ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಾಕೃತಿಕ ವಿಕೋಪದ ಪಟ್ಟಿಯಲ್ಲಿರುವ ದೊಡ್ಡಪುಲಿಕೋಟು ಗ್ರಾಮದ ನದಿ ಪಾತ್ರದಲ್ಲೆ ರೆಸಾರ್ಟ್ ನಿರ್ಮಾಣದ ಪ್ರಯತ್ನಗಳು ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ದೊಡ್ಡಪುಲಿಕೋಟು ಗ್ರಾಮ ಹಿತ ರಕ್ಷಣಾ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಲ್ಲಮಾವಟಿ ಗ್ರಾ.ಪಂ. ಮಾಜಿ ಸದಸ್ಯ ಕರವಂಡ ಲವಾ ನಾಣಯ್ಯ, ದೊಡ್ಡಪುಲಿಕೋಟು ಮತ್ತು ಪೇರೂರು ಗ್ರಾಮದ ಸರಹದ್ದಿನಲ್ಲಿ ಕಾವೇರಿಯ ಉಪನದಿ ಕಪ್ಪೊಳೆಯ ಸಮೀಪದಲ್ಲೇ ರೆಸಾರ್ಟ್ ನಿರ್ಮಾಣಕ್ಕೆ ಭರದಿಂದ ಕೆಲಸ ಕಾರ್ಯಗಳು ನಡೆಯುತ್ತಿದೆ. ಇದನ್ನು ಸಂಬಂಧಪಟ್ಟ ಇಲಾಖೆ ತಕ್ಷಣ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಸೆ.೨೦ರ ಬಳಿಕ ಗ್ರಾಮಸ್ಥರ ಸಹಕಾರದೊಂದಿಗೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನದಿ ಪಾತ್ರದ ಬಳಿಯಲ್ಲೇ ಸರ್ಕಾರಿ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಂಡು ರೆಸಾರ್ಟ್ ನಿರ್ಮಾಣಕ್ಕೆ ಕೆಲಸ ಕಾರ್ಯಗಳು ನಡೆಯುತ್ತಿದೆ. ಇದಕ್ಕೆ ಬಲ್ಲಮಾವಟಿ ಗ್ರಾಮ ಪಂಚಾಯ್ತಿ ಆಕ್ಷೇಪಣಾ ರಹಿತ ಪತ್ರವನ್ನು ನೀಡಿಲ್ಲ. ಹೀಗಿದ್ದೂ ಕೆಲಸ ಕಾರ್ಯಗಳನ್ನು ಮುಂದುವರಿಸಲಾಗುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದ ಸಮೀಪವೇ ಗ್ರಾಮ ವ್ಯಾಪ್ತಿಯ ಸುಮಾರು ೨೫೦ ಕುಟುಂಬಗಳು ಸೇರಿದಂತೆ ಶ್ರೀ ಕೋಟೆ ಭಗವತಿ ದೇವಸ್ಥಾನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಅಂಗನವಾಡಿಗಳಿಗೆ ನೀರನ್ನೊದಗಿಸಲು ೨೦೦೩-೦೪ನೇ ಸಾಲಿನಲ್ಲಿ ನೈಸರ್ಗಿಕ ನೀರು ಸರಬರಾಜಿನ ಕೇಂದ್ರವಿದೆ. ರೆಸಾರ್ಟ್ ನಿರ್ಮಾಣವಾದಲ್ಲಿ ಜಲಮೂಲಕ್ಕೆ ತೊಂದರೆಯಾಗಲಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.ಉದ್ದೇಶಿತ ಜಾಗದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿದ್ದಲ್ಲಿ ನಮ್ಮ ಅಭ್ಯಂತರವಿರಲಿಲ್ಲ. ಆದರೆ ಹೊರ ರಾಜ್ಯದ ವ್ಯಕ್ತಿಯೊಬ್ಬರು ಇದೀಗ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಇದಕ್ಕೆ ಪೂರಕವಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಕೆ ಕಾರ್ಯವು ನಡೆದಿದೆ ಎಂದು ಮಾಹಿತಿ ನೀಡಿದರು.
ರೆಸಾರ್ಟ್ ನಿರ್ಮಾಣ ಹಿನ್ನೆಲೆ ಅಲ್ಲಿ ಕೆಲ ಬೋರ್‌ವೆಲ್‌ಗಳನ್ನು ಕೊರೆಯುವ ನಿಟ್ಟಿನ ಪ್ರಯತ್ನಗಳು ನಡೆದಿದೆ. ಈ ಎಲ್ಲ ಕಾಮಗಾರಿಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿದೆ ಎಂದು ಕಳವಳ ವ್ಯಕ್ತಪಡಿಸಿದರು.ಗ್ರಾಮ ಹಿತರಕ್ಷಣಾ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಗ್ರಾಮದ ಶ್ರೀ ಕೋಟೆ ಭಗವತಿ ದೇವಾಲಯದಲ್ಲಿ ಸಭೆ ಸೇರಿ ರೆಸಾರ್ಟ್ ನಿರ್ಮಾಣ ಕಾಮಗಾರಿಗೆ ಯಾವುದೇ ಪರವಾನಗಿ ನೀಡದಂತೆ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸುವುದಾಗಿ ತಿಳಿಸಿದರು.
ಬಲ್ಲಮಾವಟಿ ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಮುಕ್ಕಾಟಿರ ಸುತನ್ ಸುಬ್ಬಯ್ಯ, ಗ್ರಾ.ಪಂ. ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ತಕ್ಕಮುಖ್ಯಸ್ಥರಾದ ಕರವಂಡ ಎಂ. ಬೋಪಣ್ಣ, ಗ್ರಾಮಸ್ಥರಾದ ಅಪ್ಪಚ್ಚಿರ ಬಿ. ತಮ್ಮಯ್ಯ, ಕರವಂಡ ಅಪ್ಪಣ್ಣ ಸುದ್ದಿಗೋಷ್ಠಿಯಲ್ಲಿದ್ದರು.