ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಿಟ್ಟರೆ ದೇಶದಲ್ಲಿರುವರು ಎಲ್ಲರೂ ಹಿಂದುಗಳೇ. ಭಾರತ ಮಾತೆ ಸೇವೆ ಭಗವಂತನ ಸೇವೆಗಿಂತ ಶ್ರೇಷ್ಠ. ಭಾರತ ಮಾತೆ ಜಗತ್ ಜನನಿಯಾಗಿದ್ದಾಳೆ.
ನರೇಗಲ್ಲ: ಜಾತಿಯ ವಿಷಬೀಜ ಬಿತ್ತಿ ಹಿಂದೂ ಧರ್ಮ ಒಡೆಯಲು ಕೆಲವರು ಯತ್ನಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ಸಂಘಟಿತರಾಗಬೇಕು. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವ ಭಾವನೆ ಪ್ರತಿಯೊಬ್ಬರ ಹೃದಯದಲ್ಲಿ ಬರಬೇಕು ಎಂದು ಧರ್ಮ ಜಾಗರಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ದಿಲೀಪ್ ವೆರ್ಣೇಕರ ಹೇಳಿದರು.
ಸ್ಥಳೀಯ ಹಿರೇಮಠ ಶಾಲೆಯ ಮೈದಾನದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೂ ಸಮಾಜದಲ್ಲಿ ಏಕತೆ ಮೂಡಬೇಕು ಎಂಬ ಉದ್ದೇಶದಿಂದ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಿಟ್ಟರೆ ದೇಶದಲ್ಲಿರುವರು ಎಲ್ಲರೂ ಹಿಂದುಗಳೇ. ಭಾರತ ಮಾತೆ ಸೇವೆ ಭಗವಂತನ ಸೇವೆಗಿಂತ ಶ್ರೇಷ್ಠ. ಭಾರತ ಮಾತೆ ಜಗತ್ ಜನನಿಯಾಗಿದ್ದಾಳೆ ಎಂದು ಹೇಳಿದರು.ರಾಷ್ಟ್ರೀಯ ಸ್ವಯಂ ಸೇವಾ ಸಂಘ 40 ರಾಷ್ಟ್ರಗಳಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣ ಡಾ. ಹೆಡಗೇವಾರರು ಮಾಡಿದ ನಿಸ್ವಾರ್ಥ ಸಂಘಟನಾತ್ಮಕ ಕಾರ್ಯಗಳು. ಹಿಂದೂಗಳ ಒಗ್ಗಟ್ಟು, ದೇಶದ ಏಕತೆಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಯಾವತ್ತು ಸನ್ನದ್ಧವಾಗಿರುತ್ತದೆ. ನಮ್ಮೆಲ್ಲರ ಜವಾಬ್ದಾರಿ ಬಹಳ ಮುಖ್ಯ. ಜಾತಿ ವ್ಯವಸ್ಥೆಯಿಂದ ದೂರವಿದ್ದು, ಹಿಂದೂ ಧರ್ಮ ಎಂಬ ಪದ ಉಪಯೋಗಿಸುವುದು ಮುಖ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಾತನಾಡಿ, ಮೇಲು-ಕೀಳು ಎಂಬ ಭಾವನೆ ಮೂಡಿಸಿ, ಹಿಂದೂ ಧರ್ಮ ಒಡೆಯುವ ಹುನ್ನಾರ ನಡೆಯುತ್ತಿದೆ. ಮೊದಲು ಯಾವ ಯಾವ ಗ್ರಂಥಗಳಲ್ಲಿ ಏನು ಇದೆ ಎಂಬುದು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಎಲ್ಲರೂ ನಾವು ಒಂದು ಎಂದು ಮುನ್ನಡೆಯುವ ಕಾಲ ಬಂದಿದೆ. ಅದಕ್ಕಾಗಿ ಸಂಘಟನೆ ಬಹಳ ಮುಖ್ಯ ಎಂದು ಹೇಳಿದರು.ಹಿಂದೂ ಸಮ್ಮೇಳನ ಸಮಿತಿಯ ಹೋಬಳಿಯ ಅಧ್ಯಕ್ಷ ಬಸವರಾಜ ವೆಂಕಲಕುಂಟಿ ಮಾತನಾಡಿದರು. ಹೇಮಗಿರೀಶ್ ಹಾವಿನಾಳ, ರವಿ ದಂಡಿನ, ಆರ್.ಜಿ. ಪಾಟೀಲ, ಉಮೇಶ ಪಾಟೀಲ, ರಾಜೇಂದ್ರ ಗಚ್ಚಿನಮಠ, ಮುತ್ತಣ್ಣ ಕಡಗದ, ಮುತ್ತಣ್ಣ ಪಲ್ಲೇದ, ಉಮೇಶ ಸಂಗನಾಳಮಠ, ಜಗದೀಶ ಸಂಕನಗೌಡ್ರ, ರಾಜು ವಂಕಲಕುಂಟಿ, ಮಹದೇವಪ್ಪ ಬೇವಿನಕಟ್ಟಿ, ಆನಂದ ಕುಲಕರ್ಣಿ, ಮಂಜುನಾಥ ಹೆಗಡೆ, ರಘುನಾಥ ಕೊಂಡಿ, ಮೌನೇಶ ಹೊಸಮನಿ, ಸುರೇಶ ರಾಯಬಾಗಿ, ಮಹೇಶ ಶಿವಶಿಂಪುರ, ಮುತ್ತಣ್ಣ ಗೆದಗೇರಿ, ಶಿವಪುತ್ರಪ್ಪ ಸಂಗನಾಳ, ಈಶ್ವರ್ ಬೆಟಗೇರಿ, ಶಿವಕುಮಾರ್ ದೊಡ್ಡೂರ ಇದ್ದರು.