ಸುಪಾರಿ ಸ್ಕೆಚ್ ಶಂಕೆ । ಆರು ಮಂದಿ ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿಕನ್ನಡಪ್ರಭ ವಾರ್ತೆ ಅಂಕೋಲಾ
ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಗೃಹ ಸಚಿವರ ಆಪ್ತರೂ ಆಗಿರುವ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಬುಧವಾರ ಹಾಡಹಗಲೇ ಸುಪಾರಿ ಹಂತಕರು ಎನ್ನಲಾದ ಆರು ಜನ ದುಷ್ಕರ್ಮಿಗಳ ಗುಂಪು ಮಾರಣಾಂತಿಕವಾಗಿ ದಾಳಿ ನಡೆಸಿದ್ದು, ಅಂಕೋಲಾ ಸೇರಿದಂತೆ ಉತ್ತರ ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಿದೆ.ದೇಹದ ಹಲವೆಡೆ ಚಾಕು ಇರಿತಕ್ಕೊಳಗಾದ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಗಿದೆ.ನಡೆದದ್ದೇನು..?:ಗೋಪಾಲಕೃಷ್ಣ ನಾಯಕ್ ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಬಳಿ ತಮ್ಮ ಕಾರಿನಿಂದ ಇಳಿದು ಕಟಿಂಗ್ ಮಾಡಿಸಿಕೊಳ್ಳಲು ಶಾಪ್‌ಗೆ ತೆರಳುತ್ತಿದ್ದಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ಆರು ದುಷ್ಕರ್ಮಿಗಳ ಗುಂಪು ಏಕಾಏಕಿ ಚಾಕುವಿನಿಂದ ಇರಿದಿದ್ದಾರೆ. ಇದನ್ನು ಹತ್ತಿರದಿಂದ ಕಂಡಿದ್ದ ಎದುರು ಮನೆಯ ಸುಜಾತಾ ಶ್ರೀನಿವಾಸ ನಾಯ್ಕ ದೊಡ್ಡದಾಗಿ ಬೊಬ್ಬೆ ಹಾಕಿದ್ದಾರೆ.
ಈ ಸಂದರ್ಭ ಗೋಪಾಲಕೃಷ್ಣ ಸಮಯಪ್ರಜ್ಞೆ ಮೆರೆದು ತಕ್ಷಣವೇ ಸಮೀಪದಲ್ಲಿದ್ದ ಬ್ಯಾಂಕ್‌ವೊಂದರೊಳಗೆ ಓಡಿಹೋಗಿ, ಒಳಗಿನಿಂದ ಬಾಗಿಲು ಹಾಕಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪಕ್ಕಾ ಪ್ಲಾನ್ ಮಾಡಿ ಸ್ಕೆಚ್ದಾಳಿಕೋರರು ಗೋವಾ ನೋಂದಣಿಯ ಕಾರು ಹಾಗೂ ಬೆಳಗಾವಿ ನೊಂದಣಿಯ ಬೈಕ್ ಬಳಸಿ ಕೃತ್ಯವೆಸಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಅಪರಿಚಿತ ಗ್ಯಾಂಗ್ ಕಳೆದ ಮೂರು ದಿನಗಳಿಂದ ಅಂಕೋಲಾ ಪಟ್ಟಣದ ಹೆದ್ದಾರಿ ಅಂಚಿನ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿತ್ತು. ಗೋಪಾಲಕೃಷ್ಣ ನಾಯಕ್ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸಿ, ಪಕ್ಕಾ ಸ್ಕೆಚ್ ಹಾಕಿಯೇ ಈ ದಾಳಿ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.ಈ ಭೀಕರ ದಾಳಿಯಲ್ಲಿ ಅವರ ತಲೆ ಭಾಗದಲ್ಲಿ ಮೂರು ಕಡೆ ಹಾಗೂ ಎರಡು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಹಾಗೆ ಗೋಪಾಲಕೃಷ್ಣ ನಾಯಕ ಜೊತೆಗಿದ್ದ ಅವರ ಸ್ನೇಹಿತ ರಾಘವೇಂದ್ರ ನಾಯಕ ತಲೆಭಾಗಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಡಿವೈಎಸ್ಪಿ ಗಿರೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸುಪಾರಿ ಕೊಟ್ಟವರು ಯಾರು...? ಗೋಪಾಲಕೃಷ್ಣ ನಾಯಕ ಹತ್ಯೆಗೆ ಸುಪಾರಿ ಪಡೆದು ಕೃತ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ಹತ್ಯೆಯ ಪ್ರಯತ್ನಕ್ಕೆ ರಾಜಕೀಯ ಅಥವಾ ರಿಯಲ್ ಎಸ್ಟೇಟ್ ವ್ಯವಹಾರ ಕಾರಣವೇ ಎಂದು ತನಿಖೆ ನಡೆಸಲಾಗುತ್ತಿದೆ.
ಆತಂಕದಲ್ಲಿ ಅಂಕೋಲಾ ಜನತೆ2014ರಲ್ಲಿ ಅದಿರು ಉದ್ಯಮಿ ಆರ್.ಎನ್. ನಾಯಕ ಅವರನ್ನು ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿಯೇ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಈಗ ಮತ್ತೆ ಹಾಡುಹಗಲೇ ದುಷ್ಕರ್ಮಿಗಳ ತಂಡ ಅಟ್ಟಹಾಸ ಮೆರೆದಿರುವುದು ಜನತೆಯನ್ನು ಇನ್ನಷ್ಟು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನಾಗರಿಕರ ಆತಂಕವನ್ನು ದೂರ ಮಾಡಬೇಕಿದೆ.ನಾಲ್ವರ ಆರೋಪಿಗಳ ವಶಕ್ಕೆ..?ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕಾರವಾರದ ಮಾಜಾಳಿಯ ಚೆಕಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.