ಮೈಸೂರಿನಲ್ಲಿ ಡ್ರಗ್ಸ್ ತಯಾರಿಸುತ್ತಿದ್ದವರ ಮೂಲ ಮಹಾರಾಷ್ಟ್ರ, ಗುಜರಾತ್ ಆಗಿದ್ದಾರೆ. ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರಿನಲ್ಲಿ ಸಿಕ್ಕಿರುವ 4 ಕೋಟಿ ಮೌಲ್ಯದ ಡ್ರಗ್ಸ್ ನ 390 ಕೋಟಿ ಮೌಲ್ಯದು ಎಂದು ಸುಳ್ಳು ಹರಡಿಸಲಾಗುತ್ತಿದೆ. ಇಂತಹ ಆರೋಪದ ಮೂಲಕ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿಯವರು ಎಬಿವಿಪಿ ಮೂಲಕ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ಕಾರ್ಯಕರ್ತರು ನಗರದ ದೊಡ್ಡಕೆರೆ ಸಮೀಪ ಮಂಗಳವಾರ ಪ್ರತಿಭಟಿಸಿದರು.

ಗನ್ ಹೌಸ್ ವೃತ್ತದ ಬಳಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ತೆರಳಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಸ್ತುಪ್ರದರ್ಶನ ಹೊರಾವರಣದ ಬಳಿ ತಡೆದು, ವಾಪಸ್ ಕಳುಹಿಸಿದರು.

ಈ ವೇಳೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ಎಬಿವಿಪಿ ವಿದ್ಯಾರ್ಥಿಗಳಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮನೋಭಾವನೆ ರೂಪಿಸಲು ಹೊರಟಿರುವುದು ಸರಿಯಲ್ಲ. ಮೈಸೂರಿನ ಹೆಸರು ಹಾಳು ಮಾಡುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೈಸೂರಿನಲ್ಲಿ ಡ್ರಗ್ಸ್ ತಯಾರಿಸುತ್ತಿದ್ದವರ ಮೂಲ ಮಹಾರಾಷ್ಟ್ರ, ಗುಜರಾತ್ ಆಗಿದ್ದಾರೆ. ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರಿನಲ್ಲಿ ಸಿಕ್ಕಿರುವ 4 ಕೋಟಿ ಮೌಲ್ಯದ ಡ್ರಗ್ಸ್ ನ 390 ಕೋಟಿ ಮೌಲ್ಯದು ಎಂದು ಸುಳ್ಳು ಹರಡಿಸಲಾಗುತ್ತಿದೆ. ಇಂತಹ ಆರೋಪದ ಮೂಲಕ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಗುಜರಾತ್‌ ನಲ್ಲಿ ಕಳೆದ 10 ವರ್ಷದಲ್ಲಿ 20 ಸಾವಿರ ಕೋಟಿ ಡ್ರಗ್ಸ್ ಸೀಜ್‌ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಅಷ್ಟೇ ಪ್ರಮಾಣದಲ್ಲಿ ಸೀಜ್‌ಮಾಡಿದ್ದಾರೆ. ಇಡೀ ದೇಶದಲ್ಲಿ ಶಾಖೆ ತೆರೆಯಲು ಪ್ರಯತ್ನಿಸಿ ಅದೇ ರೀತಿ ಮೈಸೂರಿನಲ್ಲೂ ಮಾಡಿದ್ದಾರೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಪೊಲೀಸ್‌, ಸರ್ಕಾರ ಹಾಗೂ ಕೇಂದ್ರ ಸೇರಿ ರಾಜ್ಯದಲ್ಲಿ ಮುಖ್ಯಮಂತ್ರಿ ವಿರುದ್ಧ ಕೆಟ್ಟ ತರಲು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‌, ಮುಸ್ಲಿಂ ವಿರುದ್ಧ ಭಾಷಣ ಮಾಡುವುದಕ್ಕೆ ಯುವಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ಯಾವೆಲ್ಲಾ ಕಾಲೇಜುಗಳು ಎಬಿವಿಪಿ ಪ್ರತಿಭಟನೆಗೆ ಮಕ್ಕಳನ್ನು ಕಳುಹಿಸುತ್ತಾರೋ ಅಂತಹ ಕಾಲೇಜುಗಳ ವಿರುದ್ಧ ಕ್ರಿಮಿನಲ್‌ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡುವುದಾಗಿ ಅವರು ಎಚ್ಚರಿಸಿದರು.

ಯುವ ಕಾಂಗ್ರೆಸ್ ನಗರಾಧ್ಯಕ್ಷ ಅಬ್ರಾರ್, ಮುಖಂಡರಾದ ಮಲ್ಲೇಶ್, ಹೇಮಂತ್, ಶಶಿಕುಮಾರ್ ಮೊದಲಾದವರು ಇದ್ದರು.

ಡ್ರಗ್ಸ್ ದಾಳಿ- 6 ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿ‌ನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಬಳಿಕ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುವ ನಗರ ಪೊಲೀಸರು, ಸೋಮವಾರ ತಡರಾತ್ರಿ ದಾಳಿ ಮಾಡಿ ಎನ್ ಡಿಪಿಎಸ್ ಕಾಯ್ದೆಯಡಿ 6 ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೆ, ಮಾದಕ ವಸ್ತುಗಳನ್ನು ಸೇವಿಸಿರುವ ಅನುಮಾದ ಮೇರೆಗೆ 71 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಮಂಡಿ ಮೊಹಲ್ಲಾ, ಸುನ್ನಿ ಚೌಕ, ಕೆಸರೆ, ಹುಡ್ಕೋ ಬಡಾವಣೆಗಳಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಎಚ್ಚರಿಕೆ ಸಂದೇಶ:

ಇನ್ನೂ ಕಾರ್ಯಾಚರಣೆ ಭಾಗವಾಗಿ ನಗರ ಪೊಲೀಸರು, ಮಾದಕ ವಸ್ತುಗಳನ್ನು ಹೊಂದಿದ್ದರೆ ಹಾಗೂ ಸೇವನೆ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶದೊಂದಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ.

ಮಾದಕ ವಸ್ತು ಸೇವನೆಯೊಂದಿಗೆ, ಮಾರಾಟ ಮತ್ತು ಸಾಗಣೆ ಮಾಡಿದರೆ ಎನ್‌ ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ಗರಿಷ್ಠ 10 ವರ್ಷ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಮಾಹಿತಿ ಇರುವ ಜಾಗೃತಿ ಫಲಕಗಳನ್ನು ಅಳವಡಿಸುತ್ತಿದ್ದಾರೆ.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಎಸಿಪಿಗಳು, ಇನ್ಸ್‌ ಪೆಕ್ಟರ್‌ ಗಳು ಮತ್ತು ಸಿಬ್ಬಂದಿ ಇದ್ದರು.