ಸಾರಾಂಶ
ವಾಲ್ಮೀಕಿ ಹಗರಣ, ಎಂಡಿಎ 14 ನಿವೇಶನಗಳ ಹಂಚಿಕೆಯಲ್ಲಿ ಮುಖ್ಯಮಂತ್ರಿಯವರ ಪಾತ್ರ ಇಲ್ಲದಿದ್ದರೂ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ದೆಹಲಿಯಲ್ಲಿ ಸಭೆ ನಡೆಸಿ, ರಾಜಭವನ ಪ್ರವೇಶ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದರು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯನ್ನು ಗುರುವಾರ ಮಧ್ಯಾಹ್ನ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಇಲ್ಲಿನ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.ರಾಜ್ಯಪಾಲರಿಗೆ ವ್ಯಕ್ತಿಯೊಬ್ಬ ನೀಡಿದ ದೂರಿನ ಸಂಬಂಧ ತನಿಖೆ ನೆಡಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ಜಾರಿಗೊಳಿಸಿದ್ದಾರೆ. ಇದು ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಮಾಡಿರುವ ಅಪಮಾನ ಎಂದು ಅವರು ಕಿಡಿಕಾರಿದರು.ವಾಲ್ಮೀಕಿ ಹಗರಣ, ಎಂಡಿಎ 14 ನಿವೇಶನಗಳ ಹಂಚಿಕೆಯಲ್ಲಿ ಮುಖ್ಯಮಂತ್ರಿಯವರ ಪಾತ್ರ ಇಲ್ಲದಿದ್ದರೂ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ರಾಜ್ಯ, ದೇಶದ ಸಮಸ್ಯೆಗಳನ್ನು ಚರ್ಚೆ ಮಾಡದೆ ರಾಜಕೀಯ ಹಿತಾಸಕ್ತಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಸಿದ್ದರಾಮಯ್ಯ ನೇತೃತ್ವವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಮಾಡಿದೆ ಎಂದು ಅವರು ಟೀಕಿಸಿದರು.ಸರ್ಕಾರದಿಂದ ದಲಿತನಿಗೆ ಮಂಜೂರಾದ ಜಮೀನು ಖರೀದಿಸದೆ, ಹರಾಜಿನಲ್ಲಿ ಖರೀದಿ ಮಾಡಿದ್ದರೂ ಅಪಪ್ರಚಾರ ಮಾಡಲಾಗುತ್ತಿದೆ. ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಮಾಡಿ ಬದಲಿ ನಿವೇಶನ ಕೊಡಲಾಗಿದಿಯೆ ಹೊರತು ಸಿದ್ದರಾಮಯ್ಯ ಅವರ ಪ್ರಭಾವ, ಪಾತ್ರ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಎಂಡಿಎ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಹಾಜರಿದ್ದು, ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಂಡು ನಿವೇಶನ ಕೊಡಲು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಸುಳ್ಳು ವಿಚಾರಗಳನ್ನು ಮುಂದಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಗೆ ಜನಾದೇಶದ ಮೇಲೆ ನಂಬಿಕೆ ಇಲ್ಲ. ಜನಾದೇಶವನ್ನು ಪಡೆದು ಎಂದಿಗೂ ಸರ್ಕಾರ ರಚನೆ ಮಾಡದ ಬಿಜೆಪಿ, ಈಗ ಬಹುಮತ ಪಡೆದಿರುವ ಸರ್ಕಾರ ಪತನಗೊಳಿಸಲು ಯತ್ನ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.3-4 ಗುಂಪುಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಕುಟೀಲ, ಕುತಂತ್ರ ರಾಜಕಾರಣವನ್ನು ಜನರ ಎದುರು ಬಯಲು ಮಾಡುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಬಳಸಿಕೊಂಡು ಎದುರಾಳಿಗಳನ್ನು ಹಣಿಯಲು ಅವಕಾಶವನ್ನು ಕೊಡದಂತೆ ಎಚ್ಚರಿಕೆ ಸಂದೇಶ ರವಾನಿಸಲಾಗುವುದು ಎಂದು ಅವರು ಹೇಳಿದರುನೆರೆಯಿಂದಾಗಿ ನಾಡಿನ ಜನತೆ ಸಂಕಷ್ಟದಲ್ಲಿದ್ದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದರ ಬಗ್ಗೆ ಅರಿವಿಲ್ಲದೇ ಅನಗತ್ಯವಾಗಿ ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕೆ ನಾವು ಆಸ್ಪದ ಕೊಡುವುದಿಲ್ಲ ಎಂದು ಅವರು ತಿಳಿಸಿದರು.ಸಚಿವರಾದ ಕೆ. ವೆಂಕಟೇಶ್, ಜಮೀರ್ ಅಹಮದ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್, ತನ್ವೀರ್ ಸೇಠ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ವಕ್ತಾರರಾದ ಐಶ್ವರ್ಯ ಮಹದೇವ್, ಎಂ. ಲಕ್ಷ್ಮಣ ಮೊದಲಾದವರು ಇದ್ದರು.----ಕೋಟ್...ಈ ಸಮಾವೇಶ ಮಾಡುವ ಉದ್ದೇಶ ನಮಗಿರಲಿಲ್ಲ. ಬಿಜೆಪಿಯವರು ಸುಳ್ಳು ಹೇಳಲು ಹೊರಟಿರುವುದರಿಂದ ನಾವು ಜನರಿಗೆ ಸತ್ಯ ಹೇಳಲು ಸಮಾವೇಶ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವನ್ನು ಖಂಡಿಸಬೇಕಿದೆ. ಅದಕ್ಕೆ ವಾಸ್ತವತೆಯನ್ನು ಹೇಳಬೇಕು. ಕೇಂದ್ರದಲ್ಲಿ ಇರುವ ರಾಜ್ಯದ ನಾಯಕರು ನಡೆಸಿರುವ ಸಂಚು ಮತ್ತು ಅಪಪ್ರಚಾರವನ್ನು ಜನರಿಗೆ ಹೇಳಬೇಕಿದೆ.- ಕೆ. ವೆಂಕಟೇಶ್, ಪಶುಸಂಗೋಪನಾ ಸಚಿವ----ಎಂಡಿಎ ಹಗರಣದ ವಿಚಾರದಲ್ಲಿ ವಿಚಾರಣಾ ಆಯೋಗ ರಚಿಸಲಾಗಿದೆ. ವರದಿ ಬರುವ ಮುನ್ನವೇ ಬಿಜೆಪಿ ನಾಯಕರು ಮಾಡುತ್ತಿರುವ ಅಪಪ್ರಚಾರ ಸರಿಯಲ್ಲ. ಹಗರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದವರೇ ಈಗ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಎಂಡಿಎಯಲ್ಲಿ ಏನಾಗಿದೆ ಎಂಬುದನ್ನು ಮುಂದೆ ಹೇಳುವೆ.- ತನ್ವೀರ್ ಸೇಠ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ---ಕೋಟ್...ಜನಾಂದೋಲನ ಸಮಾವೇಶಕ್ಕೆ 4 ಲಕ್ಷ ಹೆಚ್ಚು ಮಂದಿ ಜನರು ಸೇರಲಿದ್ದು, ಪಕ್ಷದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಿದ್ದಾರೆ. ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ವೇದಿಕೆಗೆ ಆಗಮಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಬಿಜೆಪಿ- ಜೆಡಿಎಸ್ ಹುನ್ನಾರವನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸಶಕ್ತವಾಗಿ ರಣಕಹಳೆ ಮೊಳಗಿಸಲಿದೆ.- ಜಿ.ಸಿ. ಚಂದ್ರಶೇಖರ್, ರಾಜ್ಯಸಭಾ ಸದಸ್ಯ