ಸಾರಾಂಶ
ದಾಸನದೊಡ್ಡಿ ಗ್ರಾಮದಲ್ಲಿ ದಲಿತರ ಸಭೆ ಸಮಾರಂಭಗಳಿಗೆ ಅನುಕೂಲ ಕಲ್ಪಿಸಲು ಗ್ರಾಪಂನಿಂದ 2022-23ರಲ್ಲಿ ಖಾಲಿ ನಿವೇಶನ ಗುರುತಿಸಿ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ, ಭವನ ನಿರ್ಮಾಣಕ್ಕೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಆದರೆ, ಗ್ರಾಮದ ಕೆಲ ವ್ಯಕ್ತಿಗಳು ಆ ಜಾಗವನ್ನು ಅಕ್ರಮವಾಗಿ ಕಬಳಿಸಲು ಮುಂದಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣದ ಜಾಗವನ್ನು ಕೆಲವರು ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ದಲಿತ ಹಕ್ಕುಗಳ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೃಷ್ಣ ನೇತೃತ್ವದಲ್ಲಿ ಸದಸ್ಯರು ಗುರುತಿಸಿರುವ ಜಾಗವನ್ನು ಕೆಲ ವ್ಯಕ್ತಿಗಳು ಅಕ್ರಮವಾಗಿ ಕಬಳಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್.ಕೃಷ್ಣ ಮಾತನಾಡಿ, ದಾಸನದೊಡ್ಡಿ ಗ್ರಾಮದಲ್ಲಿ ದಲಿತರ ಸಭೆ ಸಮಾರಂಭಗಳಿಗೆ ಅನುಕೂಲ ಕಲ್ಪಿಸಲು ಗ್ರಾಪಂನಿಂದ 2022-23ರಲ್ಲಿ ಖಾಲಿ ನಿವೇಶನ ಗುರುತಿಸಿ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ, ಭವನ ನಿರ್ಮಾಣಕ್ಕೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಆದರೆ, ಗ್ರಾಮದ ಕೆಲ ವ್ಯಕ್ತಿಗಳು ಆ ಜಾಗವನ್ನು ಅಕ್ರಮವಾಗಿ ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.ಭವನಕ್ಕೆ ಗುರುತಿಸಿರುವ ಜಾಗವನ್ನು ಸಂರಕ್ಷಿಸಬೇಕು. ಜಾಗ ಕಬಳಿಸಲು ಮುಂದಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಶೀಘ್ರ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಕಾಲೋನಿಗೆ ತಿರುಗಾಡುವ ರಸ್ತೆ ಮೇಲೆ ಮೇಕೆ ಹುಂಡಿ ನಿರ್ಮಿಸಿರುವುದನ್ನು ತೆರವುಗೊಳಿಸಬೇಕು. ಭವನದ ಜಾಗಕ್ಕೆ ತಕ್ಷಣವೇ ತಂತಿ ಬೇಲಿ ಅಳವಡಿಸಿಕೊಡಬೇಕು. ದಲಿತರ ಬೀದಿಯಿಂದ ಮುಖ್ಯರಸ್ತೆಯವರೆಗೆ ಸೀಮೆಂಟ್ ರಸ್ತೆ ನಿರ್ಮಿಸಬೇಕು. ಹತ್ತು ವರ್ಷಗಳ ಹಿಂದೆ ಅಂತರ್ಜಾತಿ ವಿವಾಹಿತವಾದ ಕಿರುಗಾವಲು ಗ್ರಾಮದ ಕುಮಾರ್ ಮತ್ತು ಭಾಗ್ಯ ಅವರಿಗೆ 2ನೇ ಕಂತಿನ ಒಂದು ಲಕ್ಷವನ್ನು ಶೀಘ್ರವೇ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ಅಂಬೂಜಿ, ಗ್ರಾಮ ಸಮಿತಿ ಅಧ್ಯಕ್ಷ ಎನ್.ಮಹದೇವಯ್ಯ, ಕಾರ್ಯದರ್ಶಿ ಜೆ.ಸಿದ್ದರಾಜು, ತಾಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಮ್ಮ, ಜಿಲ್ಲಾ ಸಮಿತಿ ಸದಸ್ಯ ಅಂದಾನಿಸ್ವಾಮಿ, ಭಾಗ್ಯಮ್ಮ, ಗಿರೀಶ್ ಪಾಲ್ಗೊಂಡಿದ್ದರು.