ಸಾರಾಂಶ
ರಾತ್ರಿ ಕರ್ತವ್ಯದಲ್ಲಿದ್ದ ನಗರ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಗಣೇಶ ಕುರಿಯವರ ಹಾಗೂ ಹರೀಶ ಗವಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಕಾರವಾರ
ರಾತ್ರಿ ಕರ್ತವ್ಯದಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳ ಮೇಲೆ ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪು ಇಲ್ಲಿನ ಬೈತಖೋಲ ಸಮೀಪ ಹಲ್ಲೆ ನಡೆಸಿದ್ದು, ೧೦ ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ತಲೆಮರೆಸಿಕೊಂಡಿದ್ದಾನೆ.ಬೈತಖೋಲ ನಿವಾಸಿಗಳಾದ ಸುನೀಲ ಗೌಡ, ಮಂಜುನಾಥ ಗೌಡ, ಸಂದೇಶ, ರಘುವೀರ, ನಿತಿನ ಗೌಡ, ಗಗನ ಗೌಡ, ಅನುರಾಗ ಗೌಡ, ಉಮೇಶ ಜನಕಪ್ರಸಾದ, ವಿತೇಶ ಗೌಡ, ಯುವರಾಜ ಗೌಡ, ಸುಚಿತ ಗೌಡ ಆರೊಪಿಗಳಾಗಿದ್ದು, ರಾತ್ರಿ ಕರ್ತವ್ಯದಲ್ಲಿದ್ದ ನಗರ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಗಣೇಶ ಕುರಿಯವರ ಹಾಗೂ ಹರೀಶ ಗವಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಿನ್ನೆಲೆ:ಶನಿವಾರ ರಾತ್ರಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರು ತಡರಾತ್ರಿ ಇಲ್ಲಿನ ಬೈತಖೋಲಕ್ಕೆ ಗಸ್ತು ತಿರುಗಲು ಹೋಗಿದ್ದಾರೆ. ಭೂದೇವಿ ದೇವಸ್ಥಾನದ ಬಳಿ ಗುಂಪು ಕಟ್ಟಿಕೊಂಡು ಕುಳಿತಿದ್ದ ಯುವಕರ ತಂಡಕ್ಕೆ ಮಧ್ಯರಾತ್ರಿ ೧.೩೦ ಆಗಿದ್ದು, ಮನೆಗೆ ಹೋಗಿ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಆರೋಪಿಗಳು ವಾಗ್ದಾದಕ್ಕಿಳಿದು ಪೊಲೀಸ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಗಣೇಶ ತಲೆಗೆ ಹಿಂಬದಿಯಿಂದ ಒಬ್ಬ ತೆಂಗಿನ ಕಾಯಿಯಿಂದ ಹಲ್ಲೆ ಮಾಡಿದ್ದಾನೆ. ಅದೃಷ್ಟವಶಾತ್ ತಲೆಗೆ ಮಾರಣಾಂತಿಕ ಪೆಟ್ಟಾಗಿಲ್ಲ. ಕೈಕಾಲಿಗೆ ಗಾಯವಾಗಿದೆ. ಹರೀಶ ಅವರಿಗೂ ಗಾಯಗಳಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, ನ.೧೫ರ ವರೆಗೆ ನ್ಯಾಯಾಂಗ ಬಂಧನವಾಗಿದೆ.