ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುತ್ತಿರುವ ಸಿಂಥೆಟಿಕ್ ಟರ್ಫ್ ಫುಟ್‌ ಬಾಲ್ ಮೈದಾನ ಕಾಮಗಾರಿ ವಿರೋಧಿಸಿ ಮಾಜಿ ಹಾಗೂ ಹಾಲಿ ಕ್ರೀಡಾಪಟುಗಳು, ದಲಿತ ಮಿತ್ರ ಮೇಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಬುಧವಾರ ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುತ್ತಿರುವ ಸಿಂಥೆಟಿಕ್ ಟರ್ಫ್ ಫುಟ್‌ ಬಾಲ್ ಮೈದಾನ ಕಾಮಗಾರಿ ವಿರೋಧಿಸಿ ಮಾಜಿ ಹಾಗೂ ಹಾಲಿ ಕ್ರೀಡಾಪಟುಗಳು, ದಲಿತ ಮಿತ್ರ ಮೇಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಬುಧವಾರ ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರವಾದ ಗದಗ ನಗರದ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಜಿಲ್ಲಾ ಕ್ರೀಡಾಂಗಣವೇ ಪ್ರಮುಖ ತಾಣವಾಗಿದೆ. ಪ್ರತಿವರ್ಷ ಇಲ್ಲಿ ದಸರಾ ಕ್ರೀಡಾಕೂಟ, ಸರ್ಕಾರಿ ನೌಕರರ ಕ್ರೀಡಾಕೂಟ ಸೇರಿದಂತೆ ಶಾಲಾ, ಕಾಲೇಜುಗಳ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ರೀಡಾಕೂಟಗಳು ನಡೆಯುತ್ತವೆ. ಅಲ್ಲದೆ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂತಹ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳೂ ಇದೇ ಕ್ರೀಡಾಂಗಣದಲ್ಲಿ ಜರುಗುತ್ತವೆ. ಇಂತಹ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟರ್ಫ್ ಫುಟ್‌ ಬಾಲ್ ಮೈದಾನ ನಿರ್ಮಿಸುವುದರಿಂದ ಭವಿಷ್ಯದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಿರುವ ಸ್ಥಳಾವಕಾಶ ಕಡಿಮೆಯಾಗುವ ಆತಂಕವಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ರಾಜು ಖಾನಪ್ಪನವರ, ಜಿಲ್ಲೆಯ ವಿವಿಧ ಕ್ರೀಡಾ ಸಂಘಟನೆಗಳು, ತರಬೇತುದಾರರು, ಮಾಜಿ ಹಾಗೂ ಹಾಲಿ ಕ್ರೀಡಾಪಟುಗಳು ಮತ್ತು ಸಂಬಂಧಿಸಿದ ತಜ್ಞರೊಂದಿಗೆ ಸಮಗ್ರ ಚರ್ಚೆ ನಡೆಸಿ ಅವರ ಅಭಿಪ್ರಾಯ ಪಡೆಯಬೇಕು. ಕ್ರೀಡಾಂಗಣದ ಒಟ್ಟು ವಿಸ್ತೀರ್ಣ, ವಿವಿಧ ಕ್ರೀಡೆಗಳಿಗೆ ಅಗತ್ಯವಿರುವ ಸ್ಥಳಾವಕಾಶ ಹಾಗೂ ಭವಿಷ್ಯದಲ್ಲಿ ನಡೆಯಲಿರುವ ಕ್ರೀಡಾ ಚಟುವಟಿಕೆಗಳನ್ನು ಪರಿಗಣಿಸಿ ಸಮಗ್ರ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.ಫುಟ್‌ಬಾಲ್ ಕ್ರೀಡೆಗೆ ಅಗತ್ಯ ಸೌಲಭ್ಯ ಕಲ್ಪಿಸುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ಜಿಲ್ಲಾ ಕ್ರೀಡಾಂಗಣವು ಕೇವಲ ಫುಟ್‌ ಬಾಲ್ ಕ್ರೀಡೆಗೆ ಸೀಮಿತವಾದ ಮೈದಾನವಲ್ಲ. ವಿವಿಧ ಕ್ರೀಡೆಗಳ ತರಬೇತಿ ಹಾಗೂ ಸ್ಪರ್ಧೆಗಳಿಗೆ ಇದು ಜಿಲ್ಲೆಯ ಪ್ರಮುಖ ಕ್ರೀಡಾ ಮೂಲ ಸೌಕರ್ಯವಾಗಿದೆ. ಹೀಗಾಗಿ ತರಾತುರಿಯಲ್ಲಿ ಸಿಂಥೆಟಿಕ್ ಟರ್ಫ್ ಫುಟ್‌ಬಾಲ್ ಮೈದಾನ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವುದು ಕ್ರೀಡಾಪಟುಗಳ ಆತಂಕಕ್ಕೆ ಕಾರಣವಾಗಿದೆ ಎಂದರು.

ಬೇಡಿಕೆಗಳು:

ಸಿಂಥೆಟಿಕ್ ಟರ್ಫ್ ಫುಟ್‌ಬಾಲ್ ಮೈದಾನ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕು.

ಜಿಲ್ಲೆಯ ವಿವಿಧ ಕ್ರೀಡಾ ಸಂಘಟನೆಗಳು, ತರಬೇತುದಾರರು ಹಾಗೂ ಕ್ರೀಡಾಪಟುಗಳ ಸಭೆ ಕರೆದು ಅಭಿಪ್ರಾಯ ಪಡೆಯಬೇಕು.

ವಿವಿಧ ಕ್ರೀಡೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮಗ್ರ ಕ್ರೀಡಾಂಗಣ ಯೋಜನೆ ರೂಪಿಸಬೇಕು.

ಫುಟ್‌ ಬಾಲ್ ಮೈದಾನ ಅನಿವಾರ್ಯವಾದಲ್ಲಿ ಸಿಂಥೆಟಿಕ್ ಟರ್ಫ್ ಬದಲಿಗೆ ಗ್ರಾಸ್ ಫುಟ್‌ ಬಾಲ್ ಮೈದಾನ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.

ಶಾಟ್‌ಪುಟ್, ಡಿಸ್ಕಸ್, ಜಾವೆಲಿನ್, ಹ್ಯಾಮರ್ ಥ್ರೋ ಸೇರಿದಂತೆ ಅಥ್ಲೆಟಿಕ್ಸ್‌ನ ವಿವಿಧ ವಿಭಾಗಗಳಿಗೆ ಅಗತ್ಯವಿರುವ ಸ್ಥಳವನ್ನು ಕಡ್ಡಾಯವಾಗಿ ಉಳಿಸಿಕೊಳ್ಳಬೇಕು.