100 ಹಾಸಿಗೆ ಸಾಮರ್ಥ್ಯ ಆಸ್ಪತ್ರೆ ನಿರ್ಮಾಣಕ್ಕೆ ಯತ್ನ

| Published : Jul 22 2024, 01:18 AM IST

ಸಾರಾಂಶ

ಶಹಾಪುರ ನಗರದ ಬಾಪುಗೌಡ ಬಡಾವಣೆಯ ಏರಿಯಾದಲ್ಲಿ ಐಡಿಎಸ್‌ಎಂಟಿ ಯೋಜನೆಯ ಲೇಔಟ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಹಳೆಯ ತಹಸೀಲ್ ಕಚೇರಿ ಸ್ಥಳದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಆಸ್ಪತ್ರೆಯನ್ನು ಶೀಘ್ರದಲ್ಲೇ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ತಿಳಿಸಿದರು.

ನಗರದ ಬಾಪುಗೌಡ ಬಡಾವಣೆಯ ಏರಿಯಾದಲ್ಲಿ ಐಡಿಎಸ್‌ಎಂಟಿ ಲೇಔಟ್ ಉದ್ಘಾಟಿಸಿ ಮಾತನಾಡಿದ ಅವರು, ಲೇಔಟ್‌ನಲ್ಲಿ 84 ನಿವೇಶನಗಳಿದ್ದು, ಆದಷ್ಟು ಬೇಗ ಹರಾಜು ಪ್ರಕ್ರಿಯೆ ನಡೆಸಲಾಗುವುದು. 19 ಮೂಲೆ ನಿವೇಶನಗಳನ್ನು ಗುರುತಿಸಿ ಅವುಗಳಿಂದ ಬಂದ ಹೆಚ್ಚಿನ ಹಣವನ್ನುಅಭಿವೃದ್ಧಿಗೆ ಬಳಸಲಾಗುವುದು ಎಂದು ಮಾಹಿತಿ ನೀಡಿದರು.

ಈಗಾಗಲೇ ನಗರದಲ್ಲಿ ನೂರು ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ಇದ್ದು, ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಒದಗಿಸಲು ಕಷ್ಟವಾಗುತ್ತಿದೆ. ನಗರಕ್ಕೆ ಇನ್ನು ಹೆಚ್ಚಿನ ಸಾಮರ್ಥ್ಯದ ಆಸ್ಪತ್ರೆ ಅವಶ್ಯಕತೆ ಇರುವುದರಿಂದ ಹೆಚ್ಚುವರಿಯಾಗಿ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಆಸ್ಪತ್ರೆ ಅತೀ ಶೀಘ್ರದಲ್ಲಿ ನಿರ್ಮಾಣ ಮಾಡಲು ಸಕಲ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

1974 ರಲ್ಲಿ 94 ಎಕರೆ ಜಮೀನಿದ್ದು, ಅದರಲ್ಲಿ ಬಹುತೇಕ ವಸತಿ ನಿರ್ಮಾಣಕ್ಕೆ ಬಳಸಲಾಗಿದೆ. ನಗರಸಭೆ, ಆಶ್ರಯ ಸಮಿತಿ ಮತ್ತು ಕಂದಾಯ ಇಲಾಖೆ ಪ್ರಯತ್ನದಿಂದ ಇನ್ನು 11 ಎಕರೆ ಜಮೀನು ಉಳಿದಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು.ಲಾಭವಾಗಿದೆ. ಜಮೀನು ಹುಡುಕುವಲ್ಲಿ ಕಾರಣರಾದ ಅಧಿಕಾರಿ ಮತ್ತು ಸಮಿತಿಗೆ ಸಚಿವರು ಧನ್ಯವಾದ ತಿಳಿಸಿದರು.

ಪ್ರಸ್ತುತ 7ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಿಸಲಾಗಿದ್ದು, 84 ಪ್ಲಾಟ್‌ಗಳಿವೆ. ಇದರಲ್ಲಿ ಸಾರ್ವಜನಿಕ ಉದ್ಯಾನವನ ಹಾಗೂ ಸಿಎ ಸೈಟ್‌ಗಳನ್ನು ಬಿಡಲಾಗಿದೆ. ಲೇಔಟ್ ನಡುವೆ ಹಳ್ಳ ಹಾದು ಹೋಗಿರುವುದರಿಂದ ₹2 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದ ಅವರು ನಗರದಲ್ಲಿ ವಸತಿ ರಹಿತ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆಶ್ರಯ ನಿವೇಶನಕ್ಕಾಗಿ 100ಎಕರೆ ಜಮೀನು ಪಡೆದು ಅದರಲ್ಲಿ ವಸತಿ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು.

ಈ ವೇಳೆ ತಹಸೀಲ್ದಾರ್ ಉಮಾಕಾಂತ ಹಳ್ಳೆ, ಪೌರಾಯುಕ್ತ ರಮೇಶ್ ಬಡಿಗೇರ್, ನಗರ ಯೋಜನಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ತಿಪ್ಪಣ್ಣ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರ್, ನಗರಸಭೆ ಎಇಇ ನಾನಾಸಾಬ್, ಪರಿಸರ ಅಭಿಯಂತರ ಹರೀಶ್ ಸಜ್ಜನ್ ಶೆಟ್ಟಿ, ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ.ಪಾಟೀಲ್ ಸೇರಿದಂತೆ ಇತರರಿದ್ದರು. ಮಿನಿ ವಿಧಾನಸೌಧಕ್ಕೆ 9.5ಕೋಟಿ ಮಂಜೂರು:

ಸರಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರ 3 ಎಕರೆ ಪ್ರದೇಶದಲ್ಲಿ ₹20 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಕಾಮಗಾರಿಗೆ 9.5 ಕೋಟಿ ರು.ಮಂಜೂರಾಗಿದೆ. ಜಮೀನು ಶಿಕ್ಷಣ ಇಲಾಖೆಗೆ ವ್ಯಾಪ್ತಿಯಲ್ಲಿರುವುದರಿಂದ, ಶಿಕ್ಷಣ ಇಲಾಖೆಗೆ ಜಮೀನು ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಮಂಜೂರಾತಿ ದೊರೆಯಲಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವ ದರ್ಶನಾಪುರ ತಿಳಿಸಿದರು.