ಸಾರಾಂಶ
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರಿಡುವಂತೆ ಆಗ್ರಹ ವ್ಯಕ್ತವಾಗಿದೆ. ಇದಕ್ಕಾಗಿ ಪ್ರಾಮಾಣಿಕ ಸಹಕಾರ ನೀಡುವುದಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಪ್ರಾಯೋಜಕತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಗೆ ಭಾನುವಾರ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ರಸ್ತೆ ನಾಮಕರಣದ ಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ ದೇಶದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದವರನ್ನು ಸ್ಮರಿಸುವ ಕೆಲಸಗಳಾಗುತ್ತಿವೆ. ಕರಾವಳಿ ಮೂಲದ ಡಾ. ಅಮ್ಮೆಂಬಳ ಬಾಳಪ್ಪ ಅವರು ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ನಗರದ ಮುಖ್ಯ ಭಾಗದಲ್ಲಿರುವ ಸೆಂಟ್ರಲ್ ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಗೆ ಅವರ ಹೆಸರಿಡುವ ಕೆಲಸವಾಗಿದೆ. ಮುಂದಿನ ಪೀಳಿಗೆ ಅವರನ್ನು ನೆನಪಿಸುವಂತೆ ಮಾಡಲು ಇದು ಸಹಕಾರಿಯಾಗಲಿದೆ ಎಂದರು.ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕರಾವಳಿಯ ಹೆಮ್ಮೆಯ ಪುತ್ರರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಡಾ. ಅಮ್ಮಂಬಳ ಬಾಳಪ್ಪ ಅವರ ಕೊಡುಗೆ ಅಪಾರ. ಇತಿಹಾಸ ತಿಳಿಯಬೇಕೆನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಾಗುತ್ತಿವೆ. ಹಲವಾರು ವರ್ಷಗಳಿಂದ ತುಳುನಾಡು ಹಾಗೂ ಕರಾವಳಿಗೆ ಧಾರ್ಮಿಕ ಹಾಗೂ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರ ಹೆಸರುಗಳನ್ನು ಇರಿಸಿದಾಗ ಅವರ ಕೊಡುಗೆ ಮುಂದಿನ ಪೀಳಿಗೆಗೆ ತಲುಪಲಿದೆ. ಅಮ್ಮೆಂಬಳ ಬಾಳಪ್ಪ ಅವರನ್ನು ಸ್ಮರಿಸಲು ಬೇಕಾದ ಕಾರ್ಯಗಳಾಗಬೇಕು. ಮೊದಲ ಹಂತದಲ್ಲಿ ರಸ್ತೆಗೆ ಹೆಸರಿಡುವ ಕೆಲಸವಾಗಿದೆ ಎಂದರು.ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಸೆಂಟ್ರಲ್ ರೈಲು ನಿಲ್ದಾಣಕ್ಕೆ ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರಿಡುವಂತೆ ಆಗ್ರಹಿಸಿದರು.ಮಾಜಿ ಸಚಿವ ರಮಾನಾಥ ರೈ, ಪ್ರಮುಖರಾದ ಇನಾಯತ್ ಅಲಿ, ಆರ್.ಕೆ. ಪೃಥ್ವಿರಾಜ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ, ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್, ಪಾಲಿಕೆಯ ನಿಕಟಪೂರ್ವ ಸದಸ್ಯ ಗಣೇಶ್ ಕುಲಾಲ್, ಲೀಲಾವತಿ ಪ್ರಕಾಶ್, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಉಪಾಧ್ಯಕ್ಷ ನಾರಾಯಣ ಸಿ. ಪೆರ್ನೆ, ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಕುಲಾಲ್, ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಶ್ರೀದೇವಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸದಾಶಿವ ಕುಲಾಲ್, ಶ್ರೀ ವೀರನಾರಾಯಣ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಂದರ ಕುಲಾಲ್ ಇದ್ದರು.ಪ್ರದೀಪ್ ಅತ್ತಾವರ ವಂದಿಸಿದರು. ನವೀನ್ ಪುತ್ತೂರು ಹಾಗೂ ಪ್ರವೀಣ್ ಬಸ್ತಿ ನಿರೂಪಿಸಿದರು.