ವಿದ್ಯಾರ್ಥಿಗಳ ಮೇಲೆ ಹಲ್ಲೆ: ವಾರ್ಡನ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

| Published : Dec 06 2023, 01:15 AM IST

ವಿದ್ಯಾರ್ಥಿಗಳ ಮೇಲೆ ಹಲ್ಲೆ: ವಾರ್ಡನ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಸ್ಯೆ ಹೇಳಿಕೊಂಡ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ವಾರ್ಡನ್ ಕ್ರಮ ಖಂಡಿಸಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಎಸ್‌ಎಫ್‌ಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿ ಹನುಮಂತಪ್ಪ ಶಿರಹಟ್ಟಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಸಮಸ್ಯೆ ಹೇಳಿಕೊಂಡ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ವಾರ್ಡನ್ ಕ್ರಮ ಖಂಡಿಸಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಎಸ್‌ಎಫ್‌ಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿ ಹನುಮಂತಪ್ಪ ಶಿರಹಟ್ಟಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಅಭ್ಯಾಸ ಮಾಡುವ 125 ಮಕ್ಕಳು ಇದ್ದಾರೆ. ಆದರೆ ಇಲ್ಲಿನ ವಾರ್ಡನ್ ಸವಿತಾ ಮಕ್ಕಳಿಗೆ ಸರ್ಕಾರ ಒದಗಿಸಿದ ಅಗತ್ಯ ಮೂಲಭೂತ ಸೌಲಭ್ಯ ಪೂರೈಸುವ ಬದಲು ವಿನಾಕಾರಣ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂಬುದು ಅಲ್ಲಿನ ವಿದ್ಯಾರ್ಥಿಗಳ ಅಳಲಾಗಿತ್ತು. ಎಸ್‌ಎಫ್‌ಐ ಕಾರ್ಯಕರ್ತರು ಸ್ಥಳಕ್ಕೆ ತೆರಳಿದಾಗ ವಿದ್ಯಾರ್ಥಿಗಳು ತಮ್ಮ ಮೇಲೆ ವಾರ್ಡನ್ ನಡೆಸುತ್ತಿರುವ ದೌರ್ಜನ್ಯ ಕುರಿತು ಸಮಸ್ಯೆ ಹಂಚಿಕೊಂಡು ಪ್ರತಿಭಟನೆ ಕೈಗೊಂಡರು. ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆ ದೇವ್ಲಾ ನಾಯಕ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಲು ಮುಂದಾದರೂ ಪ್ರತಿಭಟನಾಕಾರರು ಮನವಿ ನೀಡಲು ನಿರಾಕರಿಸಿದರು. ಹೀಗಾಗಿ ತಹಸೀಲ್ದಾರ ಹನುಮಂತಪ್ಪ ಶಿರಹಟ್ಟಿ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಅಳಲನ್ನು ಕೇಳಿ ವಾರ್ಡನ್ ಮೇಲೆ ರಿಪೋರ್ಟ್ ನೀಡಿ ಈ ಕೂಡಲೇ ಕೆಲಸದಿಂದ ತೆಗೆದುಹಾಕಿ ಎಂದು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ನಿಮ್ಮೆಲ್ಲ ಬೇಡಿಕೆ ಈಡೇರಿಸಲು ಕ್ರಮ ಜರುಗಿಸುತ್ತೇವೆ ಎಂದರು.

ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ವಿದ್ಯಾರ್ಥಿಗಳನ್ನು ಸೌಲಭ್ಯಗಳಿಂದ ವಂಚಿಸಿರುವುದು ಹಾಗೂ ವಿದ್ಯಾರ್ಥಿಗಳನ್ನು ಅಮಾನವೀಯ ರೀತಿಯಲ್ಲಿ ಥಳಿಸಿದನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸುತ್ತದೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯವನ್ನು ಸರಿಯಾಗಿ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿ ಅನ್ಯಾಯ ವೆಸಗಿದ ವಸತಿ ನಿಲಯದ ಮೇಲ್ವಿಚಾರಕಿಯ ಮೇಲೆ ಸ್ವಯಂ ದೂರ ದಾಖಲಿಸಿ ಈ ಕೂಡಲೇ ಅಮಾನತು ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ವಿಫಲತೆಯೇ ಇಂತಹ ದುರಂತಗಳಿಗೆ ಕಾರಣ. ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ವಾರ್ಡನ್ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದರಿಂದ ಉಂಟಾದ ಗಾಯವನ್ನು ತೋರಿಸಿದರು.

ಎಸ್‌ಎಫ್‌ಐ ತಾಲೂಕು ಮುಖಂಡರಾದ ಹೊನ್ನಪ್ಪ ಕುದರಿಹಾಳ, ಬಸವರಾಜ ಬಿ., ವಿದ್ಯಾರ್ಥಿಗಳಾದ ಹರೀಶ್ ಎಸ್. ಜಿ., ರೇಣುಕಾ ಜಾಗಟಿ, ಸಂತೋಷ ಲಮಾಣಿ, ಪ್ರಗತಿ ದಾಸರೆಡ್ಡಿ, ಹನುಮಂತ ಲಮಾಣಿ, ಲಕ್ಷ್ಮೀ, ಕಿರಣ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಗಿರೀಶ್ ಹೊಸಮನಿ, ಪೊಲೀಸ್ ಸಿಬ್ಬಂದಿ, ಹಾಸ್ಟೆಲ್ ಮೇಲ್ವಿಚಾರಕರು ಉಪಸ್ಥಿತರಿದ್ದರು.