ಸಾರಾಂಶ
ಸರ್ಕಾರ ಈ ಗುಂಡಾಗಿರಿಯನ್ನು ಗಂಭೀರವಾಗಿ ಪರಿಗಣಿಸಿ ಭಾಗಿಯಾದ ಎಲ್ಲರನ್ನು ಮತ್ತು ಅದರ ಹಿಂದಿರುವ ಗೂಂಡಾಗಳನ್ನು ಬಂಧಿಸಿ ವಿಶೇಷ ತನಿಖೆ ನಡೆಸಬೇಕು. ಪದ್ಮಲತಾ, ಸೌಜನ್ಯಾ, ವೇದವಲ್ಲಿ ಹಾಗೂ 80ರ ದಶಕದಿಂದ ನಡೆದಿರುವ ಎಲ್ಲ ಪ್ರಕರಣಗಳ ಮರು ತನಿಖೆಗೂ ಕ್ರಮವಹಿಸಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಧರ್ಮಸ್ಥಳದಲ್ಲಿ ಸ್ವತಂತ್ರ ಪತ್ರಕರ್ತರ ಮೇಲೆ ದಾಳಿ, ಮಾರಣಾಂತಿಕ ಹಲ್ಲೆ, ಅಲ್ಲಿನ ಗೂಂಡಾವರ್ತನೆ ತೋರಿಸುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಕಿಡಿಕಾರಿದರು.ಪಟ್ಟಣದ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ದಶಕಗಳಿಂದ ನಡೆದಿರುವ ಅತ್ಯಾಚಾರ ಹಾಗೂ ಅಸಹಜ ಸಾವು, ಕೊಲೆ, ಭೂ ಕಬಳಿಕೆ, ಸುಲಿಗೆಗಳ ವಿಚಾರಗಳ ಬೆಳಕಿನಲ್ಲಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾದಳ (ಎಸ್ಐಟಿ) ಕಾಡಿನಲ್ಲಿ ಸಾಕ್ಷಿ ದೂರದಾರರೊಬ್ಬರೊಂದಿಗೆ ಶೋಧ ಕಾರ್ಯ ನಡೆಸುತ್ತಿರುವುದು ಈಗ ಜಾಗತಿಕ ಗಮನ ಸೆಳೆದಿದೆ ಎಂದರು.
ಪಾಳೆಗಾರಿಕೆ ಕ್ರೌರ್ಯವನ್ನು ಅಲ್ಲಿನ ಜನ ಹಾಗೂ ದೌರ್ಜನ್ಯಕ್ಕೊಳಗಾದವರು, ನೊಂದವರು, ದಶಕಗಳ ತಮ್ಮ ನೋವಿಗೆ ಪರಿಹಾರ ಹುಡುಕಿ ತಾವಾಗಿಯೇ ವಿಶೇಷ ತನಿಖಾದಳದ ಮುಂದೆ ಬರುತ್ತಿರುವುದು ಅಲ್ಲಿನ ದೌರ್ಜನ್ಯ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ ಎಂದರು.ಸ್ವತಂತ್ರ ಪತ್ರಕರ್ತರ ಮೇಲೆ ಯೋಜಿತ ನೂರಾರು ಮಂದಿ ಸಾಮೂಹಿಕವಾಗಿ ಸಂಘಟಿತರಾಗಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಾಗೂ ಪತ್ರಿಕೋಧ್ಯಮದ ಮೇಲೆ ನಡೆದಿರುವ ಸರ್ವಾಧಿಕಾರಿ ಗುಂಡಾವರ್ತನೆಯನ್ನು ಎತ್ತಿ ತೋರಿಸುತ್ತದೆ. ಅಲ್ಲಿನ ಬೆಳವಣಿಗೆಗಳು ಮಾಧ್ಯಮದ ಮೂಲಕ ಹೊರ ಜಗತ್ತಿನ ಗಮನ ಸೆಳೆದಿವೆ. ಇದರ ನಡುವೆ ಇಂಥ ದಾಳಿಗಳು ಅಲ್ಲಿನ ವ್ಯವಸ್ಥೆಯನ್ನು ತೋರಿಸುತ್ತದೆ ಎಂದರು.
ಸರ್ಕಾರ ಈ ಗುಂಡಾಗಿರಿಯನ್ನು ಗಂಭೀರವಾಗಿ ಪರಿಗಣಿಸಿ ಭಾಗಿಯಾದ ಎಲ್ಲರನ್ನು ಮತ್ತು ಅದರ ಹಿಂದಿರುವ ಗೂಂಡಾಗಳನ್ನು ಬಂಧಿಸಿ ವಿಶೇಷ ತನಿಖೆ ನಡೆಸಬೇಕು. ಪದ್ಮಲತಾ, ಸೌಜನ್ಯಾ, ವೇದವಲ್ಲಿ ಹಾಗೂ 80ರ ದಶಕದಿಂದ ನಡೆದಿರುವ ಎಲ್ಲ ಪ್ರಕರಣಗಳ ಮರು ತನಿಖೆಗೂ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಸಂಘದ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಉಪಾಧ್ಯಕ್ಷ ಹಿಪ್ಜುಲ್ಲಾ, ಸಹ ಕಾರ್ಯದರ್ಶಿ ಸತೀಶ್ ಇದ್ದರು.