ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಪಂ ಕಾರ್ಯದರ್ಶಿ ನಾಗಪ್ಪ ಕೊಡ್ಲಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಖಂಡಿಸಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ ಮತ್ತು ಜಿಪಂ ಸಿಇಒ ರಾಹುಲ್ ಶಿಂಧೆ ಅವರಿಗೆ ಮನವಿ ಸಲ್ಲಿಸಲಾಯಿತು.ಗ್ರಾಪಂ ಕಾರ್ಯದರ್ಶಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದವರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ನರೇಗಾ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಗ್ರಾಪಂ ಕಚೇರಿಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ನಾಗಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹಲ್ಲೆಯಂತಹ ಘಟನೆಗಳಿಂದಾಗಿ ಗ್ರಾಪಂ ಸಿಬ್ಬಂದಿಯ ಆತ್ಮಸ್ಥೈರ್ಯವನ್ನೇ ಕುಗ್ಗಿಸಲಾಗುತ್ತಿದೆ. ಹಲ್ಲೆಕೋರರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಅನ್ಯೋನ್ಯತೆ, ಸೌಹಾರ್ದಯುತವಾಗಿ ಇದ್ದಾರೆ. ಇಲ್ಲಿ ಯಾವುದೇ ಭಾಷಾ ವಿವಾದ ಇಲ್ಲವೇ ಇಲ್ಲ ಎಂದರು.ಈ ಸಂದರ್ಭದಲ್ಲಿ ಪಿಡಿಒ ಜಿಲ್ಲಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದ ಹೊಳೆನ್ನವರ, ಸುಜಾತಾ ಬಟಕುರ್ಕಿ ಮೊದಲಾದವರು ಪಾಲ್ಗೊಂಡಿದ್ದರು.ಭಾಷಾ ವಿವಾದವಲ್ಲ: ಗ್ರಾಪಂ ಕಾರ್ಯದರ್ಶಿ ಸ್ಪಷ್ಟನೆ
ಬೆಳಗಾವಿ: ನನ್ನ ಮೇಲೆ ಹಲ್ಲೆ ಮಾಡಿದ ವಿಚಾರಕ್ಕೂ ಭಾಷಾ ವಿವಾದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ಈ ಘಟನೆಯನ್ನು ಯಾರೂ ಭಾಷಾ ವಿವಾದವೆಂದು ಬಿಂಬಿಸಬಾರದು ಎಂದು ಬೆಳಗಾವಿ ತಾಲೂಕಿನ ಅಂಬೇವಾಡ ಗ್ರಾಪಂ ಕಾರ್ಯದರ್ಶಿ ನಾಗಪ್ಪ ಕೊಡಲಿ ಮನವಿ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಅವರು ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಿನ್ನೆ ನಡೆದ ಘಟನೆ ವೇಳೆ ಗ್ರಾಮದ ಎಲ್ಲ ಕನ್ನಡ ಮತ್ತು ಮರಾಠಿ ಭಾಷಿಕ ಜನರು ನನಗೆ ಸಹಾಯ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಪಂ, ಜಿಪಂ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯ ನಾಗರಿಕರು ನನಗೆ ಸಹಾಯ ಮಾಡಿದ್ದಾರೆ. ಈ ಘಟನೆಯನ್ನು ಯಾರೂ ಭಾಷಾ ವಿವಾದವೆಂದು ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ.ಅಂಬೇವಾಡಿ ಗ್ರಾಪಂ ಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಘಟನೆಯಲ್ಲಿ ಯಾವುದೇ ಭಾಷಾ ವಿವಾದ ಇಲ್ಲ.- ರಾಹುಲ್ ಶಿಂಧೆ, ಜಿಪಂ ಸಿಇಒ