ಸಾರಾಂಶ
ಭಟ್ಕಳ: ಅಭಿವೃದ್ಧಿಯೇ ನನ್ನ ಮೂಲಮಂತ್ರ, ತತ್ವ ಸಿದ್ಧಾಂತವಾಗಿದೆ. ಸರ್ಕಾರದಿಂದ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನನ್ನ ಆದ್ಯತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ತಾಲೂಕಿನ ಮಾರುಕೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಏರ್ಪಡಿಸಿದ್ದ ಜನರ ಬಳಿಗೆ ಸಚಿವ ಮಂಕಾಳ ವೈದ್ಯರ ನಡೆ ಎನ್ನುವ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರದ 5 ಗ್ಯಾರಂಟಿ ಯೋಜನೆಯಿಂದಾಗಿ ಜನತೆಗೆ ಹೆಚ್ಚಿನ ಅನುಕೂಲವಾಗಿದೆ. ಗ್ರಾಮೀಣ ಜನರ ಅಹವಾಲು ಸ್ವೀಕರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಿ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದೇನೆ. ಮಾರುಕೇರಿಯಲ್ಲಿ ಹಲವು ಸಮಸ್ಯೆಗಳಿದ್ದು, ಮಾರುಕೇರಿಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುತ್ತೇನೆಂದ ಅವರು, ಗೊಂಡರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಭರವಸೆ ನೀಡಿದರು.ಬಿಜೆಪಿ ಸರ್ಕಾರದ ನೀತಿಯಿಂದಾಗಿ ಜನರಿಗೆ ಸರಿಯಾಗಿ ಜೀವನ ನಡೆಸಲು ತೊಂದರೆ ಆಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಗತ್ಯವಸ್ತುಗಳ ಬೆಲೆ ದುಬಾರಿ ಆಗಿದೆ. ಈ ಹಿಂದಿನ ಸರ್ಕಾರದ ಸಾಧನೆ ಏನೂ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗುತ್ತಾ ಬಂದಿದ್ದು, ಇನ್ನು ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂದರು.
ಸಾರ್ವಜನಿಕರು ಸಚಿವರಿಗೆ ರಸ್ತೆ ಕಾಂಕ್ರೀಟಿಕರಣ, ಅತಿಕ್ರಮಣ ಸಕ್ರಮ, ಸೇತುವೆ, ಮನೆ ಮಂಜೂರಿ, ಕಾಡುಪ್ರಾಣಿಗಳ ಹಾವಳಿ, ಬೆಳೆ ಹಾನಿ, ಸ್ಮಶಾನ, ಆಟದ ಮೈದಾನ, ಸಮರ್ಪಕ ಬಸ್ ವ್ಯವಸ್ಥೆ, ವಾರದ ಸಂತೆ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆ, ವಿದ್ಯುತ್ ಸಮಸ್ಯೆ, ಬಿಎಸ್ಸೆನ್ನೆಲ್ ಟವರ್ ಬ್ಯಾಟರಿ, ಪಡಿತರ ಚೀಟಿ ಸಾಮಗ್ರಿ ಪಡೆಯಲು ಸರ್ವರ್ ಸಮಸ್ಯೆ ಮುಂತಾದವುಗಳ ಬಗ್ಗೆ ಮನವಿ ಸಲ್ಲಿಸಿದರು.ಸಚಿವರು ಮನವಿ ಸ್ವೀಕರಿಸಿ ಪರಿಹಾರದ ಭರವಸೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಉಪಾಧ್ಯಕ್ಷ ಎಂ.ಡಿ. ನಾಯ್ಕ, ಮಾಜಿ ಅಧ್ಯಕ್ಷ ನಾರಾಯಣ ಹೆಬ್ಬಾರ ಮಾತನಾಡಿದರು. ಮಾರುಕೇರಿ ಗ್ರಾಮ ಪಂಚಾಯಿತಿಯಿಂದಲೂ ಅಗತ್ಯ ಅಭಿವೃದ್ಧಿ ಕಾಮಗಾರಿಗಳ ಮಂಜೂರಿ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮಾರುಕೇರಿಯವರೇ ಆದ ಪತ್ರಕರ್ತ ರಾಘವೇಂದ್ರ ಹೆಬ್ಬಾರ ಅವರು ಮಾರುಕೇರಿ ಗ್ರಾಪಂ ವ್ಯಾಪ್ತಿಯ ಅಗತ್ಯ ಕಾಮಗಾರಿಗೆ ಸರ್ಕಾರದಿಂದ ₹100 ಕೋಟಿ ಅನುದಾನ ಒದಗಿಸುವಂತೆ ಸಚಿವರನ್ನು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಜನಾರ್ದನ ದೇವಡಿಗ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಊರ ಪ್ರಮುಖರಾದ ಶ್ರೀಕಂಠ ಹೆಬ್ಬಾರ, ಶಿವಾನಂದ ಹೆಬ್ಬಾರ, ಬಡಿಯಾ ಗೊಂಡ, ಮಾಸ್ತಿ ಗೊಂಡ, ಮಾದೇವ ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಮಾಸ್ತಿ ಗೊಂಡ, ಗ್ರಾಪಂ ಸದಸ್ಯರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ನಿರೂಪಿಸಿ, ವಂದಿಸಿದರು. ಸಚಿವರಿಗೆ 200ಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದರು.