ಸಾರಾಂಶ
ಶ್ರೀಕ್ಷೇತ್ರ ಬಂಗಾರಮಕ್ಕಿಯ ವೀರಾಂಜನೇಯ ಸಭಾಭವನದಲ್ಲಿ ನಡೆದ ಸಂಸ್ಕೃತಿ ಕುಂಭ ಮಲೆನಾಡ ಉತ್ಸವದಲ್ಲಿ ಈ ಮೂಲಕ ಜಿಲ್ಲೆಗೆ ಶುಭ ಸಮಾಚಾರ ಹೊರಬಂದಿದೆ.
ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ಶ್ರೀಕ್ಷೇತ್ರ ಬಂಗಾರಮಕ್ಕಿ ವೀರಾಂಜನೇಯ ದೇವಾಲಯ ಮತ್ತು ಸುದೀಕ್ಷ ಗ್ರೂಪ್ ಆಪ್ ಕಂಪನಿಸ್ ಸಹಯೋಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ಮಲೆನಾಡು ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ.
ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯ ವೀರಾಂಜನೇಯ ಸಭಾಭವನದಲ್ಲಿ ನಡೆದ ಸಂಸ್ಕೃತಿ ಕುಂಭ ಮಲೆನಾಡ ಉತ್ಸವದಲ್ಲಿ ಈ ಮೂಲಕ ಜಿಲ್ಲೆಗೆ ಶುಭ ಸಮಾಚಾರ ಹೊರಬಂದಿದೆ. ಕಾರ್ಯಕ್ರಮ ಉದ್ಘಾಟಿಸಿದ ಸುದೀಕ್ಷ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಡಾ. ಸುಬ್ರಹ್ಮಣ್ಯ ಶರ್ಮ ಗೌರವರಂ ಅವರು, ಜಿಲ್ಲೆಯಲ್ಲಿ ಉನ್ನತ ದರ್ಜೆಯ ಆಸ್ಪತ್ರೆಯಿಲ್ಲದೇ ನೂರಾರು ಜೀವಗಳು ಆತಂಕದಿoದ ಇದ್ದು, ಇನ್ನೂ ಉತ್ತರ ಸಿಗುತ್ತಿಲ್ಲ. ಜನರ ಕೂಗಿಗೆ ಬೆಲೆಯೇ ಇಲ್ಲವಾಗಿದೆ ಎಂದು ಕ್ಷೇತ್ರದ ಮಾರುತಿ ಗುರೂಜಿ ಅವರು ನನ್ನ ಬಳಿ ಹೇಳಿಕೊಂಡು ‘ಜಿಲ್ಲೆಗೊಂದು ದಾರಿ ತೋರಿಸಿ’ ಎಂದು ಹೇಳುತ್ತಿದ್ದರು. ನನ್ನ ಸಂಸ್ಥೆ ಮತ್ತು ಶ್ರೀಕ್ಷೇತ್ರದ ಸಹಯೋಗದೊಂದಿಗೆ ಈ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸಿಕೊಡಲಾಗುವುದು. ಈಗಾಗಲೇ ಈ ಬಗ್ಗೆ ಸಿದ್ಧತೆಯ ಪ್ರಕ್ರಿಯೆಗಳು ನಡೆದಿವೆ. ಅತಿ ಶೀಘ್ರವಾಗಿ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಯ ಜನರಿಗೆ ಲಭ್ಯವಾಗಲಿದೆ. ಇದರೊಟ್ಟಿಗೆ ಅತ್ಯುತ್ತಮ ವ್ಯವಸ್ಥೆಯ ಎಂಜಿನಿಯರಿಂಗ್ ಕಾಲೇಜನ್ನೂ ಆರಂಭಿಸಲಾಗುವುದು ಎಂದು ಘೋಷಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗಳೂರಿನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಚೇತನ್ ಆರ್. ಅವರು ವೇದಿಕೆಯಲ್ಲಿ ಪ್ರಸ್ತಾಪಿತ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯೋಜನೆಗೆ ತಮ್ಮ ಆಸ್ಪತ್ರೆಯಿಂದ ಎಲ್ಲ ರೀತಿಯ ಸಹಕಾರ ಕೊಡಲಾಗುವುದು ಮತ್ತು ಕ್ಷೇತ್ರದಿಂದ ಸಿಬಿಎಸ್‌ಸಿ ಪಠ್ಯಕ್ರಮದಡಿ ನಡೆಸುತ್ತಿರುವ ಪಿಯುಸಿ ದ್ವಿತೀಯ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲಾಗುವುದು ಎಂದರು.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ, ಜಿಲ್ಲೆಗೆ ಉನ್ನತ ದರ್ಜೆಯ ಆಸ್ಪತ್ರೆಗಾಗಿ ಜನ ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಇದು ರಾಜಕೀಯ ತಿರುವು ಪಡೆದುಕೊಂಡು ಚುನಾವಣಾ ಸಮಯದ ಸರಕಾಯಿತು. ಆದರೆ ಡಾ. ಸುಬ್ರಹ್ಮಣ್ಯಂ ಅವರು ಜಿಲ್ಲೆಗೊಂದು ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಟ್ಟರೆ ಉತ್ತರ ಕನ್ನಡ ಜಿಲ್ಲೆ ಅವರಿಗೆ ಶರಣಾಗಿರುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮಾರುತಿ ಗುರೂಜಿ ಅವರು, ‘ಉತ್ತರ ಕಾಣದ ಜಲ್ಲೆ’ ಎಂದು ವಿಡಂಬನಾತ್ಮಕವಾಗಿ ಕರೆಯಲ್ಪಡುವ ಈ ಜಿಲ್ಲೆಗೆ ಅತಿ ಸನಿಹದಲ್ಲೇ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಉತ್ತಮ ದರ್ಜೆಯ ಎಂಜಿನಿಯರಿಂಗ್ ಕಾಲೇಜು ಬರುತ್ತಿರುವುದು ನಮಗೆ ಸಂತಸವಾಗಿದೆ. ಇದರೊಟ್ಟಿಗೆ ದಿವ್ಯಾಂಗರ ವಿಶ್ವವಿದ್ಯಾಲಯ ಕೂಡ ಕ್ಷೇತ್ರದ ವತಿಯಿಂದ ಆಗಲಿದೆ. ಇದು ದೇಶ ಮಾತ್ರವಲ್ಲ, ಜಾಗತಿಕವಾಗಿಯೂ ವಿಶಿಷ್ಟವಾಗಲಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರದ ಆಡಳಿತಾಧಿಕಾರಿ ಎಂ.ಎನ್. ಮಂಜುನಾಥ್ ಅವರು, ಕ್ಷೇತ್ರ ಯಾವತ್ತೂ ಜನಪರವಾಗಿ ಸ್ಪಂದಿಸುತ್ತದೆ. ಇದಕ್ಕೆ ಬಲವಾಗಿ ಡಾ. ಸುಬ್ರಹ್ಮಣ್ಯ ಅವರು ಕ್ಷೇತ್ರದ ಅಭಿಲಾಷೆಗೆ ಬೆನ್ನೆಲುಬಾದದ್ದು ಜಿಲ್ಲೆಯ ಅದೃಷ್ಟ ಎಂದರು.
ಗಣಪತಿ ಹೆಗಡೆ ಸ್ವಾಗತಿಸಿದರು. ದಯಾನಂದ ನಾಯ್ಕ ವಂದಿಸಿದರು.