ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಪ್ರೀತಿಗೆ ಅಡ್ಡಿಯಾದನೆಂದು ವ್ಯಕ್ತಿಯೊಬ್ಬನ ಹತ್ಯೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಪ್ರಕರಣ ದಾಖಲಾದ ೨೪ ಗಂಟೆಗಳಲ್ಲಿ ಬಂಧಿಸುವಲ್ಲಿ ಕೋಲಾರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ನಗರ ಹೊರವಲಯದ ಹೊನ್ನೇನಹಳ್ಳಿ ರಾಮಸ್ವಾಮಯ್ಯ ಬಿನ್, ಲೇಟ್ ನಾರಾಯಣಪ್ಪ ಎಂಬುವವರ ಮಗಳನ್ನು ಅದೇ ಗ್ರಾಮದ ಸುನೀಲ್ ಬಿನ್, ಪ್ರಕಾಶ್ ಎಂಬ ಯುವಕನು ಪ್ರೀತಿಸುವಂತೆ ಒತ್ತಾಯಿಸಿ ಬೆದರಿಕೆ ಹಾಕುತ್ತಿದ್ದ. ಅತನಿಗೆ ಬುದ್ದಿವಾದ ಹೇಳಿದ್ದ ರಾಮಸ್ವಾಮಯ್ಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾ.೮ರಂದು ದೂರು ದಾಖಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಗಳಾದ ಹೊನ್ನೇನಹಳ್ಳಿ ಸುನೀಲ್ ಬಿನ್, ಪ್ರಕಾಶ್ ಹಾಗೂ ಈತನ ಸಹಚರರಾದ ವಿನೋಭ ನಗರದ ಯಶ್ವಂತ್ ಯಾದವ್ ಬಿನ್ ಚಂದ್ರಪ್ಪ, ಉರಿಗಿಲಿ ಮನೋಜ್ ಬಿನ್ ನಾರಾಯಣಸ್ವಾಮಿಯನ್ನು ಬಂಧಿಸಿದ್ದಾರೆ.
ಹಲ್ಲೆಗೆ ಬಳಸಲಾಗಿದ್ದ ಇನೋವ ಕಾರು, ಎರಡು ಮಚ್ಚುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಪೀತಿಗೆ ಅಡ್ಡಿ ಪಡಿಸುತ್ತಿದ್ದ ರಾಮಸ್ವಾಮಯ್ಯರನ್ನು ಮುಗಿಸಿದರೆ ತನ್ನ ಹಾದಿ ಸುಗಮವಾಗುವುದು ಎಂದು ಸುನೀಲ್ ತನ್ನ ಸಹಚರರನ್ನು ಕರೆಸಿಕೊಂಡು ಮಾ.೮ರ ಶನಿವಾರ ರಾತ್ರಿ ೯ ಗಂಟೆಯ ವೇಳೆ ಗ್ರಾಮದಲ್ಲಿ ರಾಮಸ್ವಾಮಯ್ಯ ನಡೆದು ಹೋಗುತ್ತಿದ್ದಾಗ ಕಾರನ್ನು ಡಿಕ್ಕಿ ಹೊಡೆಸಿ ಹತ್ಯೆ ಮಾಡುವ ಪ್ರಯತ್ನ ನಡೆಸಲಾಗಿತ್ತು. ಅಪಘಾತದಿಂದ ತಪ್ಪಿಸಿಕೊಂಡ ರಾಮಸ್ವಾಮಯ್ಯರನ್ನು ಕಾರಿನಿಂದ ಇಳಿದು ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಹತ್ಯೆಮಾಡಲು ಪ್ರಯತ್ನಿಸಿದ್ದರೆಂದು ದೂರಲಾಗಿತ್ತು. ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಾಂತರಾಜ್, ಪಿ.ಎಸ್.ಐ. ಭಾರತಿ ಹಾಗೂ ಸಿಬ್ಬಂದಿ ಮುರಳಿ, ರಾಜೇಶ್, ಅಂಜಿನಪ್ಪ, ಸತೀಶ್, ನವೀನ್ ಇವರ ತಂಡವು ಆರೋಪಿಗಳನ್ನು ೨೪ ತಾಸುಗಳಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಪೊಲೀಸರ ವಿಚಾರಣೆಯಲ್ಲಿ ಆರೋಪಿ ಯಶ್ವಂತ್ ಯಾದವ್ ಎಂಬಾತ ಬೆಂಗಳೂರಿನಲ್ಲಿ ಖ್ಯಾತ ಚಿತ್ರನಟ ವಜ್ರಮುನಿ ಅವರ ಅಳಿಯನನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿ ಹಣ ನೀಡದಿದ್ದರೆ ಅಪಹರಿಸುವುದಾಗಿ ಬೆದರಿಸಿದ್ದನು ಎಂಬ ವಿಚಾರವೂ ಬೆಳಕಿಗೆ ಬಂದಿದೆ.