ಸಾರಾಂಶ
ರಟ್ಟೀಹಳ್ಳಿತಾಲೂಕಿನ ಮಾಸೂರ ಗ್ರಾಮದ ಹೊರವಲಯದ ನದಿ ಪಕ್ಕದಲ್ಲೇ ಹಲವು ತಿಂಗಳಿಂದ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಅಡ್ಡೆ ಮೇಲೆ ಗ್ರಾಮಸ್ಥರು ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ದಾಳಿ ಮಾಡಿ ಗೋವುಗಳ ರಕ್ಷಣೆ ಮಾಡಿದ ಘಟನೆ ಭಾನುವಾರ ನಡೆದಿದೆ.
ರಟ್ಟೀಹಳ್ಳಿ: ತಾಲೂಕಿನ ಮಾಸೂರ ಗ್ರಾಮದ ಹೊರವಲಯದ ನದಿ ಪಕ್ಕದಲ್ಲೇ ಹಲವು ತಿಂಗಳಿಂದ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಅಡ್ಡೆ ಮೇಲೆ ಗ್ರಾಮಸ್ಥರು ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ದಾಳಿ ಮಾಡಿ ಗೋವುಗಳ ರಕ್ಷಣೆ ಮಾಡಿದ ಘಟನೆ ಭಾನುವಾರ ನಡೆದಿದೆ.
ಗ್ರಾಮಸ್ಥರ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಹಿರೇಕೆರೂರು ಪೊಲೀಸ್ ತಂಡ ಐವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ಚೂರಿಗಳನ್ನು ವಶಪಡಿಸಿಕೊಂಡಿದ್ದಾರೆ.ಸಾದಿಕ್ ಮೆಡ್ಲೇರಿ, ರಿಜ್ವಾನ ಮುಗಳಿಹಳ್ಳಿ, ಖಾಜಾ ಮೆಡ್ಲೇರಿ, ಫಯಾಜ್ ರಾಣಿಬೆನ್ನೂರು ಹಾಗೂ ಶಯಾಬಾಜ್ ಬಂಧಿತರು.
ತಾಲೂಕಿನಾದ್ಯಂತ ಹವ್ಯಾಹತವಾಗಿ ಗೋ ಕಳ್ಳತನ ನಡೆಯುತ್ತಿದೆ. ಅಕ್ರಮ ಕಸಾಯಿಖಾನೆ ನಡೆಯುತ್ತಿದೆ. ಪ್ರತಿ ನಿತ್ಯ ಸಾವಿರಾರು ಗೋವುಗಳನ್ನು ಕಡಿದು ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಗೋ ಮಾಂಸ ರವಾನೆ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಜಿಲ್ಲಾ ಸಂಚಾಲಕ ಕಿಟ್ಟಿ ಪಾಟೀಲ್, ತಾಲೂಕು ಗೋ ಪ್ರಮುಖ ನವೀನ ಮಾದರ ಮಾತನಾಡಿ, ರಟ್ಟೀಹಳ್ಳಿ ತಾಲೂಕಿನ ಮಾಸೂರ ಗ್ರಾಮದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ದಾಳಿ ನಡೆಸಿ, 7-8 ಗೋವುಗಳನ್ನು ರಕ್ಷಣೆ ಮಾಡಿದ್ದೇವೆ. ಪೊಲೀಸರು ಐವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವ ಕಾರಣಕ್ಕೆ ಎಲ್ಲೆಂದರಲ್ಲಿ ಗೋ ಹತ್ಯೆಗಳು, ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ತಕ್ಷಣ ಜಿಲ್ಲೆಯಲ್ಲಿರುವ ಎಲ್ಲ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು. ಇಲ್ಲವಾದಲ್ಲಿ ನಮ್ಮ ಕಾರ್ಯಕರ್ತರೆ ನೇರ ದಾಳಿ ಮಾಡುತ್ತಾರೆ. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.