ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೊಂಗನೂರು ಮಹದೇವಸ್ವಾಮಿ ಕಾಂಗ್ರೆಸ್ ಮುಖಂಡಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಗುರುವಾರ ನಡೆದಿದ್ದು, ಈ ಸಂಬಂಧ ದೂರು ದಾಖಲಾಗಿದೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೊಂಗನೂರು ಮಹದೇವಸ್ವಾಮಿ, ಸಿದ್ದರಾಜು ವಿರುದ್ಧ ದೂರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೊಂಗನೂರು ಮಹದೇವಸ್ವಾಮಿ ಕಾಂಗ್ರೆಸ್ ಮುಖಂಡಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಗುರುವಾರ ನಡೆದಿದ್ದು, ಈ ಸಂಬಂಧ ದೂರು ದಾಖಲಾಗಿದೆ.

ಗ್ರಾಮದ ನಿವಾಸಿ ಹಾಗೂ ಹೊಂಗನೂರು ಗ್ರಾಮ ಪಂಚಾಯ್ತಿ ಮಟ್ಟದ ಕಾಂಗ್ರೆಸ್ ಪ್ರಜಾ ಪ್ರತಿನಿಧಿ ಸಮಿತಿಯ ಅಧ್ಯಕ್ಷ ಮಹದೇವಯ್ಯ (೫೪) ಹಲ್ಲೆಯಿಂದ ತೀವ್ರ ಗಾಯಗೊಂಡು ಚಾಮರಾಜನಗರ ವೈದ್ಯಕೀಯ ಅಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಂಗನೂರು ಮಹದೇವಸ್ವಾಮಿ ಮತ್ತು ಅವರ ಸಂಬಂಧಿ ಸಿದ್ದರಾಜು ವಿರುದ್ಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ಇನ್‌ ಸ್ಪೆಕ್ಟರ್ ಸಾಗರ್ ಕಾರ್ಯಾಚರಣೆ ನಡೆಸಿ ಸಿದ್ದರಾಜುನನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ಪ್ರಮುಖ ಆರೋಪಿ ಮಹದೇವಸ್ವಾಮಿಗಾಗಿ ಶೋಧ ಮುಂದುವರಿಸಿದ್ದಾರೆ.

ಘಟನೆ ವಿವರ:

ಹೊಂಗನೂರು ಗ್ರಾಮದ ಮಹದೇವಯ್ಯ ಅವರನ್ನು ಅದೇ ಗ್ರಾಮದ ಸಿದ್ದರಾಜು ಎಂಬಾತ ಕರಿಕಲ್ಲು ವ್ಯವಹಾರ ಮಾತಾಡೋಣ ಬಾ ಎಂದು ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಗ್ರಾಮದ ಬಳಿ ಇರುವ ಹಾಸ್ಟೆಲ್ ಹಾಗೂ ಅಲ್ಲಿಂದ ಸುಮಾರು ದೂರದಲ್ಲಿರುವ ಅಂಬಳೆ ಮತ್ತು ಹೊಮ್ಮ ಹೋಗುವ ರಸ್ತೆ ಮಧ್ಯೆ ಭಾಗದಲ್ಲಿ ಇಬ್ಬರು ಹೋಗುತ್ತಿದ್ದಂತೆ ಎದುರಿಗೆ ಬೈಕ್‌ನಲ್ಲಿ ಬಂದ ಆರೋಪಿ ಮಹದೇವಸ್ವಾಮಿ ಏಕಾಏಕಿ ಜಗಳ ತೆಗೆದಿದ್ದಾನೆ. ನಾಟಕದ ಆಹ್ವಾನ ಪತ್ರಿಕೆಯಲ್ಲಿ ನಮ್ಮ ನಾಯಕರಾದ ಎಸ್. ಬಾಲರಾಜು ಹೆಸರು ಹಾಕಿಸಿಲ್ಲ. ಇದಕ್ಕೆ ನೀನೇ ಕಾರಣ ಎಂದು ಆರೋಪಿಸಿ ಕಣ್ಣಿಗೆ ಕಾರದಪುಡಿ ಎರಚಿ, ಚೂರಿಯಿಂದ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹೊಡೆದು ಪರಾರಿಯಾಗಿದ್ದಾನೆ. ಈ ಘಟನೆಯನ್ನು ಸ್ಥಳದಲ್ಲಿಯೇ ಇದ್ದ ಸಿದ್ದರಾಜು ನೋಡುತ್ತಾ ನಿಂತಿದ್ದ ಎಂದು ಮಹದೇವಯ್ಯ ದೂರಿನಲ್ಲಿ ತಿಳಿಸಿದ್ದಾರೆ.

ತಕ್ಷಣ ಗ್ರಾಮಕ್ಕೆ ಬಂದು ಅಲ್ಲಿಂದ ನೇರವಾಗಿ ಚಾ.ನಗರ ವೈದ್ಯಕೀಯ ಕಾಲೇಜು ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೇನೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಮಹದೇವಸ್ವಾಮಿ ಈ ಹಿಂದೆ ಮಾಜಿ ಶಾಸಕ ದಿ. ಎಸ್. ಜಯಣ್ಣ ಹಾಗೂ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ್‌ ಸ್ವಾಮೀಜಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದರು. ಈ ಸಂಬಂಧ ಮಹದೇವಯ್ಯ ಮತ್ತು ಇತರರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ದ್ವೇಷದ ಜೊತೆಗೆ ಮೇ ೧೧ರಂದು ಗ್ರಾಮದಲ್ಲಿ ನಡೆಯುವ ನಾಟಕದ ಆಹ್ವಾನ ಪತ್ರಿಕೆಯಲ್ಲಿ ನಮ್ಮ ನಾಯಕರಾದ ಎಸ್. ಬಾಲರಾಜು ಹೆಸರು ಹಾಕಿಸಿಲ್ಲ ಎಂದು ಕೋಪಗೊಂಡಿದ್ದ ಮಹದೇವಸ್ವಾಮಿ ಮತ್ತು ಸಿದ್ದರಾಜು ನನ್ನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು ಎಂದು ಮಹದೇವಯ್ಯ ಆರೋಪಿಸಿದ್ದಾರೆ. ಕೊಲೆಗೆ ಯತ್ನ ಮಾಡಿರುವ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಲಬೇಕೆಂದು ಮಹದೇವಯ್ಯ ದೂರಿನಲ್ಲಿ ಮನವಿ ಮಾಡಿದ್ದಾರೆ.

------------------------

ಹಲ್ಲೆಗೊಳಗಾದ ಮಹದೇವಯ್ಯ ಪೋಟೋ