ಪಂಜಾಬಿನಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡನೀಯ

| Published : Apr 03 2025, 12:33 AM IST

ಸಾರಾಂಶ

ಪಂಜಾಬಿನಲ್ಲಿ ರೈತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಹಾಗೂ ವಿದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳ ಬಗ್ಗೆ, ರೈತರ ಮತ್ತು ಕೃಷಿ ಕಾರ್ಮಿಕರ ಸಾಲ ಮನ್ನಾ ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಿಪಟೂರು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಪಂಜಾಬಿನಲ್ಲಿ ರೈತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಹಾಗೂ ವಿದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳ ಬಗ್ಗೆ, ರೈತರ ಮತ್ತು ಕೃಷಿ ಕಾರ್ಮಿಕರ ಸಾಲ ಮನ್ನಾ ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಿಪಟೂರು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್‌ಗೆ ಮನವಿ ಸಲ್ಲಿಸಿದರು.

ಹಸಿರು ಸೇನೆ ತಾಲೂಕು ಅಧ್ಯಕ್ಷ ದೇವರಾಜ್ ತಿಮ್ಲಾಪುರ ಮಾತನಾಡಿ, ಪಂಜಾಬಿನ ಗಡಿಭಾಗದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ಬುಲ್ಡೋಜರ ಬಳಸಿ ಪ್ರತಿಭಟನಾ ಸ್ಥಳವನ್ನು ಧ್ವಂಸಗೊಳಿಸಿ ಹಾಗೂ ಪ್ರತಿಭಟನಾಕಾರರು ಮೇಲೆ ಹಲ್ಲೇ ಮಾಡಿದೆ. ಕಾರ್ಪೊರೇಟ್ ಬಂಡವಾಳಶಾಹಿ ಕುಳಗಳ ಒತ್ತಡಕ್ಕೆ ಮನದಿರುವ ಪಂಜಾಬಿನ ಎಎಪಿ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಧೋರಣೆ ಖಂಡನೀಯ. ಕೇಂದ್ರ ಸರ್ಕಾರವು ದೇಶದ ರೈತರಿಗೆ ಮಾತು ಕೊಟ್ಟಂತೆ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಬೇಕು ಎಂದರು. ಸಂಯುಕ್ತ ಹೋರಾಟ ಕರ್ನಾಟಕದ ಭೈರನಾಯ್ಕನಹಳ್ಳಿ ಲೋಕೇಶ್ ಮಾತನಾಡಿ, ಪಂಜಾಬಿನಲ್ಲಿ ರೈತರ ವಿರುದ್ದದ ಧೋರಣೆ ಖಂಡಿಸಿ ರಾಷ್ಟ್ರವ್ಯಾಪಿ ಸಂಯುಕ್ತ ಕಿಸಾನ್ ಮೋರ್ಚಾವು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಕೃಷಿಯ ಮೇಲೆ ಅವಲಂಬಿತವಾಗಿರುವ ಶೇ.೮೭ರಷ್ಟು ಸಣ್ಣ ಮತ್ತು ಅತಿ ಸಣ್ಣ ಕೃಷಿ ಕಾರ್ಮಿಕ, ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರವು ಕೃಷಿ ಮಾರುಕಟ್ಟೆಯ ಹಾನಿಕಾರಕ ರಾಷ್ಟ್ರೀಯ ನೀತಿ ಚೌಕಟ್ಟನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳಿಗೆ ಪ್ರಸ್ತಾಪಿಸಿದೆ.

ಅಸ್ತಿತ್ವದಲ್ಲಿರುವ ಕೃಷಿ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ದೊಡ್ಡ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸುವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇದು ರೈತರ ಸ್ವಾತಂತ್ರ್ಯವನ್ನು ಮತ್ತಷ್ಟು ಹಾಳು ಮಾಡಲಿದೆ. ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ತರುತ್ತಿರುವ ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳಿಂದಾಗಿ ಇಂದು ರೈತರ ಬದುಕು ಬೀದಿಪಾಲಾಗುತ್ತಿದೆ .ಇದರ ವಿರುದ್ಧ ನ್ಯಾಯಯುತವಾಗಿ ಹೋರಾಟ ಮಾಡುವುದು ರೈತರ ಹಕ್ಕು. ಅದನ್ನು ದಮನಕಾರಿ ನೀತಿಗಳಿಂದ ಹತ್ತಿಕ್ಕುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ತಿಮ್ಮೇಗೌಡ ಗಡಬನಹಳ್ಳಿ, ಮನೋಹರ್ ಪಾಟೀಲ್, ಬಸವರಾಜು, ಕಿರಣ್, ಸಿದ್ದೇಶ್, ಯೋಗೇಶ್ ಹಾಲ್ಕುರಿಕೆ ಮತ್ತಿತರರಿದ್ದರು.