾಜದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಟಿ.ಭೂಬಾಲನ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಹರಳಯ್ಯ ಸಮಾಜದ ಮುಖಂಡ ರಾಘವೇಂದ್ರ ಬಿಜಾಪುರ ಮಾತನಾಡಿ, ತಾಳಿಕೋಟಿ ಬಸ್ ನಿಲ್ದಾಣದ ಕಾಂಪೌಂಡ್ ಹೊಂದಿಕೊಂಡಿರುವ ಪರಿಶಿಷ್ಠ ಜಾತಿಗೆ ಸೇರಿದ ಸಮಾಜದ ಅಧಿಕೃತ ಲಿಡ್ಕರ್ ಅಂಗಡಿಗಳನ್ನು ನ್ಯಾಯಾಲಯದ ಆದೇಶವಿದ್ದರೂ ದುರುದ್ದೇಶಪೂರ್ವಕವಾಗಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಕೆಡವಿ ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.
ತಾಳಿಕೋಟೆಯಲ್ಲಿ ದೌರ್ಜನ್ಯ ಖಂಡಿಸಿ ಕಳೆದ 23 ದಿನಗಳಿಂದ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸಲಾಗಿದೆ. ನಮ್ಮ ಕುಟುಂಬಗಳ ಉಪಜೀವನಕ್ಕೆ ಯಾವುದೇ ಕೆಲಸವಿಲ್ಲದೇ ಊಟಕ್ಕೆ ಪರಿತಪಿಸುವಂವತಾಗಿದೆ. ನಮ್ಮ ಮಕ್ಕಳ ವಿದ್ಯಾಭ್ಯಾಸ ಶಾಲೆ ಫೀ, ಟ್ಯೂಷನ್ ಫೀ ಹೇಗೆ ಭರಿಸಬೇಕೆಂಬುದು ದಿಕ್ಕು ತೋಚದಂತಾಗಿದೆ. ತಾಳಿಕೋಟಿ ನಗರ ಸೌಂದರ್ಯೀಕರಣ ನೆಪವನ್ನು ಮುಂದಿಟ್ಟುಕೊಂಡು ದಲಿತರನ್ನು ಸದರಿ ಸ್ಥಳದಿಂದ ಓಡಿಸಿ ಮತ್ತೆ ಅದೇ ಸ್ಥಳ ಮಳಿಗೆಗಳನ್ನು ನಿರ್ಮಾಣ ಮಾಡಿ ಇತರರಿಗೆ ಮಳಿಗೆಗಳನ್ನು ಬಾಡಿಗೆ ನೀಡಬೇಕೆಂಬ ಹುನ್ನಾರ ನಡೆಸಲಾಗಿದೆ. ದುರುದ್ದೇಶದಿಂದ ಅಲ್ಲಿರುವ ಅಂಗಡಿಗಳನ್ನು ಏಕಾಏಕಿ ನೋಟಿಸ್ ನೀಡದೇ, ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಲಿಡ್ಕರ್ ಅಂಗಡಿಗಳನ್ನು ತೆರವು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಂಗಡಿಗಳಿಂದ ರಸ್ತೆ ಅಗಲಿಕರಣಕ್ಕೆ ಅಡಚಣೆಯಾಗಿಲ್ಲ. ಸಮಗಾರ(ಚಮ್ಮಾರ) ಸಮಾಜದವರು ಚಪ್ಪಲಿ ಮಾರುವವರು ಬಸ್ ನಿಲ್ದಾಣ ಮುಂದೆ ಇದ್ದರೆ ನಗರದ ಸೌಂದರ್ಯ ಕುಗ್ಗಿಸುತ್ತದೆ ಎನ್ನುವ ಜಾತಿ ಮೇಲಿರುವ ಕೀಳರಿಮೆಯಿಂದ ಈ ರೀತಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಖುದ್ದಾಗಿ ಬಂದು ಶಾಶ್ವತ ಪರಿಹಾರ ನೀಡಿದಿದ್ದರೆ ಡಿ.8ರಂದು ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.ಪ್ರತಿಭಟನಾಕಾರರ ಮನವಿ ಆಲಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರತಿಕ್ರಿಯಿಸಿ, ಅದೇ ಸ್ಥಳದಲ್ಲಿ ನಿಮಗೆ ಮುಂದುವರೆಸಿದರೆ ಮತ್ತೆ ಅವರು ಅಂಗಡಿಗಳನ್ನು ತೆರವುಗೊಳಿಸಬಹುದು. ಅದನೆಲ್ಲ ಯೋಚಿಸಿ ತಮಗೆ ಶಾಶ್ವತವಾದ ಪರಿಹಾರವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ವ್ಯಾಪರಕ್ಕೆ ಸೂಕ್ತ ಸ್ಥಳವನ್ನು ನಾವು ನೋಡುತ್ತಿದ್ದೇವೆ. ಅದರ ಜೊತೆಗೆ ನೀವು ನೋಡಿ ಅಥವಾ ಸೂಕ್ತ ಸ್ಥಳವಿದ್ದಲ್ಲಿ ನನಗೆ ತಿಳಿಸಿ ನಾನು ಖಂಡಿತ ತಮಗೆ ಶಾಶ್ವತ ಪರಿಹಾರವನ್ನು ಕಲ್ಪಿಸುತ್ತೇನೆಂದು ಆಶ್ವಾಸನೆ ನೀಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಮಗಾರ ಹರಳಯ್ಯ ಸಮಾಜ ಬಾಂಧವರು ಈಗಾಗಲೇ ತಾಳಿಕೋಟಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ಮಳಿಗೆಗಳನ್ನು ನಿರ್ಮಿಸಿ ಕೊಡಿ ಎಂದು ಕೇಳಿಕೊಂಡರು ಹಾಗೂ ನಮಗೆ ಒಂದು ದಿನದ ಗಡುವು ಕೊಡಿ ಚರ್ಚೆ ಮಾಡಿ ಬೇರೆ ಸೂಕ್ತ ಸ್ಥಳದ ಬಗ್ಗೆ ಚರ್ಚಿಸಿ ತಮಗೆ ಭೇಟಿಯಾಗಿ ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಎಂದರು. ಅದಕ್ಕೆ ಸ್ಪಂದಿಸದಿದ್ದಲ್ಲಿ ಡಿ.8ರಂದು ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಈ ವೇಳೆ ಶ್ರೀಮಂತ ಹೊನ್ನಕಾಂಬಳೆ, ಲಕ್ಷ್ಮಣ ಕುಂದರಗಿ, ಸುನೀಲ ಜೈನಾಪೂರ, ಸಂತೋಷ ಬಗಲಿ, ಮುತ್ತಪ್ಪ ಜೋಗಿ, ಚಂದ್ರಶೇಖರ ವಿಜಾಪುರ, ಪರಶುರಾಮ ಇಲಕಲ್ಲ, ಪರಶುರಾಮ ವಿಜಾಪುರ, ಶೌಕತ ಲಾಹೋರಿ, ಮಧು ಇಲಕಲ್ಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.