ಸಾರಾಂಶ
ಚಳ್ಳಕೆರೆ: ರಾಜ್ಯದ ವಿವಿಧೆಡೆ ನ್ಯಾಯಾಂಗ ಇಲಾಖೆಯ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಡುವ ವಕೀಲರ ಸಮೂಹದ ಮೇಲೆ ಆಗುವ ದೌರ್ಜನ್ಯವನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ನಾಗರಾಜು ಆರೋಪಿಸಿದರು.
ಶನಿವಾರ ತಾಲೂಕು ಕಚೇರಿ ಮುಂಭಾಗದಲ್ಲಿ ವಕೀಲರ ಸಂಘ ನಡೆಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಸೀಲ್ದಾರ್‌ಗೆ ಮನವಿ ಅರ್ಪಿಸಿ ಮಾತನಾಡಿದರು. ರಾಜ್ಯದ ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಮ್ ತಮ್ಮ ಕಕ್ಷಿದಾರರಿಗೆ ಸಂಬಂಧಪಟ್ಟಂತೆ ಕೆಲವೊಂದು ದಾಖಲಾತಿಗಳನ್ನು ತರುವ ಸಂದರ್ಭದಲ್ಲಿ ತಮ್ಮ ಮೋಟಾರ್ ಚಲಾಯಿಸಿಕೊಂಡು ನ್ಯಾಯಾಲಯದ ಕಾರ್ಯಕಲಾಪದಲ್ಲಿ ಭಾಗವಹಿಸಲು ತುರ್ತಾಗಿ ತೆರಳುತ್ತಿದ್ದರು.ಈ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಹೆಲ್ಮೆಟ್ ಹಾಕಿಲ್ಲವೆಂದು ಅವರನ್ನು ತಡೆದು ನಿಲ್ಲಿಸಿದ್ದರಲ್ಲದೆ ಅವರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಪೊಲೀಸರ ವರ್ತನೆಯಿಂದ ಇಡೀ ವಕೀಲವೃಂದ ಮನನೊಂದಿದೆ. ಪೊಲೀಸ್ ಹಾಗೂ ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಭಾಗವಹಿಸುವ ಮೂಲಕ ಕಕ್ಷಿದಾರರಿಗೆ ನ್ಯಾಯವನ್ನು ದೊರಕಿಸಿಕೊಡುವ ಕೆಲಸ ಮಾಡುತ್ತಾರೆ.
ಆದರೆ, ಪೊಲೀಸರು ಏನನ್ನು ವಿಚಾರಿಸದೆ ವಕೀಲರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದ್ದರಿಂದ ಪೊಲೀಸರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯ ಪಡಿಸುತ್ತಿದ್ದೇವೆಂದರು.ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರೇಹಾನ್ ಪಾಷ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಳಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಶ್ರೀನಿವಾಸ್ ಮೂರ್ತಿ, ಎಂ.ಎಸ್.ಜಗದೀಶ್ ನಾಯಕ, ಜೆ.ರಾಘವೇಂದ್ರ ನಾಯಕ, ಜಿ.ಕೆ.ಪವಿತ್ರ, ದೊರೆನಾಗರಾಜು, ಶ್ಯಾಮಲ, ಕೆ.ಟಿ.ರುದ್ರೇಶ್, ಕುರುಡಿಹಳ್ಳಿ ಶ್ರೀನಿವಾಸ್, ದೊಡ್ಡರಂಗಪ್ಪ, ಶರಣಪ್ಪಯ್ಯ, ಮಂಜುನಾಥ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
--------೨ಸಿಎಲ್‌ಕೆ೨
ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ವಕೀಲರ ಮೇಲಿನ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘ ಪ್ರತಿಭಟನೆ ನಡೆಸಿದರು.