ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡನೀಯ

| Published : Jul 11 2025, 11:48 PM IST

ಸಾರಾಂಶ

ಗೋಮಾತೆಯ ರಕ್ಷಣೆಗೆ ಹೋದ ಸಂದರ್ಭದಲ್ಲಿ ಸುಮಾರು 40ಕ್ಕೂ ಹೆಚ್ಚಿನ ಜನ ಸೇರಿ 5 ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವುದು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಈ ದೇಶದಲ್ಲಿ ಗೋವು ಮಾತೆಗೆ ಸಮಾನ. ರಾಜ್ಯದಲ್ಲಿ ಗೋವುಗಳ ರಕ್ಷಣೆ ಇಲ್ಲದಂತಾಗಿದೆ. ಅವುಗಳ ಮಾರಣಹೋಮ ನಿರಂತರವಾಗಿ ನಡೆದಿದೆ. ಅಂತಹ ಅಮಾಯಕ ಗೋವುಗಳ ರಕ್ಷಣೆ ಮಾಡಲು ಹೋದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡನೀಯ. ಅಂತಹ ದುಷ್ಟ ಜಿಹಾದಿ ಜನರ ಮೇಲೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿನ ತಾಲೂಕು ತಹಸೀಲ್ದಾರ್ ಕಚೇರಿ ಎದುರು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ಗೋರಕ್ಷಣೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ನಡೆದಿದೆ ಎನ್ನಲಾದ ಜಿಹಾದಿಗಳ ಹಲ್ಲೆ ಖಂಡನೀಯ. ರಾಜ್ಯದಲ್ಲಿ ಗೋಹತ್ಯೆ ಕಾನೂನು ಇದ್ದರೂ, ಗೋಹತ್ಯೆ ಎಸಗಿ ಸಂವಿಧಾನ ವಿರೋಧಿ ಕೃತ್ಯವೆಸಗಿದವರನ್ನು ರಕ್ಷಣೆ ಮಾಡದೇ ಅವರ ಮೇಲೆ ಕಾನೂನು ಕ್ರಮವಾಗಬೇಕೆಂದು ಆಗ್ರಹಿಸಿದರು.

ಹಿಂದೂ ಸಂಘಟನೆಯ ಮುಖಂಡ ಭುವನೇಶ ಪೂಜಾರ ಮಾತನಾಡಿ, ಗೋಮಾತೆಯ ರಕ್ಷಣೆಗೆ ಹೋದ ಸಂದರ್ಭದಲ್ಲಿ ಸುಮಾರು 40ಕ್ಕೂ ಹೆಚ್ಚಿನ ಜನ ಸೇರಿ 5 ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವುದು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ. ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕು. ಗೋಹತ್ಯೆ ಕೃತ್ಯ ಎಸಗುವ ಹಂತಕರನ್ನು ಸರ್ಕಾರ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಕೆಲಹೊತ್ತು ಘೋಷಣೆ ಕೂಗಿದರು. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಜಿಹಾದಿಗಳಿಗೆ ಧಿಕ್ಕಾರ, ಗೋಹತ್ಯೆ ಮಾಡಿದ ಜಿಹಾದಿಗಳನ್ನು ರಕ್ಷಣೆ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಬಳಿಕ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರಭು ಕಳ್ಳಿಗುಡ್ಡ, ರವಿ ಬೀಳಗಿ, ರಂಗಪ್ಪ ವಾಲೀಕಾರ, ಷéಡಕ್ಷರಯ್ಯ ಹಿರೇಮಠ, ಮುತ್ತು ಮನ್ನಿಕಟ್ಟಿ, ತಿಮ್ಮಣ್ಣ ಬಂಡಿವಡ್ಡರ, ರಾಜು ದೋತರಗಾವಿ, ಪರಶು ಸೂಳಿಭಾವಿ, ಅಮಿತ ವಾಳದ, ಚೇತನ ಅಂಗಡಿ, ಅನೀಲ ಹೂಗಾರ, ಕೆಂಚಪ್ಪ ಇಂಗಳೆ, ಪ್ರಥಮೇಶ ವಾಘಮೋಢೆ, ಸಂತೋಷ ಬಜಂತ್ರಿ ಸೇರಿದಂತೆ ಇನ್ನೂ ಅನೇಕರು ಇದ್ದರು.