ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಯತ್ನ, ಬಿಜೆಪಿಗರು ವಶಕ್ಕೆ

| Published : Feb 29 2024, 02:01 AM IST

ಸಾರಾಂಶ

ಅಟಲ್‌ ಬಿಹಾರಿ ವಾಜಪೇಯಿ ವೃತ್ತದ ಬಳಿಯಿಂದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಮೆರ‍ವಣಿಗೆ ಮೂಲಕ ತೆರಳಲೆತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಬೀದರ್‌: ರಾಜ್ಯಸಭಾ ಚುನಾವಣೆ ಫಲಿತಾಂಶದ ನಂತರ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ನಾಸೇರ್‌ ಹುಸೇನ್‌ ಹಿಂಬಾಲಕರಿಂದ ಪಾಕ್‌ ಪರ ಘೋಷಣೆ ಕೂಗಿರುವದು ಕಾಂಗ್ರೆಸ್‌ನ ದೇಶ ವಿರೋಧಿತನ ಸ್ಪಷ್ಟಪಡಿಸುತ್ತದೆ ಎಂದು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಬಿಜೆಪಿಗರನ್ನು ಪೊಲೀಸರು ವಶಕ್ಕೆ ಪಡೆದರು.

ಬುಧವಾರ ಮಧ್ಯಾಹ್ನ ಇಲ್ಲಿನ ಶಿವನಗರ ಬಳಿಯ ಅಟಲ್‌ ಬಿಹಾರಿ ವಾಜಪೇಯಿ ವೃತ್ತದ ಬಳಿಯಿಂದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಮೆರ‍ವಣಿಗೆ ಮೂಲಕ ಬಿಜೆಪಿ ನಗರ ಅಧ್ಯಕ್ಷ ಶಶಿಧರ ಹೊಸಳ್ಳಿ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಪೂಜಾರಿ, ಮುಖಂಡರಾದ ರೇವಣ ಸಿದ್ದಪ್ಪ ಜಲಾದೆ, ರಾಜು ಚಿದ್ರಿ, ಮಹೇಶ ಪಾಲಂ, ಬಸವರಾಜ ಪವಾರ, ವೀರು ದಿವ್ಗಾಲ್, ಉಪೇಂದ್ರ ದೇಶಪಾಂಡೆ, ರೋಶನ್‌ ವರ್ಮಾ ಮತ್ತಿತರ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ತೆರಳಲೆತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೆಲ ಹೊತ್ತಿನ ನಂತರ ಬಿಡುಗಡೆಗೊಳಿಸಿದರು.

ಪಾಕ್‌ ಪರ ಘೋಷಣೆ ಕೂಗುವ ಸಂದರ್ಭದಲ್ಲಿ ಅವರ ಪಕ್ಕದಲ್ಲಿರುವ ವ್ಯಕ್ತಿಗಳು ಸಹಿತ ತಡೆಯುವುದಕ್ಕೆ ಪ್ರಯತ್ನ ಮಾಡಲಿಲ್ಲ ಹಾಗೂ ಅಲ್ಲಿಯೇ ಇದ್ದ ನಾಸೇರ್‌ ಹುಸೇನ್‌ ಸಹಿತ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ, ಪಾಕ್ ಪರ ಘೋಷಣೆ ಕುರಿತು ಪತ್ರಕರ್ತರು ಪ್ರತಿಕ್ರಿಯೆ ಕೇಳಿದಾಗ ಉತ್ತರಿಸಲು ನಿರಾಕರಿಸಿ, ಪ್ರಶ್ನೆ ಮಾಡಿದ ಮಾಧ್ಯಮ ಸಿಬ್ಬಂದಿ ಮೇಲೆಯೇ ದರ್ಪ ತೋರಿರುವುದು ನೋಡಿದರೆ ದೇಶ ದ್ರೋಹಿಗಳಿಗೆ ಬೆಂಬಲ ನೀಡಲು ಹೊರಟಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ನಾಸೇರ್‌ ಹುಸೇನ್‌ಗೆ ಚಪ್ಪಲಿ ಹಾರ ಹಾಕಿರುವಂಥ ಫೋಟೋ, ಕಾಂಗ್ರೆಸ್‌ಗೆ ಧಿಕ್ಕಾರದ ಘೋಷಣೆಯುಳ್ಳ ಫಲಕ ಹೀಗೆಯೇ ಮತ್ತಿತರ ಆಕ್ರೋಶದ ನುಡಿಗಳುಳ್ಳ ಫಲಕಗಳನ್ನು ಹಿಡಿದುಕೊಂಡು ನೂರಾರು ಜನ ಬಿಜೆಪಿಗರು ಪ್ರತಿಭಟನಾ ರ್ಯಾಲಿ ಹೊರಟಿದ್ದು ಈ ಪೈಕಿ 13ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಪಕ್ಷ ಪ್ರಮುಖರಾದ ರಾಜರೆಡ್ಡಿ ಶಾಬಾದ, ಸುಭಾಶ ಮಡಿವಾಳ, ನರೇಶನ ಗೌಳಿ, ನಿತಿನ್‌ ನವಲಕೇರಿ ನವೀನ್‌ ಚಿಟ್ಟಾ, ನೀಲೇಶ ಜಾಧವ್‌, ಸಂಜುಕುಮಾರ ಜೀರ್ಗೆ, ದಿನೇಶ ಮೂಲಗೆ, ಗೋಪಾಲ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.