ಸರ್ಕಾರಿ ನೌಕರರು ಭಯಮುಕ್ತರಾಗಿ ಸೇವೆ ಸಲ್ಲಿಸುವಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಲಾಯಿತು.

ರೋಣ: ತಹಸೀಲ್ದಾರ್ ನಾಗರಾಜ ಕೆ. ಅವರ ಮೇಲೆ ಭಾನುವಾರ ನಡೆದ ಹಲ್ಲೆ ಘಟನೆ ತೀವ್ರ ಖಂಡನೀಯ. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲೂಕು ಘಟಕ ವತಿಯಿಂದ ಬುಧವಾರ ಉಪತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ತಹಸೀಲ್ದಾರ್ ನಾಗರಾಜ ಕೆ. ಅವರು ಭಾರತೀಯ ಸೈನ್ಯದಲ್ಲಿ 22 ವರ್ಷ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಸೇವೆಯಲ್ಲಿ ಒಬ್ಬ ದಕ್ಷ ಆಡಳಿತ ಅಧಿಕಾರಿಯಾಗಿ ಪ್ರಾಮಾಣಿಕರಾಗಿ ಮತ್ತು ಕಠಿಣ ಕೆಲಸಗಾರರಾಗಿದ್ದಾರೆ. ಇಂತಹ ಪ್ರಾಮಾಣಿಕ ಅಧಿಕಾರಿ ಮೇಲೆ ಜ. 25ರಂದು ಪಟ್ಟಣದ ಹನುಮಂತ ಚಲವಾದಿ, ಶರಣಪ್ಪ ಗದಗಿನ ಇಬ್ಬರು ಸೇರಿ ತಹಸೀಲ್ದಾರರ ಮನೆಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಅವರ ಕತ್ತನ್ನು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಘಟನೆಯು ಮಾಜಿ ಸೈನಿಕರಿಗೆ ಬೇಸರವನ್ನುಂಟು ಮಾಡಿದೆ.

ಸರ್ಕಾರಿ ನೌಕರರು ಭಯಮುಕ್ತರಾಗಿ ಸೇವೆ ಸಲ್ಲಿಸುವಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಉಪತಹಸೀಲ್ದಾರ್ ರೇಣುಕಾ ನೀಲುಗಲ್ಲ ಮಾತನಾಡಿ, ಈ ಮನವಿ ಪತ್ರವನ್ನು ಜಿಲ್ಲಾಧಿಕಾರಿ, ಶಾಸಕರಿಗೆ ಹಾಗೂ ಮಾಜಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ಕಳುಹಿಸಲಾಗುವುದು ಎಂದರು.

ಈ ವೇಳೆ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಪ್ರಭುಗೌಡ ಪಾಟೀಲ, ಗೌರವಾಧ್ಯಕ್ಷ ರಂಗಪ್ಪ ತಳವಾರ, ಉಪಾಧ್ಯಕ್ಷ ಚನ್ನಬಸಪ್ಪ ನೆಲಗುಡ್ಡ, ಕಾರ್ಯದರ್ಶಿ ಚನ್ನಪ್ಪ ಬಾವಿ, ವಿರುಪಾಕ್ಷಪ್ಪ ಬಡಿಗೇರ, ಶಶಿಧರ ವಕ್ಕರ, ನಟರಾಜ ಹೊಸಂಗಡಿ, ಮುತ್ತಣ್ಣ ಗಡಾದ, ಮಲ್ಲಪ್ಪ ಮೇಟಿ, ಶೇಖರಪ್ಪ ಹವಳಪ್ಪನವರ, ಹಂಪಣ್ಣ ಹಡಪದ, ವಿಜಯ ಹಿರೇಮಠ, ರೇಣುಕಾಗೌಡ ದಾನಪ್ಪಗೌಡ್ರ, ಅಶೋಕ ಹೊಸಳ್ಳಿ, ಬಿ.ಎಂ. ಹುಣಸಿಕಟ್ಟಿ, ಎಲ್.ಬಿ. ಕೆಂಚನಗೌಡ್ರ, ವೀರಭದ್ರಪ್ಪ ಎಚ್., ಮುತ್ತಣ್ಣ ಗಡಾದ, ವಿಜಯ ಹಿರೇಮಠ, ಹನುಮಂತಪ್ಪ ಅರಮನಿ ಸೇರಿದಂತೆ ಮುಂತಾದವರಿದ್ದರು.