ಕ್ರೈಸ್ತ್‌ರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ

| Published : Sep 16 2025, 01:00 AM IST

ಸಾರಾಂಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ. 22 ರಿಂದ ನಡೆಸಲಿರುವ ಜಾತಿ ಸಮೀಕ್ಷೆಯಲ್ಲಿ ಹಿಂದು ಧರ್ಮಕ್ಕೆ ಸೇರಿದ ಉಪಜಾತಿಗಳನ್ನು ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ತೋರಿಸುವ ದುಸ್ಸಾಹಸಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ. 22 ರಿಂದ ನಡೆಸಲಿರುವ ಜಾತಿ ಸಮೀಕ್ಷೆಯಲ್ಲಿ ಹಿಂದು ಧರ್ಮಕ್ಕೆ ಸೇರಿದ ಉಪಜಾತಿಗಳನ್ನು ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ತೋರಿಸುವ ದುಸ್ಸಾಹಸಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮವನ್ನು ಒಡೆಯುವುದೇ ಕಾಂಗ್ರೆಸ್ ಸರ್ಕಾರದ ಅಜೆಂಡಾ ಆಗಿದೆ. ಸಮೀಕ್ಷೆಗಾಗಿ ಈಗ ಪ್ರಕಟಿಸಿದ ಪಟ್ಟಿಯಲ್ಲಿ ಹಿಂದು ಧರ್ಮದ 46 ಉಪಜಾತಿಗಳು ಕ್ರೈಸ್ತ ಧರ್ಮದ ಪಟ್ಟಿಯಲ್ಲಿವೆ. ಈ ಸಮೀಕ್ಷೆ ಮೂಲಕ ಹಿಂದೂ ಧರ್ಮದ ವಿಭಜನೆಗೆ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.ಈ ಹಿಂದೆ ನಡೆಸಿದ್ದ ಸಮೀಕ್ಷೆಗಳಲ್ಲೂ ಹಿಂದುಗಳ ಮೇಲೆ ಅನ್ಯಾಯವಾಗಿತ್ತು. ಈಗ ಮತ್ತೆ ಹಿಂದುಗಳಿಗೆ ಕ್ರೈಸ್ತರ ಹಣೆ‍ಪಟ್ಟಿ ಕಟ್ಟುತ್ತಿರುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಆದೇಶ ಹಿಂದಕ್ಕೆ ಪಡೆದು, ಈಗ ಆಗಿರುವ ತಪ್ಪು ಸರಿಪಡಿಸಬೇಕು ಎಂದು ಆಗ್ರಹಿಸಿದರು.2014-15ರಲ್ಲಿ ನಡೆದ ಕಾಂತರಾಜ ವರದಿ ವೈಜ್ಞಾನಿಕವಾಗಿಲ್ಲ, ನ್ಯಾಯಸಮತ್ತವಾಗಿರಲಿಲ್ಲ. ಹಾಗಾಗಿ ಸರ್ಕಾರ 2014-15ರಲ್ಲಿ ನಡೆದ ಸಮೀಕ್ಷೆಯನ್ನು ಸರ್ಕಾರ ಕೈಬಿಟ್ಟಿದೆ. ಈಗ ರಾಜ್ಯ ಸರ್ಕಾರ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಮಾಡಲು ಮುಂದಾಗಿದೆ. 15 ದಿನಗಳ ಕಾಲ ಸಮೀಕ್ಷೆ ನಡೆಯುತ್ತೆ ಎಂದು ಹೇಳಿದ್ದಾರೆ. ಆದರೆ, ಸರ್ಕಾರದ ಪ್ರಕಟಣೆ ನೋಡಿದರೆ ಹಿಂದು ಸಮಾಜಗಳನ್ನು ಕ್ರೈಸ್ತರ ಹೆಸರಿನಿಂದ ಹೆಸರಿಸಲು ಮುಂದಾಗಿರುವುದು ಸ್ಪಷ್ಟವಾಗಿದೆ. ಸರ್ಕಾರದ ಈ ನಿಲವನ್ನು ಹಿಂದು ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದರು.ರಾಜ್ಯ ಸರ್ಕಾರದ ಈ ನಿರ್ಧಾರದ ಕುರಿತು ಚರ್ಚೆ ಮಾಡಲು ಬೆಳಗಾವಿಯ ಗಾಂಧಿ ಭವನದಲ್ಲಿ ಸೆ.17 ರಂದು 46 ಸಮಾಜಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಸರ್ಕಾರದ ಕಾಲಂನಲ್ಲಿರುವ ಕ್ರಿಶ್ಚಿಯನ್‌ ಪದ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಿಜೆ‍ಪಿ ರಾಜ್ಯ ವಕ್ತಾರ ಎಂ.ಬಿ.ಝಿರಲಿ ಮಾತನಾಡಿ, ಹಿಂದುಗಳಲ್ಲಿ ನೂರಾರು ಉಪಜಾತಿಗಳಿವೆ. ಆದರೆ, ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ಹಿಂದು ಧರ್ಮದ 46 ಉ‍ಪಜಾತಿಗಳನ್ನು ಸೇರಿಸಿದ್ದು ಅಸಾಂವಿಧಾನಿಕ ತೀರ್ಮಾನ. ಇದನ್ನು ಹಿಂದುಗಳು ಒಪ್ಪಿಕೊಂಡರೆ ಅಧಿಕೃತವಾಗಿ ಮತಾಂತರವಾದಂತೆ. ಹಾಗಾಗಿ ಕ್ರೈಸ್ತ ಧರ್ಮದ ಪಟ್ಟಿಯಲ್ಲಿ ಹಿಂದು ಉಪಜಾತಿಗಳನ್ನು ಸೇರಿಸಿದ್ದನ್ನು ಸಮೀಕ್ಷೆಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.ಗೋಷ್ಠಿಯಲ್ಲಿ ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ನಗರ ಸೇವಕ ಸಂದೀಪ ಜೀರಗ್ಯಾಳ, ಆರ್‌.ಎಸ್‌.ಮುತಗೇಕರ, ಚಂದ್ರಶೇಖರ ಸವಡಿ, ಅನಂತ ಲಾಡ ಮೊದಲಾದವರು ಉಪಸ್ಥಿತರಿದ್ದರು.