ಸಾರಾಂಶ
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳ ಕೂಗಿ ಮುತ್ತಿಗೆ ಹಾಕಲು ಬಂದ ಪ್ರತಿಭಟನಾಕಾರರ ತಡೆಯಲು ಬ್ಯಾರಿಕೇಡ್ ಹಾಕಿ, ಪೊಲೀಸ್ ಠಾಣೆಗೆ ಮುತ್ತಿಗೆ ತಡೆಯಲು ಪೊಲೀಸ್ ಅಧಿಕಾರಿಗಳು 24ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರ ಪೊಲೀಸರು ವಶಕ್ಕೆ ಪಡೆದರು.
* ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ಬಿ.ಪಿ.ಹರೀಶ ನೇತೃತ್ವ
* ನಾನು ಕರ ಸೇವಕ, ನನ್ನ ಬಂಧಿಸಿ ಎಂಬ ಘೋಷಣೆ
* ಬಡಾವಣೆ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಜೊತೆ ವಾಕ್ಸಮರ * 24ಕ್ಕೂ ಹೆಚ್ಚು ಮುಖಂಡರ ವಶ, ಬಿಡುಗಡೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹುಬ್ಬಳ್ಳಿಯ ಕರ ಸೇವಕರ ಬಂಧನ ಖಂಡಿಸಿ ನಾನು ಕರ ಸೇವಕ, ನನ್ನನ್ನು ಬಂಧಿಸಿ ಎಂಬ ಘೋಷಣೆಯೊಂದಿಗೆ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಬ್ಯಾರಿಕೇಡ್‌ಗಳ ದಬ್ಬಿ, ನುಗ್ಗಲು ಯತ್ನಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಹರಿಹರ ಶಾಸಕ ಬಿ.ಪಿ.ಹರೀಶ, ಇತರೆ ಮುಖಂಡರು, ಕಾರ್ಯಕರ್ತರ ಹೋರಾಟದಿಂದ ನೂಕುನುಗ್ಗಲು ಉಂಟಾಗಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಜೊತೆ ತೀವ್ರ ವಾಕ್ಸಮರ ಏರ್ಪಟ್ಟಿದ್ದರಿಂದ 24ಕ್ಕೂ ಹೆಚ್ಚು ಮಂದಿಯ ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆಯಿತು.
ನಗರದ ಪಿಜೆ ಬಡಾವಣೆಯ ಶ್ರೀರಾಮ ಮಂದಿರ ಬಳಿಯಿಂದ ರೇಣುಕಾಚಾರ್ಯ, ಬಿ.ಪಿ.ಹರೀಶ ನೇತೃತ್ವದಲ್ಲಿ ನಾನು ಕರ ಸೇವಕ, ನನ್ನನ್ನು ಬಂಧಿಸಿ ಎಂಬ ಘೋಷಣೆಯೊಂದಿಗೆ, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳ ಕೂಗಿ ಮುತ್ತಿಗೆ ಹಾಕಲು ಬಂದ ಪ್ರತಿಭಟನಾಕಾರರ ತಡೆಯಲು ಬ್ಯಾರಿಕೇಡ್ ಹಾಕಿ, ಪೊಲೀಸ್ ಠಾಣೆಗೆ ಮುತ್ತಿಗೆ ತಡೆಯಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದ ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ, ಬಿಗುವಿನ ವಾತಾವರಣ ನಿರ್ಮಾಣವಾದ್ದರಿಂದ 24ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರ ಪೊಲೀಸರು ವಶಕ್ಕೆ ಪಡೆದರು.
ಮುಖಂಡರಾದ ಡಾ.ಟಿ.ಜಿ.ರವಿಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಎಂ.ಪಿ.ಕೃಷ್ಣಮೂರ್ತಿ ಪವಾರ್, ಎನ್.ರಾಜಶೇಖರ, ಪಿ.ಸಿ.ಮಹಾಬಲೇಶ್ವರ ಭಟ್, ಎಚ್.ಎಸ್.ಲಿಂಗರಾಜ, ಹರಿಹರದ ಚಂದ್ರಶೇಖರ ಪೂಜಾರಿ, ಕೆ.ಎಂ.ಸುರೇಶ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಆರ್.ಎಲ್.ಶಿವಪ್ರಕಾಶ ಸೇರಿ 24ಕ್ಕೂ ಹೆಚ್ಚು ಮಂದಿಯ ವಶಕ್ಕೆ ಪಡೆದು, ಇಲಾಖೆ ವಾಹನದಲ್ಲಿ ಪೊಲೀಸ್ ಪರೇಡ್ ಮೈದಾನಕ್ಕೆ ಕರೆದೊಯ್ದು, ನಂತರ ಬಿಡುಗಡೆ ಮಾಡಿದರು.
ಇದಕ್ಕೂ ಮೊದಲು ಮಾತನಾಡಿದ ರೇಣುಕಾಚಾರ್ಯ, ಹಿಂದೂ ಕಾರ್ಯಕರ್ತರ ಬಂಧಿಸಿ ಹಿಂದೂ ವಿರೋಧಿ ನೀತಿಯನ್ನು ಸಿದ್ದರಾಮಯ್ಯ ಸರ್ಕಾರ ಅನುಸರಿಸುತ್ತಿದೆ. ನಿಮಗೆ ತಾಕತ್ತಿದ್ದರೆ ನಾವೆಲ್ಲಾ ಕರ ಸೇವಕರಿದ್ದೇವೆ. ನಮ್ಮನ್ನೆಲ್ಲಾ ಬಂಧಿಸಲಿ ನೋಡೋಣ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಾ, 31 ವರ್ಷ ಹಿಂದಿನ ಘಟನೆಗೆ ಸಂಬಂಧಿಸಿ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಂಧಿಸಿದ್ದು ಖಂಡನೀಯ. ಹಿಂದೂ ಕಾರ್ಯಕರ್ತರ, ಕರ ಸೇವಕರ ಬಂಧಿಸಿ ಅಧಿಕಾರ ದುರುಪಯೋಗಪಡಿಸಿಕೊಂಡು, ಪೊಲೀಸ್ ಬಲ ಪ್ರದರ್ಶಿಸಿದರೆ, ಜನರು ತಮ್ಮ ತೋರು ಬೆರಳಲ್ಲೇ ನಿಮ್ಮನ್ನು, ನಿಮ್ಮ ಸರ್ಕಾರವನ್ನೂ ಆಟವಾಡಿಸುವ ದಿನಗಳೂ ದೂರವಿಲ್ಲ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ಕರ ಸೇವಕರು ಹೋರಾಡಿದ್ದಾರೆ. ಅದರಲ್ಲಿ ನಾನೂ ಒಬ್ಬ. ನಿಮ್ಮ ಸರ್ಕಾರಕ್ಕೆ ತಾಕತ್ತಿದ್ದರೆ ಎಲ್ಲಾ ಕರಸೇವಕರನ್ನೂ ಬಂಧಿಸಬೇಕು. ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲಿ ಕರ ಸೇವಕರನ್ನು ಬಂಧಿಸಿದರೆ ತೀವ್ರ ಸ್ವರೂಪದ ಹೋರಾಟ ನಿಶ್ಚಿತ. ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುವ ಘಟನೆಯಲ್ಲಿ ಭಾಗವಹಿಸಿದವರು, ಠಾಣೆ, ಮನೆ, ವಾಹನಗಳಿಗೆ ಬೆಂಕಿ ಹಾಕಿ, ಗಲಭೆ ಮಾಡಿದವರನ್ನು ಡಿಸಿಎಂ ಡಿ.ಕೆ.ಶಿವಕುಮಾರ ತಮ್ಮ ಬ್ರದರ್ಸ್ ಎನ್ನುತ್ತಾರೆ.
ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ತೀವ್ರ ಬರಕ್ಕೆ ತುತ್ತಾಗಿ, ಸಂಕಷ್ಟದಲ್ಲಿ ಸಿಲುಕಿದ ರೈತರಿಗೆ ಒಂದು ರು.ಪರಿಹಾರ ನೀಡುವ ಯೋಗ್ಯತೆಯೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಕರ ಸೇವಕರ ಗುರಿಯಾಗಿಸಿ ಬಂಧಿಸಿದ ಕಾಂಗ್ರೆಸ್ಸಿಗೆ ರಾಜ್ಯದ ಜನತೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ತುಷ್ಟೀಕರಣದ ರಾಜಕೀಯ ಮಾಡುತ್ತಾ, ಅಧಿಕಾರದ ಕುರ್ಚಿಯಲ್ಲಿ ಕುಳಿತ ಕಾಂಗ್ರೆಸ್‌ಗೆ ಜನರು ಕೆಳಗೆ ಇಳಿಸುವ ದಿನ ದೂರವಿಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಯುವ ಮುಖಂಡರಾದ , ಶ್ಯಾಮ ಪೈಲ್ವಾನ, ಪ್ರವೀಣ ಜಾಧವ್, ಸೋಮಶೇಖರ, ಧನುಷ್ ರೆಡ್ಡಿ, ರಾಜೇಶ್ವರಿ ಕಲ್ಲಿಂಗಪ್ಪ, ಅಣಜಿ ಬಸವರಾಜ, ದೊಡ್ಡೇಶ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿದ್ದರು. ಬಂಧಿತರನ್ನು ಪೊಲೀಸ್ ಕವಾಯಿತು ಮೈದಾನದಿಂದ ಮಧ್ಯಾಹ್ನದ ಹೊತ್ತಿಗೆ ಬಿಡುಗಡೆ ಮಾಡಲಾಯಿತು.
ಕರ ಸೇವಕರು ಕ್ರಿಮಿನಲ್‌ಗಳಲ್ಲ, ದೇಶಭಕ್ತರು
ಕರ ಸೇವಕರನ್ನು ಕಾಂಗ್ರೆಸ್ ಸರ್ಕಾರ ಅಪರಾಧಿಗಳಂತೆ ಕಾಣುತ್ತಿದೆ. ಸಿದ್ದರಾಮಯ್ಯ ಕೂಡ ಕರ ಸೇವಕರ ಕ್ರಿಮಿನಲ್ ಎನ್ನುತ್ತಾರೆ. ಕರ ಸೇವಕರು ಕ್ರಿಮಿನಲ್‌ಗಳಲ್ಲ. ದೇಶಭಕ್ತರು. ನಿಮ್ಮ ಲಾಠಿ, ಬಂದೂಕು, ಗುಂಡುಗಳಿಗೆ ಹೆದರುವವರೂ ನಾವಲ್ಲ ಎಂದು ಎಚ್ಚರಿಸಿದರು. ಇನ್ನು ಮುಂದೆ ಹಿಂದು ಸಮಾಜದ ಮುಖಂಡರು, ಕಾರ್ಯಕರ್ತರು, ಕರ ಸೇವಕರನ್ನು ಬಂಧಿಸಲು ಮುಂದಾದರೆ ತಕ್ಕ ಪಾಠ ಕಲಿಸಲಾಗುವುದು.
ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
ಸರ್ಕಾರ ಹಿಂದೂ ಸಮಾಜದ ವಿರೋಧಿ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಹೋರಾಟ ನಡೆಸಿದ್ದ ಕರ ಸೇವಕರನ್ನು ಬಂಧಿಸಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ಕಟ್ಟಾ ವಿರೋಧಿ ಎಂಬುದು ಮತ್ತೆ ಸಾಬೀತುಪಡಿಸಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ಪಾಠ ಕಲಿಸುವ ದಿನಗಳೂ ದೂರವಿಲ್ಲ.
ಎನ್.ರಾಜಶೇಖರ ನಾಗಪ್ಪ, ಬಿಜೆಪಿ ಯುವ ಮುಖಂಡ.