ವಂಚಕರು ನಕಲಿ ದಾಖಲೆ ಸೃಷ್ಟಿಸಿ ವಕ್ಫ್ ಬೋರ್ಡಿಗೆ ಸೇರಿದ 100 ಕೋಟಿ ರುಪಾಯಿ ಮೌಲ್ಯದ 50.14 ಎಕರೆ ಜಮೀನನ್ನು ಕಬಳಿಸಲು ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ವಂಚಕರು ನಕಲಿ ದಾಖಲೆ ಸೃಷ್ಟಿಸಿ ವಕ್ಫ್ ಬೋರ್ಡಿಗೆ ಸೇರಿದ 100 ಕೋಟಿ ರುಪಾಯಿ ಮೌಲ್ಯದ 50.14 ಎಕರೆ ಜಮೀನನ್ನು ಕಬಳಿಸಲು ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ರಾಮನಗರ ತಾಲೂಕು ಕಸಬಾ ಹೋಬಳಿ ಬಿಳಗುಂಬ ಗ್ರಾಮದ ಸರ್ವೆ ನಂಬರ್ 231, 284, 285, 286, 74/14, 74/15, 74/16 ರಲ್ಲಿ ಬರುವ ಒಟ್ಟು 50.14 ಎಕರೆ ಜಮೀನನ್ನು ಕಬಳಿಸಲು ವಂಚಕರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರಿಗೆ 5 ಕೋಟಿ ರುಪಾಯಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾ ವಕ್ಫ್ ಪ್ರಭಾರ ಅಧಿಕಾರಿ ಮದೀಹಾ ಇಲಿಯಾಸ್ ನೀಡಿದ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಮನಗರ ರೈಲ್ವೆ ನಿಲ್ದಾಣ ಮುಂಭಾಗದ ಮಸ್ಜಿದ್ ಮೊಹಲ್ಲಾ ಮೇನ್ ರೋಡ್ ವಾಸಿಗಳಾದ ರಸೂಲ್ ಖಾನ್ ಪುತ್ರರಾದ ಅಜ್ಮತ್ ಉಲ್ಲಾ ಖಾನ್ , ಅಮ್ಜದ್ ಉಲ್ಲಾ ಖಾನ್ , ಆಸೀಫ್ ಉಲ್ಲಾ ಖಾನ್ ಹಾಗೂ ಫಾರೂಖ್ ಉಲ್ಲಾ ಖಾನ್ ಆರೋಪಿಗಳು. ಪ್ರಕರಣ ದಾಖಲಾಗುತ್ತಿದ್ದಂತೆ ಐವರು ವಂಚಕರ ಜೊತೆಗೆ ಕರಾರು ಮಾಡಿಕೊಂಡ ಬೆಂಗಳೂರಿನ ಯಲಹಂಕ ವಾಸಿ ಮಹಮ್ಮದ್ ನಯಿಮ್ ತಲೆಮರೆಸಿಕೊಂಡಿದ್ದಾರೆ.

ಏನಿದು ಪ್ರಕರಣ ?

ಸಾಹುಕಾರ್ ಅಬ್ದುಲ್ ನಬೀಬ್ ಸಾಬ್ 50.14 ಎಕರೆ ಜಮೀನನ್ನು 1944ರಲ್ಲಿ ಅಂಜುಮನ್ ಇಮಾಯತ್ ಇಸ್ಲಾಂ ಕಮಿಟಿಗೆ ನೋಂದಾಯಿತ ದಾನಪತ್ರ ಮಾಡಿಕೊಟ್ಟಿದ್ದಾರೆ. ಆ ಪ್ರಕಾರ ಕಮಿಟಿಯು ತನ್ನ ಹೆಸರಿಗೆ ಖಾತೆ ಮಾಡಿಕೊಂಡು ಸ್ವಾಧೀನ ಹೊಂದಿದೆ. ಈ ಸ್ವತ್ತನ್ನು ವಕ್ಫ್ ಸ್ವತ್ತು ಎಂದು ಸೇರ್ಪಡೆ ಮಾಡಬೇಕೆಂದು ಸಲ್ಲಿಸಿದ ಅರ್ಜಿ ಮೇರೆಗೆ 1968ರ ಫೆಬ್ರವರಿ 8ರಂದು ಮೈಸೂರು ಗೆಜೆಟ್ ನಲ್ಲಿ ನಮೂದಾಗಿ ಅದಕ್ಕೆ ಸಂಬಂಧಪಟ್ಟಂತೆ ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಸುಮಾರು 80 ವರ್ಷಗಳಿಂದಲೂ ಅಂಜುಮನ್ ಇಮಾಯತ್ ಇಸ್ಲಾಂ ಆಸ್ತಿಯಾಗಿ ವಕ್ಫ್ ಸ್ವತ್ತಾಗಿದೆ.

ಈ ಮಧ್ಯೆ ಜಿಲ್ಲಾ ವಕ್ಫ್ ಅಧಿಕಾರಿಗಳು ಕಚೇರಿಯ ಲೆಟರ್ ಹೆಡ್‌ನಲ್ಲಿ 2023ರ ಡಿ. 21ರಂದು ರಾಮನಗರ ತಹಸೀಲ್ದಾರ್ ಅವರಿಗೆ 50.14 ಎಕರೆ ಜಮೀನನ್ನು ವಕ್ಫ್ ಆಸ್ತಿಗಳ ಕಂದಾಯ ದಾಖಲಾತಿ ಸರಿಪಡಿಸುವ ಹಾಗೂ ವಕ್ಫ್ ಸ್ವತ್ತು ಎಂದು ನಮೂದಿಸಬೇಕೆಂದು ಅರ್ಜಿ ಸಲ್ಲಿಸಿದ್ದರು.

ವಂಚಕರು ವಕ್ಫ್ ಕಚೇರಿಯಿಂದ ತಾಲೂಕು ಕಚೇರಿಗೆ ನೀಡಿದ್ದ ಲೆಟರ್ ಹೆಡ್ , ಸೀಲ್ ಮತ್ತು ವಕ್ಫ್ ಅಧಿಕಾರಿಯ ಸಹಿಗಳನ್ನು ನಕಲು ಮಾಡಿ ರಸೂಲ್ ಖಾನ್ ಹೆಸರಿನಲ್ಲಿ ವಕ್ಫ್ ಕಚೇರಿಯಿಂದ ಸದರಿ ಸರ್ವೆ ನಂಬರ್ ಗಳ ಕುರಿತು ಜಿಲ್ಲಾ ವಕ್ಫ್ ಕಚೇರಿ ಯಾವುದೇ ಆಕ್ಷೇಪಣೆ ಹೊಂದಿಲ್ಲ ಎಂದು ಎನ್ ಒಸಿ , ಪ್ರಮಾಣ ಪತ್ರ ನೀಡಿದಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ.

ಅಲ್ಲದೆ, ತಹಸೀಲ್ದಾರ್ ರವರು ಈ ಜಮೀನು ವಕ್ಫ್ ಆಸ್ತಿಯಲ್ಲ, 9-02-1947ರಂದು ರಸೂಲ್ ಖಾನ್ ಅವರಿಗೆ ಸಿವಿಲ್ ನ್ಯಾಯಾಲಯ ಆದೇಶ ಅಸಲು ದಾವಾ ನಂಬರ್ 22-1939-40ರ ಆದೇಶದ ಪ್ರಕಾರ ಖರೀದಿಸಿದ್ದು, ಅವರೇ ಮಾಲೀಕರಾಗಿದ್ದಾರೆ ಎಂದು ನಕಲಿ ಪ್ರಮಾಣ ಪತ್ರವನ್ನು ಸೃಜನೆ ಮಾಡಿದ್ದಾರೆ.

ಈ ಸುಳ್ಳು ದಾಖಲೆಗಳ ಆಧಾರದ ಮೇಲೆಯೇ ನಾಲ್ವರು ವಂಚಕರು ಸುಮಾರು 100 ಕೋಟಿ ರುಪಾಯಿನಷ್ಟು ಬೆಲೆ ಬಾಳುವ 50.14 ಎಕರೆ ಜಮೀನನ್ನು 2025ರ ಮೇ 17ರಂದು ಬೆಂಗಳೂರಿನ ಯಲಹಂಕ ನಿವಾಸಿ ಮಹಮ್ಮದ್ ನಯಿಮ್ ಅವರೊಂದಿಗೆ 5 ಕೋಟಿ ರುಪಾಯಿಗೆ ಡೀಲ್ ಮಾಡಿದ್ದಾರೆ. ಅವರಿಂದ ಮುಂಗಡವಾಗಿ 4.50 ಕೋಟಿ ರುಪಾಯಿ ಹಣ ಪಡೆದು ಅಕ್ರಮವಾಗಿ ಕ್ರಯದ ಕರಾರು ಮಾಡಿಕೊಟ್ಟಿದ್ದಾರೆ.

ವಕ್ಫ್ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ವಕ್ಫ್ ಕಚೇರಿಯ ಲೆಟರ್ ಹೆಡ್, ಸೀಲು ಮತ್ತು ಸಹಿಯನ್ನು ದುರುಪಯೋಗ ಪಡಿಸಿಕೊಂಡು ಮಹಮ್ಮದ್ ನಯಿಮ್ ಅವರಿಗೆ ಕ್ರಯದ ಕರಾರು ಮಾಡಿಕೊಟ್ಟು, ವಕ್ಫ್ ಮಂಡಳಿಗೆ ಮೋಸ ಮಾಡಿರುವ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಕ್ಫ್ ಪ್ರಭಾರ ಅಧಿಕಾರಿ ಮದೀಹಾ ಇಲಿಯಾಸ್ ದೂರು ಸಲ್ಲಿಸಿದ್ದಾರೆ.

ಬಿಳಗುಂಬ ಗ್ರಾಮದಲ್ಲಿರುವ ವಕ್ಫ್ ಬೋರ್ಡಿಗೆ ಸೇರಿದ 50.14 ಎಕರೆ ಜಮೀನನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ. ನಕಲಿ ದಾಖಲೆ ಸೃಷ್ಟಿಸಿ ಕ್ರಯದ ಕರಾರು ಮಾಡಿಕೊಟ್ಟಿರುವ ಆರೋಪವೂ ಕೇಳಿ ಬಂದಿದೆ. ಎಸ್ಪಿ ಮತ್ತು ತಹಸೀಲ್ದಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕಿದೆ.

-ಸೈಯದ್ ಅಶ್ರಫ್, ಮಾಜಿ ರಾಜಕೀಯ ಕಾರ್ಯದರ್ಶಿ, ಮಾಜಿ ಪ್ರಧಾನಿ ವಿ.ಪಿ.ಸಿಂಗ್

ಆರೋಪಿಗಳ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ

ರಾಮನಗರ: ವಕ್ಫ್ ಬೋರ್ಡಿಗೆ ಸೇರಿದ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಕ್ರಯದ ಕರಾರು ಮಾಡಿಕೊಂಡು ಮೋಸ ಎಸಗಿರುವ ಐವರು ಆರೋಪಿಗಳ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.

ರಾಮನಗರ ರೇಲ್ವೆ ನಿಲ್ದಾಣ ಮುಂಭಾಗದ ಮಸ್ಜಿದ್ ಮೊಹಲ್ಲಾ ಮೇನ್ ರೋಡ್ ವಾಸಿಗಳಾದ ರಸೂಲ್ ಖಾನ್ ಪುತ್ರರಾದ ಅಜ್ಮತ್ ಉಲ್ಲಾ ಖಾನ್, ಅಮ್ಜದ್ ಉಲ್ಲಾ ಖಾನ್, ಆಸೀಫ್ ಉಲ್ಲಾ ಖಾನ್, ಫಾರೂಖ್ ಉಲ್ಲಾ ಖಾನ್ ಹಾಗೂ ಮಹಮ್ಮದ್ ನಯಿಮ್ ವಿರುದ್ಧ 298/2025, ಕಲಂ 336 (2), 336 (3) 318(4) ಜೊತೆಗೆ 3(5) ಬಿಎನ್ ಎಸ್ ರೀತ್ಯ ಕೇಸು ದಾಖಲಾಗಿದೆ. ನಾಲ್ವರು ಆರೋಪಿಗಳು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿ ಕೂಡ ವಜಾಗೊಂಡಿದೆ. ಇದೀಗ ಪೊಲೀಸರು ಐವರು ಆರೋಪಿಗಳ ಬಂಧನಕ್ಕಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.