ಚಿಟ್ಟನಹಳ್ಳಿ ಗ್ರಾಮದಲ್ಲಿ ನಡೆದ ಭ್ರಷ್ಟಾಚಾರ, ಕೆರೆ ಜಾಗ ಹಾಗೂ ಶಾಲೆಯ ಜಾಗ ಒತ್ತುವರಿ ಅಕ್ರಮಗಳ ಕುರಿತು ಪ್ರಶ್ನಿಸಿದ್ದಕ್ಕೆ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದ್ದು, ಈವರೆಗೆ ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಕೆ.ಆರ್.ಎಸ್ ಪಕ್ಷದ ಮುಖಂಡ ವಿ.ರಮೇಶ್ ಬೂವನಹಳ್ಳಿ ಮತ್ತು ಉಮೇಶ್ ಬೆಳಗುಂಬ ದೂರಿದರು.
ಕನ್ನಡಪ್ರಭವಾರ್ತೆ ಹಾಸನ
ಚಿಟ್ಟನಹಳ್ಳಿ ಗ್ರಾಮದಲ್ಲಿ ನಡೆದ ಭ್ರಷ್ಟಾಚಾರ, ಕೆರೆ ಜಾಗ ಹಾಗೂ ಶಾಲೆಯ ಜಾಗ ಒತ್ತುವರಿ ಅಕ್ರಮಗಳ ಕುರಿತು ಪ್ರಶ್ನಿಸಿದ್ದಕ್ಕೆ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದ್ದು, ಈವರೆಗೆ ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಕೆ.ಆರ್.ಎಸ್ ಪಕ್ಷದ ಮುಖಂಡ ವಿ.ರಮೇಶ್ ಬೂವನಹಳ್ಳಿ ಮತ್ತು ಉಮೇಶ್ ಬೆಳಗುಂಬ ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ನಡೆದ ಕಳಪೆ ರಸ್ತೆ ಕಾಮಗಾರಿ, ಶಾಲಾ ಜಾಗ ತೆರವು ಹಾಗೂ ಸಾರ್ವಜನಿಕ ಆಸ್ತಿಗಳ ಅಕ್ರಮ ಉಸ್ತುವಾರಿಯನ್ನು ಪ್ರಶ್ನಿಸಿ ಕೆ.ಆರ್.ಎಸ್ ಪಕ್ಷ ನಿರಂತರ ಹೋರಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಹಾನಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಚಿಟ್ಟನಹಳ್ಳಿ ಗ್ರಾಮದಲ್ಲಿ ಕಳಪೆ ರಸ್ತೆ ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳು ಬಂದಿದ್ದ ವೇಳೆ ಇದಕ್ಕೆ ಸಂಬಂಧವಿಲ್ಲದ ಗ್ರಾಪಂ ನೀರಗಂಟಿಗ ದಿನೇಶ್ ಅವರು ಉದ್ದೇಶಪೂರ್ವಕವಾಗಿ ಅವಾಚ್ಯ ಪದಗಳನ್ನು ಬಳಸಿ ಅವಮಾನಿಸಿದ್ದಾರೆ. ಅಲ್ಲದೇ ಗುತ್ತಿಗೆದಾರರಾದ ಮಧು ಹಾಗೂ ಕುಮಾರ್ ಎಂಬವರು ಗುಂಪು ಕಟ್ಟಿಕೊಂಡು ಬಂದು ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.ನಾನು ಸಾಮಾಜಿಕ ಹೋರಾಟಗಾರನಾಗಿ ನನ್ನ ವೈಯಕ್ತಿಕ ವಹಿವಾಟುಗಳನ್ನು ಬದಿಗಿಟ್ಟು ಸಮಾಜದ ಒಳಿತಿಗಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ. ಸಮಾಜದ ಹಿತಕ್ಕಾಗಿ ಪ್ರಶ್ನಿಸಿದರೆ ಹಲ್ಲೆ, ನಿಂದನೆ ನಡೆಸುವುದು ಅಸಹ್ಯಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಪೊಲೀಸ್ ಇಲಾಖೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಧು, ನಿರಂಜನ್, ಯೂನಸ್, ಜಗದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.