ಅರ್ಚಕರ ಮೇಲೆ ಹಲ್ಲೆ: ಪ್ರಮುಖ ಆರೋಪಿ ಸೇರಿ ಮೂವರ ಬಂಧನ

| Published : Feb 02 2025, 01:03 AM IST

ಸಾರಾಂಶ

ಕೊಡಗಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನ ಪ್ರಧಾನ ಅರ್ಚಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಮುಖ ಆರೋಪಿ ಕಾಕೋಟುಪರಂಬು ಮಂಡೇಟಿರ ಅನಿಲ್ ಹಾಗೂ ಇಬ್ಬರು ಸಹಚರರನ್ನು ಜಿಲ್ಲಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನ ಪ್ರಧಾನ ಅರ್ಚಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಮುಖ ಆರೋಪಿ ಕಾಕೋಟುಪರಂಬು ಮಂಡೇಟಿರ ಅನಿಲ್ ಹಾಗೂ ಇಬ್ಬರು ಸಹಚರರನ್ನು ಜಿಲ್ಲಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಜ.27ರಂದು ಕಟ್ಟೆಮಾಡು ದೇವಸ್ಥಾನದ ಅರ್ಚಕ ವಿಘ್ನೇಶ್ ಭಟ್ ಹಾಗೂ ಅವರ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪಿ ಕಾಕೋಟು ಪರಂಬು ನಿವಾಸಿ ಎಂ.ಬಿ ಅಯ್ಯಪ್ಪ ಅಲಿಯಾಸ್ ಮಂಡೇಟಿರ ಅನಿಲ್ (46) ಹಾಗೂ ಸಹಚರರಾದ ಎo.ಸಿ ಕಾಳಪ್ಪ (51), ಟಿಎಲ್ ಸುಬ್ಬಯ್ಯ (47) ಅಲಿಯಾಸ್ ಸುನಿ ಎಂಬ ಮೂವರನ್ನು ಶನಿವಾರ ಡಿಸಿಆರ್‌ಪಿ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಶುಕ್ರವಾರ ಸಹಕಾರ ನೀಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಲಾದ ವಾಹನಗಳನ್ನು ಕೂಡ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಜ.30ರ ಒಳಗೆ ಈ ಕಿಡಿಗೇಡಿಗಳನ್ನು ಬಂಧಿಸುವಂತೆ ಕೊಡಗು ಜಿಲ್ಲೆಯ ಬ್ರಾಹ್ಮಣ ಸಮಾಜದ ಒಕ್ಕೂಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಒತ್ತಾಯ ಪತ್ರ ನೀಡಲಾಗಿತ್ತು. ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಶುಕ್ರವಾರ ಜಿಲ್ಲೆಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದೂಡಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಸೂರಜ್, ಪೊಲೀಸ್ ಇನ್‌ಸ್ಪೆಕ್ಟರ್‌ ಚಂದ್ರಶೇಖರ್, ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಶ್ರೀನಿವಾಸ್, ಮಡಿಕೇರಿ ಸಂಚಾರಿ ಠಾಣಾಧಿಕಾರಿಯಾದ ತಮ್ಮಯ್ಯ, ಡಿ ಸಿ ಆರ್ ಬಿ ಪೊಲೀಸ್ ಸಿಬ್ಬಂದಿ, ಸಂಚಾರಿ ಠಾಣಾ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ತನಿಖಾ ತಂಡ ಕಾರ್ಯಾಚರಣೆ ನಡೆಸಿತ್ತು.