ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿದ.ಕ. ಜಿಲ್ಲೆಗೇ ಮಾದರಿಯೆನಿಸುವಂತಹ ಕೆರೆ ಅಭಿವೃದ್ಧಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅತ್ತಾಜೆ ಎಂಬಲ್ಲಿ ಆಗಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿರುವ ಕೆರೆ ಅಂದಾಜು 300 ಲಕ್ಷ ಲೀ. ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇಲ್ಲಿ ಬೇಸಿಗೆಯಲ್ಲೂ ಉತ್ತಮ ಮಟ್ಟದ ನೀರು ಇರುತ್ತದೆ. ಸರ್ಕಾರ ನಡೆಸಿದ ಕರೆಯ ಕಾಮಗಾರಿ ಗಮನಿಸಿದರೆ ಯೋಜನೆಯ ಯಶಸ್ಸಿಗೆ ಇಲ್ಲಿ ಸಾಕ್ಷಿ ದೊರಕುತ್ತದೆ.
ಉಜಿರೆ ಪೇಟೆಯಿಂದ 2 ಕಿ.ಮೀ. ದೂರದಲ್ಲಿ ಈ ಕೆರೆ ಇದೆ. 2020ರ ಕೊರೊನಾ ಸಮಯದಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ತೊಂದರೆ ಉಂಟಾಗ ಬಾರದೆಂಬ ಉದ್ದೇಶದಿಂದ ಅಂದಿನ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು ಹಾಗೂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಅವರು ಗ್ರಾಪಂ ಸದಸ್ಯರ ಜತೆಗೆ ಗ್ರಾಮದ ಕೆರೆಗಳ ಅಭಿವೃದ್ಧಿ ಕುರಿತು ಯೋಜನೆ ರಚಿಸಿದರು. ಡ್ರೋನ್ ಬಳಸಿ ಸಮೀಕ್ಷೆ ನಡೆಸಿ, ಈ ಕೆರೆಯ ಅಭಿವೃದ್ಧಿಗೆ ರೂಪುರೇಷೆ ತಯಾರಿಸಿದರು.ಲಾಕ್‌ಡೌನ್ ಸಂದರ್ಭ ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ ಒದಗಿಸುವ ನಿಟ್ಟಿನಲ್ಲಿ ಕೆರೆ ಹೂಳೆತ್ತುವ ಮಹತ್ವದ ಯೋಜನೆ ರೂಪಿಸಲಾಯಿತು. ಸ್ಥಳೀಯ 60ಕ್ಕೂ ಅಧಿಕ ಕುಟುಂಬದ ಮಹಿಳೆಯರು ನರೇಗಾದಡಿ ಈ ಕೆರೆಯ ಹೂಳೆತ್ತುವ ಮೂಲಕ ಮರು ಜೀವ ನೀಡುವ ಕೆಲಸಕ್ಕೆ ಮುಂದಾದರು.
ಈ ವೇಳೆ ಶಾಸಕ ಹರೀಶ್ ಪೂಂಜ ಕೆರೆಯ ಸಮಗ್ರ ಅಭಿವೃದ್ಧಿಗೆ ಸಣ್ಣನೀರಾವರಿ ಇಲಾಖೆ ಮೂಲಕ 1.90 ಕೋಟಿ ರು. ಅನುದಾನ ನೀಡಿದರು. ಬಳಿಕ ಕೆರೆ ಪುನಶ್ವೇತನಗೊಂಡಿತು. ತಾ.ಪಂ.ನಿಂದ 20 ಲಕ್ಷ ರು. ಅನುದಾನದಲ್ಲಿ ಕೆರೆ ಮೇಲ್ಬಾಗದ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆದಿದೆ. ಜಿ.ಪಂ.ನಿಂದ 20 ಲಕ್ಷ ರು. ಅನುದಾನದಲ್ಲಿ ವಾಕಿಂಗ್ ಟ್ಯಾಕ್‌ಗೆ ಇಂಟರ್ ಲಾಕ್, ರೇಲಿಂಗ್, ನರೇಗಾದ 15 ಲಕ್ಷ ರೂ. ಅನುದಾನದಲ್ಲಿ ಕೆರೆ ಸುತ್ತ ಗಾರ್ಡನಿಂಗ್ 20 ಅಡಿಯ ಕಲ್ಲಿನ ಗೋಡೆ ನಿರ್ಮಿಸಲಾಗಿದೆ. 2,526 ಮಾನವ ದಿನಗಳು ನರೇಗಾದಡಿ ಬಳಕೆಯಾಗಿದೆ.ಅಳಿವಿನಂಚಿನಲ್ಲಿರುವ ಅನೇಕ ಪಾರಂಪರಿಕ ಸಸ್ಯಗಳನ್ನು ಉಳಿಸುವುದು ಹಾಗೂ 100ಕ್ಕೂ ಹೆಚ್ಚು ಔಷಧ ಸಸ್ಯಗಳನ್ನು ಪೋಷಿಸುವ ನೆಲೆಯಲ್ಲಿ ಅರಣ್ಯ ಇಲಾಖೆ ಇಲ್ಲಿ ಪವಿತ್ರ ವನ ನಿರ್ಮಿಸಲಿದೆ.-----------------ಕೆರೆ ಪರಿಸರದಲ್ಲಿ 11 ಎಕರೆ ಇತರ ಸ್ಥಳವಿದ್ದು, ಇದರಲ್ಲಿ ಉದ್ಯಾನ ವನ, ಪವಿತ್ರವನ ಎಂಆರ್‌ಎಫ್ ತ್ಯಾಜ್ಯ ಸಂಸ್ಕರಣೆ ಘಟಕ, ಮಕ್ಕಳ ಪಾರ್ಕ್ ನಿರ್ಮಾಣ ಉದ್ದೇಶ ಹೊಂದಲಾಗಿದೆ. ಇದರಲ್ಲಿ ಎಂಆರ್ ಎಫ್ ತ್ಯಾಜ್ಯ ಸಂಸ್ಕರಣೆ ಘಟಕ ಈಗಾಗಲೇ ನಿರ್ಮಾಣಗೊಂಡಿದೆ.
-ಪ್ರಕಾಶ್ ಶೆಟ್ಟಿ ನೊಚ್ಚ ಪಿಡಿಒ........................ಉಜಿರೆಯ ಬೆಳವಣಿಗೆಗೆ ಪೂರಕ ವಾಗಿ ಕೆರೆಯನ್ನು ಪ್ರವಾಸಿ ತಾಣ ವಾಗಿಸುವಲ್ಲಿ ಪ್ರಯತ್ನ ಸಾಗಿದೆ. ಇದಕ್ಕಾಗಿ ಹಲವು ಇಲಾಖೆಗಳ ಸಹಕಾರ ಕೋರಲಾಗಿದೆ.
-ಭವಾನಿ ಶಂಕರ್, ಇಒ, ತಾಪಂ, ಬೆಳ್ತಂಗಡಿ..............
ಅತ್ತಾಜೆ ಕೆರೆಯನ್ನು ಮಾದರಿ ಉದ್ಯಾನವನವಾಗಿ ಅಭಿವೃದ್ಧಿಪಡಿ ಸುವ ಇರಾದೆ ಗ್ರಾ.ಪಂ.ನದ್ದಾಗಿದೆ. ಅನುದಾನದ ಆಧಾರದಲ್ಲಿ ಹಂತ ಹಂತ ವಾಗಿ ಕಾಮಗಾರಿ ನಡೆಸಲಾಗುವುದು. ಒಟ್ಟು 4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಚಿಂತನೆ ಇದೆ.-ಉಷಾಕಿರಣ ಕಾರಂತ್, ಅಧ್ಯಕ್ಷೆ, ಗ್ರಾಪಂ, ಉಜಿರೆ.