ಸಾರಾಂಶ
ಶಿರಸಿ: ಕೃತಕ ಬಣ್ಣ ಹಾಗೂ ನಿಷೇಧಿತ ವಸ್ತುಗಳನ್ನು ಬಳಕೆ ಮಾಡಿ ಆಹಾರ ವಸ್ತುಗಳನ್ನು ತಯಾರಿಸುತ್ತಿದ್ದ ಹಿನ್ನೆಲೆ ನಗರಸಭೆ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ನಗರದ ಕೆಲ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ, ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.ನಗರದ ಹೊಸಪೇಟೆ ರಸ್ತೆಯಲ್ಲಿರುವ ಹೋಟೆಲ್ ಕುಂದಾಪ್ರ ಫಿಶ್ ಲ್ಯಾಂಡ್, ದೇವಿಕೆರೆ ಕೆಲ ಹೋಟೆಲ್, ಗೋಬಿ ಮಂಚೂರಿ ತಯಾರಿಸುವ ಅಂಗಡಿ ಸೇರಿದಂತೆ ಇನ್ನಿತರ ಅಂಗಡಿಗಳಿಗೆ ದಾಳಿ ನಡೆಸಿದ ಅಧಿಕಾರಿಗಳು ಮೀನು, ಮಾಂಸದ ಆಹಾರ, ಗೋಬಿ ಮಂಚೂರಿ, ಎಗ್ ರೈಸ್ ತಯಾರಿಕೆಯಲ್ಲಿ ಕೃತಕ ಬಣ್ಣ, ಅಜಿನೊಮೋಟೊ, ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿರುವುದ ಕಂಡುಬಂದ ಹಿನ್ನೆಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಕೆಲ ಹೋಟೆಲ್‌ಗಳಲ್ಲಿ ತಯಾರಿಸಿಟ್ಟ ಆಹಾರದ ವಸ್ತುಗಳಲ್ಲಿ ಜಿರಲೆ ಪತ್ತೆಯಾಗಿದೆ. ಹೋಟೆಲ್, ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಅಂಗಡಿಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೃತಕ ಬಣ್ಣ ಹಾಗೂ ನಿಷೇಧಿತ ವಸ್ತುಗಳನ್ನು ಬಳಸಿ ತಯಾರಿಸಿಟ್ಟ ಆಹಾರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ನಗರಸಭೆ ಆರೋಗ್ಯಾಧಿಕಾರಿ ಆರ್.ಎಂ. ವೆರ್ಣೇಕರ ನೇತೃತ್ವದಲ್ಲಿ ಆರೋಗ್ಯ ಸುಪ್ರವೈಸರ್ ಶರದ್ ಕಾನಡೆ, ರವೀಂದ್ರ ಶಿರಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ನಗರ ವ್ಯಾಪ್ತಿಯ ಹೋಟೆಲ್, ಅಂಗಡಿಗಳ ಮೇಲೆ ನಿರಂತರ ದಾಳಿ ಮುಂದುವರಿಯಲಿದೆ. ಮೊದಲು ಎಚ್ಚಿಕೆ ನೀಡಿ, ನೋಟಿಸ್ ಜಾರಿ ಮಾಡಲಾಗುತ್ತದೆ. ಆದರೂ ಎಚ್ಚೆತ್ತುಕೊಳ್ಳದಿದ್ದರೆ ದಂಡ ಹಾಗೂ ಪ್ರಕರಣ ದಾಖಲಿಸುತ್ತೇವೆ. ಕೃತಕ ಬಣ್ಣ ಹಾಗೂ ಸರ್ಕಾರದಿಂದ ನಿಷೇಧಿತ ವಸ್ತುಗಳನ್ನು ಬಳಕೆ ಮಾಡಿದರೆ ₹೧ ಲಕ್ಷ ದಂಡ ಹಾಗೂ ೬ ವರ್ಷ ಜೈಲು ವಾಸ ಎಂದು ಸರ್ಕಾರ ಹೊಸ ಕಾನೂನು ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದರು.